ಗೋಣಿಕೊಪ್ಪಲು, ಆ. ೭ : ಪೊಲೀಸರ ಬಿಗಿ ಭದ್ರತೆ ನಡುವೆ ಕಿರುಗೂರು ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚೆಪ್ಪುಡೀರ ರಾಕೇಶ್ ಹಾಗೂ ಉಪಾಧ್ಯಕ್ಷರಾಗಿ ಬಿ.ಎಂ.ಸುನೀತ ಆಯ್ಕೆಗೊಂಡಿದ್ದಾರೆ.

ಕಿರುಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಸಿ.ಡಿ.ರಾಕೇಶ್ ಹಾಗೂ ಪಿ.ಡಿ.ಸುಮಿತ್ರ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರೂ ಕೂಡ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಈ ಹಿಂದೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಂಚಾಯಿತಿ ಸದಸ್ಯರಾಗಿದ್ದರು. ೨ನೇ ಅವಧಿಯಲ್ಲಿ ಅಧ್ಯಕ್ಷಗಿರಿಗೆ ಇವರಿಬ್ಬರ ನಡುವೆ ಪೈಪೋಟಿ ಎದುರಾಗಿತ್ತು. ಪಕ್ಷದ ವರಿಷ್ಠರು ಅಂತಿಮ ಕ್ಷಣದಲ್ಲಿ ಸಿ.ಡಿ.ರಾಕೇಶ್ ಅವರನ್ನು ಅಧ್ಯಕ್ಷಗಿರಿಗೆ ಅಂತಿಮಗೊಳಿಸಿದ್ದರು.

ಕಣದಿಂದ ಹಿಂದಕ್ಕೆ ಸರಿಯುವಂತೆ ಪಿ.ಡಿ.ಸುಮಿತ್ರ ಅವರನ್ನು ಪಕ್ಷದ ನಾಯಕರು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಅಧ್ಯಕ್ಷಗಿರಿಗೆ ಪಟ್ಟು ಹಿಡಿದ ಸುಮಿತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚುನಾವಣಾಧಿಕಾರಿಗಳಾದ ಕೆ.ಆರ್.ರಾಜೇಶ್‌ರವರು ಚುನಾವಣಾ ನಿಯಮದಂತೆ ಪ್ರಕ್ರಿಯೆ ಆರಂಭಿಸಿ ಮತದಾನ ನಡೆಸಿದರು.

ಮತದಾನ ನಡೆದ ನಂತರ ೭ ಮತ ಪಡೆದ ಸಿ.ಡಿ,ರಾಕೇಶ್ ಅಧ್ಯಕ್ಷರಾಗಿ ಗೆಲುವು ಸಾಧಿಸಿದರು. ಪಿ.ಡಿ.ಸುಮಿತ್ರ ೩ ಮತ ಪಡೆದು ಸೋಲು ಅನುಭವಿಸಿದರು. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಸುನಿತ ಏಕೈಕ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.

ಬಿಜೆಪಿ ಪಕ್ಷದ ಇಬ್ಬರೂ ಅಧ್ಯಕ್ಷಗಿರಿಗೆ ಪೈಪೋಟಿ ನೀಡಿ ಕಣದಲ್ಲಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು. ಪಕ್ಷದ ಕಾರ್ಯಕರ್ತರು ಪಂಚಾಯಿತಿಯ ಹೊರ ಭಾಗದಲ್ಲಿ ಜಮಾವಣೆ ಗೊಂಡಿದ್ದರು. ನೂತನ ಅಧ್ಯಕ್ಷರಾಗಿ ಸಿ.ಡಿ.ರಾಕೇಶ್ ಆಯ್ಕೆ ಆಗುತ್ತಿದ್ದಂತೆಯೇ ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಬಿಜೆಪಿ ಕೃಷಿ ಮೋರ್ಚದ ತಾಲೂಕು ಅಧ್ಯಕ್ಷೆ, ಶಕ್ತಿ ಕೇಂದ್ರ ಪ್ರಬಾರಿ ಮಲ್ಚೀರ ಕವಿತ ಬೋಜಪ್ಪ, ಬೂತ್ ಅಧ್ಯಕ್ಷ ಚಿರಿಯಪಂಡ ಕೀರ್ತನ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು. ಬಂದೋಬಸ್ತ್ ವೇಳೆ ಪೊನ್ನಂಪೇಟೆ ಠಾಣಾಧಿಕಾರಿಗಳಾದ ನವೀನ್, ಗೋಣಿಕೊಪ್ಪ ಠಾಣಾಧಿಕಾರಿ ಗಳಾದ ರೂಪ ಬೀರಾದರ್, ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು. ಚುನಾವಣ ಪ್ರಕ್ರಿಯೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎ.ಎ.ಶಫಿಕ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಿ.ಡಿ.ರಾಕೇಶ್ ಪ್ರಕ್ರಿಯಿಸಿ, ಪಂಚಾಯಿತಿ ಚುನಾವಣೆಯು ಮುಗಿದಿದೆ. ಮುಂದೆ ಒಗ್ಗಟ್ಟಾಗಿ ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಗ್ರಾಮದ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಈ ಹಿಂದೆ ಶಾಸಕರು ಪಂಚಾಯಿತಿ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಒದಗಿಸಿದ್ದರು. ಮುಖ್ಯ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು. ಗ್ರಾಮೀಣ ರಸ್ತೆಗಳಿಗೆ ಒತ್ತು ನೀಡಲಾಗಿತ್ತು ಎಂದರು.