*ಸಿದ್ದಾಪುರ ಆ. ೫ : ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷದ ಮಳೆಗಾಲದಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವವರೆಂದರೆ ನೆಲ್ಲಿಹುದಿಕೇರಿ ಮತ್ತು ಕರಡಿಗೋಡು ಭಾಗದ ನದಿತೀರದ ನಿವಾಸಿಗಳು. ಕಳೆದ ಅನೇಕ ವರ್ಷಗಳಿಂದ ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಕುಟುಂಬಗಳು ಪ್ರತೀ ಬಾರಿ ಜಲಾವೃತಗೊಳ್ಳುವ ಮನೆಯಿಂದ ದೂರ ಉಳಿಯಲೇಬೇಕಾಗಿದೆ. ಸ್ವಂತ ನೆಲೆ ಇದ್ದರೂ ಮಳೆಗಾಲದಲ್ಲಿ ನೆಮ್ಮದಿಯ ಬದುಕು ಇಲ್ಲದಾಗಿದೆ.

ಮಳೆ ಹೆಚ್ಚಾಯಿತೆಂದರೆ ಸಹಜವಾಗಿಯೇ ಈ ಭಾಗದ ಜನರ ಆತಂಕವೂ ಹೆಚ್ಚಾಗುತ್ತದೆ. ಪ್ರತಿವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕಾವೇರಿ ನದಿ ತುಂಬಿ ಹರಿದು ಪ್ರವಾಹ ಏರ್ಪಡುತ್ತದೆ. ಮನೆಗಳನ್ನು ಆವರಿಸಿಕೊಳ್ಳುವ ನೀರಿನಿಂದ ಬೆಲೆ ಬಾಳುವ ವಸ್ತುಗಳಿಗೆ ಮಾತ್ರವಲ್ಲ ಮನೆಗಳಿಗೂ ಹಾನಿಯಾಗುತ್ತದೆ. ೨೦೧೮- ೧೯ರಲ್ಲಿ ಉಂಟಾದ ಭಾರೀ ಪ್ರವಾಹದಿಂದ ಅನೇಕ ಮನೆಗಳು ನೆಲಸಮವಾಗಿದ್ದವು. ನಂತರದ ವರ್ಷಗಳಲ್ಲೂ ಮಳೆಯಿಂದ ಹಾನಿ ಸಂಭವಿಸುತ್ತಲೇ ಇದೆ. ನದಿ ದಡದಲ್ಲಿರುವವರಿಗೆ ಸುರಕ್ಷಿತ ಸ್ಥಳದಲ್ಲಿ ನಿವೇಶನ ಮತ್ತು ವಸತಿ ನೀಡುವ ಭರವಸೆ ದೊರೆತು ೪ ವರ್ಷಗಳೇ ಕಳೆದಿವೆ.

ಆದರೆ ಇಲ್ಲಿಯವರೆಗೆ ಸಂತ್ರಸ್ತರನ್ನು ಸ್ಥಳಾಂತರಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ. ನದಿ ಸಮೀಪ ಆಶ್ರಯ ಪಡೆದುಕೊಳ್ಳುವಾಗ ಆಡಳಿತ ವ್ಯವಸ್ಥೆಗಳು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅಲ್ಲದೆ ಮುಂದಿನ ದಿನಗಳ ಅಪಾಯದ ಕುರಿತೂ ಮುನ್ಸೂಚನೆ ನೀಡಿಲ್ಲ. ಬದಲಿಗೆ ಆಮಿಷಕ್ಕೊಳಗಾದ ಜನಪ್ರತಿನಿಧಿಗಳೇ ಇಲ್ಲಿ ಬಂದವರಿಗೆಲ್ಲ ಬೆಂಬಲವಾಗಿ ನಿಂತರು. ಆದರೆ ಇದೀಗ ತಾವು ದುಡಿದು ಲಕ್ಷ ಲಕ್ಷ ಸುರಿದು ನಿರ್ಮಿಸಿಕೊಂಡ ಮನೆಗಳಿಗೂ ಮತ್ತು ತಮ್ಮ ಜೀವಕ್ಕು ಗ್ಯಾರಂಟಿ ಇಲ್ಲದಂತಹ ಪರಿಸ್ಥಿತಿಯಲ್ಲಿ ಇಲ್ಲಿನವರಿದ್ದಾರೆ.

ಪ್ರವಾಹ ಬಂದಾಗ ಓಡಿ ಬರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂತ್ರಸ್ತ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕಾಳಜಿ ತೋರುತ್ತಾರೆಯೇ ಹೊರತು ಶಾಶ್ವತ ಪರಿಹಾರದ ಬಗ್ಗೆ ಯಾವುದೇ ಆಸಕ್ತಿ ತೋರುತ್ತಿಲ್ಲ. ಪ್ರವಾಹದಲ್ಲಿ ಸಿಲುಕಿಕೊಂಡಾಗ ಅನುಕಂಪ, ಆಹಾರ, ಬಟ್ಟೆ, ತಾತ್ಕಾಲಿಕ ಆಶ್ರಯವಷ್ಟೇ ದೊರೆಯುತ್ತದೆ. ಮಳೆನಿಂತ ಮೇಲೆ ಎಲ್ಲವೂ ಮರೆತು ಹೋಗುತ್ತದೆ. ಮತ್ತೆ ಬಂದು ಇದೇ ಮನೆಗಳಲ್ಲಿ ನೆಲೆ ನಿಲ್ಲುವ ಕುಟುಂಬಗಳಿಗೆ ನಿದ್ದೆ ಇಲ್ಲದಂತಾಗುವುದೇ ಮಳೆಗಾಲದ ದಿನಗಳಲ್ಲಿ.

ಕಾವೇರಿ ದಂಡೆಯ ಮೇಲೆ ಬಂದು ನೆಲೆ ನಿಂತಾಗಿದೆ, ಬೇಕಾದಷ್ಟು ಹಣ ಖರ್ಚು ಮಾಡಿ ಮನೆಗಳನ್ನು ನಿರ್ಮಿಸಿಕೊಂಡಾಗಿದೆ. ಇದೀಗ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಿ ಎನ್ನುವ ಪುಕ್ಕಟೆ ಸಲಹೆ ದೊರೆಯುತ್ತಿದೆ. ಅಲ್ಲದೆ ಮೂಲಭೂತ ಸೌಲಭ್ಯಗಳಿಲ್ಲದ, ತಮಗೊಪ್ಪದ ಪ್ರದೇಶಗಳಲ್ಲಿ ನಿವೇಶನಗಳನ್ನು ಗುರುತಿಸಿ ಅಲ್ಲಿಗೆ ಹೋಗುವಂತೆ ಒತ್ತಡ ಹೇರಲಾಗುತ್ತಿದೆ. ಕಳೆದ ಅನೇಕ ವರ್ಷಗಳಿಂದ ನದಿ ದಡದಲ್ಲಿಯೇ ಬದುಕು ಕಂಡುಕೊAಡಿದ್ದೇವೆ.

ಮನೆ ನಿರ್ಮಿಸಲು ಮತ್ತು ನಂತರ ಮಳೆಯಿಂದಾದ ನಷ್ಟಗಳನ್ನು ತುಂಬಲು ಸಾಲ ಮಾಡಿ ಬೇಕಾದಷ್ಟು ಹಣ ಕಳೆದುಕೊಂಡಿದ್ದೇವೆ.

(ಮೊದಲ ಪುಟದಿಂದ) ಏಕಾಏಕಿ ಹೋಗಿ ಎಂದರೆ ಹೇಗೆ ಹೋಗಲು ಸಾಧ್ಯ? ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರತಿ ಬಾರಿ ತಾತ್ಕಾಲಿಕ ಪರಿಹಾರಗಳನ್ನು ಸೂಚಿಸಿ ನಮ್ಮನ್ನು ಸಮಾಧಾನ ಪಡಿಸಲಾಗುತ್ತಿದೆ. ಸೂಕ್ತ ಪ್ರದೇಶದಲ್ಲಿ ಶಾಶ್ವತ ನೆಲೆ ಕಲ್ಪಿಸಿ ಎಂದು ಕೇಳಿಕೊಂಡರೂ ಯಾರೂ ಆಸಕ್ತಿ ತೋರುತ್ತಿಲ್ಲ ಎನ್ನುವುದು ಇಲ್ಲಿನವರ ವಾದ. ಈ ಬಾರಿ ಕೂಡ ಕಳೆದ ಒಂದು ವಾರ ಸುರಿದ ಧಾರಾಕಾರ ಮಳೆಗೆ ಪ್ರವಾಹ ಏರ್ಪಟ್ಟು ಕುಟುಂಬಗಳು ಸ್ಥಳಾಂತರಗೊಳ್ಳುವ ಅನಿವಾರ್ಯತೆ ಎದುರಾಗಿತ್ತು. ನದಿ ದಂಡೆ ನಿವಾಸಿಗಳ ಅತಂತ್ರ ಬದುಕು ಹೀಗೆ ಮುಂದುವರೆಯುತ್ತಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷö್ಯತನ ಹಲವು ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ ನಷ್ಟ ಅನುಭವಿಸುವ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿಯೇ ಸರ್ಕಾರ ಒಂದಷ್ಟು ಹಣ ಖರ್ಚು ಮಾಡುವ ಬದಲು ಸುರಕ್ಷಿತ ಪ್ರದೇಶದಲ್ಲಿ ಶಾಶ್ವತ ನೆಲೆ ಕಲ್ಪಿಸುವುದು ಸೂಕ್ತ. ಇದರಿಂದ ನೊಂದ ಕುಟುಂಬಗಳಿಗೆ ಸಮಾಧಾನ ಆಗುವುದಲ್ಲದೆ, ಕಾವೇರಿ ನದಿಯ ಸಂರಕ್ಷಣೆಯೂ ಆಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಆಶ್ರಯ ಅರಸಿ ಬರುವವರಿಂದ ನದಿ ದಂಡೆ ಒತ್ತುವರಿಯಾಗುವುದು ಕೂಡ ತಪ್ಪುತ್ತದೆ.

ಕಾವೇರಿ ನದಿ ಕಲುಷಿತಗೊಳ್ಳಬಾರದು, ಒತ್ತುವರಿಯಾಗಬಾರದು ಮತ್ತು ನದಿ ನೀರಿನ ಹರಿವಿಗೆ ಅಡ್ಡಿಯಾಗಬಾರದು ಎನ್ನುವ ಅಭಿಲಾಷೆ ಕೊಡಗಿನ ಪ್ರತಿಯೊಬ್ಬರದ್ದೂ ಆಗಿದೆ. ಆದ್ದರಿಂದ ನೂತನ ಶಾಸಕರುಗಳು ನೆಲ್ಲಿಹುದಿಕೇರಿ ಮತ್ತು ಕರಡಿಗೋಡು ಭಾಗದ ನದಿತೀರದ ನಿವಾಸಿಗಳ ಅತಂತ್ರ ಬದುಕಿಗೆ ಕೊನೆ ಹಾಡುವ ಮೂಲಕ ನದಿ ಸಂರಕ್ಷಣೆಗೂ ಆದ್ಯತೆ ನೀಡಬೇಕು ಎನ್ನುವುದು ಹಲವರ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಶಾಸಕರುಗಳು ಮಳೆಗಾಲದ ನಂತರ ವಿಶೇಷ ಸಭೆ ನಡೆಸಿ ಇಲ್ಲಿನ ಕುಟುಂಬಗಳಿಗೆ ಶಾಶ್ವತ ಪರಿಹಾರ ಸೂಚಿಸುವುದು ಅಗತ್ಯವಾಗಿದೆ. ಮುಂದಿನ ಮಳೆಗಾಲಕ್ಕೆ ಇಲ್ಲಿರುವ ಕುಟುಂಬಗಳು ನೆಮ್ಮದಿಯ ನೆಲೆಯಲ್ಲಿರಬೇಕು ಮತ್ತು ಕಾವೇರಿ ಕೂಡ ನೆಮ್ಮದಿಯಿಂದ ಮುಂದೆ ಸಾಗಬೇಕು. - ಅಂಚೆಮನೆ ಸುಧಿ