ಸಿದ್ದಾಪುರ, ಆ. ೫: ಮಾಲ್ದಾರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಮಾಲತಿ ಹಾಗೂ ಉಪಾಧ್ಯಕ್ಷರಾಗಿ ಕುಂಞಣ್ಣ ಆಯ್ಕೆಯಾಗಿದ್ದಾರೆ.
ಒಟ್ಟು ೧೮ ಸದಸ್ಯ ಬಲ ಹೊಂದಿರುವ ಗ್ರಾಮಪಂಚಾಯಿತಿಯಲ್ಲಿ ೬ ಬಿಜೆಪಿ , ೧೨ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಮೊದಲನೇ ಅವಧಿಯಲ್ಲಿ ಪ್ರವರ್ಗ (ಅ) ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಮೀರ್ ಅಧ್ಯಕ್ಷರಾಗಿದ್ದರು, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪುಷ್ಪ ಆಯ್ಕೆಯಾಗಿದ್ದರು.
ಇದೀಗ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಲತಿ ಸ್ಪರ್ಧಿಸಿ ೧೦ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸರಸ್ವತಿ ೬ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು. ಉಪಾಧ್ಯಕ್ಷ ಸ್ಥಾನವು ಮೀಸಲಾತಿ ಪ್ರವರ್ಗ(ಬಿ) ಆದ ಕಾರಣ ಚುನಾಯಿತ ಸದಸ್ಯರಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಕುಂಞಣ್ಣ ಮಾತ್ರ ಇದ್ದ ಕಾರಣ ಅವರನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕಿರಣ್ ಹಾಗೂ ಹನೀಫ ಗೈರಾಗಿದ್ದರು. ಚುನಾವಣಾ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಪ್ರೀತಿ ಚಿಕ್ಕಮಾದಯ್ಯ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮಾಲ್ದಾರೆ ವಲಯ ಕಾಂಗ್ರೆಸ್ ಅಧ್ಯಕ್ಷ ಸಜಿ ಥೋಮಸ್, ಪದಾಧಿಕಾರಿಗಳಾದ ಗಣೇಶ್ ಇನ್ನಿತರರು ಹಾಜರಿದ್ದರು.