ಗೋಣಿಕೊಪ್ಪಲು, ಆ. ೫: ತಳಿರು ತೋರಣಗಳಿಂದ ಸಿಂಗಾರಗೊAಡ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಶನಿವಾರ ಮುಂಜಾನೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಅಲ್ಲಿನ ಸಿಬ್ಬಂದಿಗಳು ಹೊಸ ಉಡುಪು ಧರಿಸಿ ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಕಚೇರಿಯ ಮುಖ್ಯದ್ವಾರದಲ್ಲಿ ಕಳಸ ಹೊತ್ತ ಮಹಿಳೆಯರು ಗಣ್ಯರನ್ನು ಬರ ಮಾಡಿಕೊಳ್ಳಲು ಎದುರು ನೋಡುತ್ತಿದ್ದರು. ಕೊಡಗು ನೂತನ ಜಿಲ್ಲಾಧಿಕಾರಿ ವೆಂಕಟ್ರಾಜರವರು ಸಮಯಕ್ಕೆ ಮೊದಲೇ ಆಗಮಿಸಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ದ.ಕೊಡಗಿನ ವಿವಿಧ ಭಾಗದಿಂದ ಸಂಘ ಸಂಸ್ಥೆಯ ಪದಾಧಿಕಾರಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳು ಹಿರಿಯ ನಾಗರಿಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಲೂಕು ಕಚೇರಿ ಆವರಣದಲ್ಲಿ ನೆರೆದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಪೊನ್ನಂಪೇಟೆ ತಾಲೂಕು ಕಚೇರಿ ಆವರಣದಲ್ಲಿ ಇಲ್ಲಿನ ಜನರ ಬಹುಕಾಲದ ಬೇಡಿಕೆಗೆ ಸರಕಾರ ಸ್ಪಂದಿಸಿದ್ದು, ಭೂಮಿ, ಸಕಾಲ ಕೇಂದ್ರ ಇಂದು ಲೋಕಾರ್ಪಣೆಗೊಂಡಿತು.
ಪೊನ್ನಂಪೇಟೆ ನೂತನ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾಗಿದ್ದ ಭೂಮಿಕೇಂದ್ರ, ಸಕಾಲ ಕೇಂದ್ರ ಹಾಗೂ ಕಡತ ಕೊಠಡಿಯ ರೆಕಾರ್ಡ್ ರೂಮ್ಗಳ ಸೇವೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಲೋಕಾರ್ಪಣೆಗೈದರು.
ಶಾಸಕರೊಂದಿಗೆ ವಿಧಾನ ಪರಿಷತ್ತಿನ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭಾಗವಹಿಸಿ ಕೈ ಜೋಡಿಸಿದರು. ನಾಗರಿಕರ ಬಹು ಬೇಡಿಕೆಯಾಗಿದ್ದ ಭೂಮಿ ಕೇಂದ್ರವನ್ನು ಉದ್ಘಾಟಿಸಿದ ಪೊನ್ನಣ್ಣ ತಮ್ಮದೆ ಜಾಗದ ಆರ್ಟಿಸಿ ದಾಖಲೆಯನ್ನು ಕಂಪ್ಯೂಟರ್ನಲ್ಲಿ ತಾವೆ ತೆಗೆಯುವ ಮೂಲಕ ಗಮನ ಸೆಳೆದರು. ಪ್ರತಿ ನಿತ್ಯವು ನಾಗರಿಕರಿಗೆ ಗುಣಮಟ್ಟದ ಸೇವೆ ನೀಡುವಂತೆ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೆಕಾರ್ಡ್ ರೂಮ್ ಅನ್ನು ಉದ್ಘಾಟಿಸಿದ ಶಾಸಕರು ಇಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಹಾಗೂ ಅಧಿಕಾರಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಡುವೆ ಹಲವು ನಾಗರಿಕರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ಲಿಖಿತವಾಗಿ ಹೇಳಿಕೊಂಡರು.
ಈಗಾಗಲೇ ವೀರಾಜಪೇಟೆ ತಹಶೀಲ್ದಾರ್ ಕಚೇರಿಯಿಂದ ಪೊನ್ನಂಪೇಟೆ ತಾಲೂಕು ಕಚೇರಿಯ ರೆಕಾರ್ಡ್ ರೂಮಿಗೆ ೩೦ ಸಾವಿರಕ್ಕೂ ಅಧಿಕ ಕಡತಗಳು ರವಾನೆಯಾಗಿದೆ. ಇದನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವುದು ಗಮನ ಸೆಳೆಯಿತು. ನಾಗರಿಕರಿಗೆ ಲಭ್ಯವಾಗುವ ಸೇವೆಗಳ ಮಾಹಿತಿಯ ಬಗ್ಗೆ ಬೋರ್ಡ್ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಪ್ರಶಾಂತ್ರವರಿಗೆ ಶಾಸಕರು ನಿರ್ದೇಶನ ನೀಡಿದರು. ೨ ದಿನದೊಳಗೆ ಈ ಕಾರ್ಯ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದರು.
ತಾಲೂಕು ಕೇಂದ್ರದಲ್ಲಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ ತಾಲೂಕು ಕೇಂದ್ರದಲ್ಲಿ ಉನ್ನತವಾದ ಕಂದಾಯ ವ್ಯವಸ್ಥೆ, ನಾಗರಿಕರಿಗೆ ನೇರವಾಗಿ ಅವಶ್ಯಕತೆಯಿರುವ ದಾಖಲೆಗಳನ್ನು ಪಡೆಯುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಈ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮಾಡಿರುವ ಕೆಲಸ ಶ್ಲಾಘನೀಯ.
(ಮೊದಲ ಪುಟದಿಂದ) ಜನರಿಗೆ ಸವಲತ್ತು ನೀಡಿದಷ್ಟು ನಮ್ಮ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಬಡ ಜನತೆಗೆ ಸೇವೆಯು ಉತ್ತಮವಾಗಿ ಲಭಿಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸಾರ್ವಜನಿಕ, ಸರ್ಕಾರಿ ಸೇವೆಯಲ್ಲಿ ನೇಮಕಗೊಂಡ ನಂತರ ಕೆಲವು ನೆಪಗಳನ್ನು ಹೇಳುತ್ತ ಸೇವೆ ನೀಡುವುದನ್ನು ಕಡಿಮೆ ಮಾಡಬಾರದು ತಮ್ಮ ಇಚ್ಚಾಶಕ್ತಿಯಿಂದ ನೌಕರರಾಗಿ ನೇಮಕಗೊಂಡು ಜವಾಬ್ದಾರಿಯನ್ನು ನಿಭಾಯಿಸುತ್ತಿರುವಿರಿ. ನಾವುಗಳು ನಾಗರಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಯಬಹುದಾಗಿದೆ. ನಮ್ಮ ನಡವಳಿಕೆಯಿಂದ ನಮ್ಮ ಗೌರವ ಕೂಡ ಹೆಚ್ಚಾಗಲಿದೆ. ಸಮಸ್ಯೆಯನ್ನು ಉದ್ಭವ ಮಾಡುವುದು ಜನ ಸಾಮಾನ್ಯರಲ್ಲ. ಇವತ್ತಿನ ಅಧಿಕಾರಿ ವರ್ಗ ಮತ್ತು ಕಾನೂನಿನಲ್ಲಿರುವ ತೊಡಕಿನಿಂದ ಸಮಸ್ಯೆ ಎದುರಾಗಿದೆ. ಇಂತಹ ಸಮಯದಲ್ಲಿ ಅಧಿಕಾರಿಗಳ ಬಳಿ ಜನರು ತೆರಳುತ್ತಾರೆ. ಇಂತಹ ಸಮಯದಲ್ಲಿ ಸೇವೆ ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಜನರಿಗೆ ಸ್ಪಂದನ ನೀಡುವ ಕೆಲಸ ಅಧಿಕಾರಿಗಳಿಂದಲೂ ಜನಪ್ರತಿನಿಧಿಗಳಿಂದಲೂ ಆಗ ಬೇಕಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ಸರ್ವೆ ಇಲಾಖೆ ಕಾರ್ಯ ನಿರ್ವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ಶೀಘ್ರ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಎಡಿಎಲ್ಆರ್ ಕಚೇರಿ ಕೂಡ ಇಲ್ಲಿಯೇ ತೆರೆÀಯಬೇಕೆಂಬ ಬಯಕೆ ಇದೆ ಎಂದು ಅಭಿಲಾಷೆ ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲೂಕು ಕಚೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಚೇರಿಯಾಗಲಿ, ಬಂದ ನಾಗರಿಕರು ಸಂತೋಷದಿAದ ತಮ್ಮ ಸಮಸ್ಯೆ ಬಗೆಹರಿದಿದೆ ಎಂಬ ವಿಶ್ವಾಸದಿಂದ ತೆರಳುವಂತಾಗಲಿ ಅಂತಹ ವಾತಾವರಣ ಈ ಕಚೇರಿಯಲ್ಲಿ ಇಂದಿನಿAದಲೇ ಆರಂಭವಾಗಲಿ ಎಂದ ಇವರು, ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆ ಅತೀ ಮುಖ್ಯವಾಗಿರಬೇಕು ಪೊನ್ನಂಪೇಟೆ ತಾಲೂಕು ರಚನೆಗೆ ಈ ನಾಡಿನ ಹಿರಿಯರು ವಿಶೇಷವಾಗಿ ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳ ಹೋರಾಟವನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ ಪೊನ್ನಂಪೇಟೆ ತಾಲೂಕು ಹೋರಾಟವು ನ್ಯಾಯ ಸಮ್ಮತವಾಗಿತ್ತು. ಹಲವಷ್ಟು ಹಿರಿಯರ ಶ್ರಮವು ಈ ಹೋರಾಟದ ಹಿಂದಿದೆ. ಇದೀಗ ಹೋರಾಟದ ಫಲವಾಗಿ ಪೊನ್ನಂಪೇಟೆ ತಾಲೂಕು ರಚನೆಯಾಗಿದೆ. ದ.ಕೊಡಗಿನ ಬಹುಜನರ ಕನಸು ನನಸಾಗಿದೆ. ಇದರ ಪ್ರಯೋಜನವನ್ನು ಈ ನಾಡಿನ ಜನರು ಪಡೆಯಬೇಕು. ಅಧಿಕಾರ ವರ್ಗವು ನಾಗರಿಕರಿಗೆ ಉತ್ತಮ ಸೇವೆ ನೀಡುವಂತಾಗಬೇಕು. ಪೊನ್ನಂಪೇಟೆ ತಾಲೂಕು ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಮಾಡಬೇಕು. ಇದರ ಜವಾಬ್ದಾರಿ ಇಲಾಖೆಯ ಅಧಿಕಾರಿಗಳ ಮೇಲಿದೆ ಎಂದರು.
ಜಿಲ್ಲಾಧಿಕಾರಿಗಳಾದ ವೆಂಕಟ್ರಾಜ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಗೆ ಇಲ್ಲಿನ ಹೋರಾಟ ಸಮಿತಿಯು ಮಾಡಿರುವ ಕೆಲಸವನ್ನು ಅರಿತ್ತಿದ್ದೇನೆ. ಸಾರ್ವಜನಿಕರಿಗೆ ಉತ್ತಮ ಸೇವೆ ಲಭ್ಯವಾಗಲು ಇಲ್ಲಿ ಹಿರಿಯರು ಆಗಿಂದ್ದಾಗ್ಗೆ ಅಧಿಕಾರಿಗಳ ಬಳಿ ತೆರಳಿ ಎಚ್ಚರಿಸುತ್ತಿದ್ದರು. ಇದೀಗ ನಾಗರಿಕರ ಸೇವೆಗೆ ಪೊನ್ನಂಪೇಟೆ ತಾಲೂಕು ಕಚೇರಿಯು ಲಭ್ಯವಾಗಿದೆ. ಹೊಸ ತಾಲೂಕು ಆದ ನಂತರ ನಾನಾ ರೀತಿಯ ಅಡೆ ತಡೆಗಳು ಇರುವುದು ಸಹಜ. ಇವುಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಪ್ರಮುಖವಾಗಿ ಭೂಮಿ ಪಹಣಿಗಳು ಎಲ್ಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಭ್ಯವಾಗಬೇಕು. ಇದೀಗ ದೂರದ ವೀರಾಜಪೇಟೆ ಕೇಂದ್ರಕ್ಕೆ ತೆರಳುವ ಅವಶ್ಯಕತೆ ಇಲ್ಲ. ಇಲ್ಲಿಯೇ ಕಡತಗಳು ಸಿಗಲಿದೆ. ಸಾರ್ವಜನಿಕರು ಇಲಾಖೆಯ ಸೇವೆಯ ಪ್ರಯೋಜನ ಪಡೆಯುವಂತಾಗಬೇಕು ಎಂದರು.
ಪೊನ್ನAಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ಚೊಟ್ಟೆಯಂಡಮಾಡ ಎನ್.ಬೋಸ್ ವಿಶ್ವನಾಥ್, ಹಿರಿಯ ನಾಗರಿಕ ವೇದಿಕೆಯ ಜಿಮ್ಮಿ ಅಯ್ಯಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಗೀತಾನಾಯ್ಡು ಕಾರ್ಯಕ್ರಮ ನಿರೂಪಿಸಿ, ತಹಶೀಲ್ದಾರ್ ಪ್ರಶಾಂತ್ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ರೆವಿನ್ಯೂ ಇಲಾಖೆಯ ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ, ತಾಲೂಕು ಕಾರ್ಯನಿರ್ವಹಣಾಧಿಕಾರಿ, ಕೆ.ಸಿ.ಅಪ್ಪಣ್ಣ, ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಉಪ ತಹಶೀಲ್ದಾರ್ಗಳಾದ ರವಿಕುಮಾರ್, ಸ್ವಾತಿ, ಅಕ್ಕಮ್ಮ, ಲೋಕೇಶ್, ರೆವಿನ್ಯೂ ಅಧಿಕಾರಿಗಳಾದ ಸುದೀಂಧ್ರ ಪಿ.ಕೆ. ಶಿವಕುಮಾರ್, ರವಿಚಂದ್ರ, ಶರೀಫ್, ಗ್ರಾಮಾಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಹಾಗೂ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು.
-ಚಿತ್ರ, ವರದಿ: ಹೆಚ್.ಕೆ.ಜಗದೀಶ್