ಕೂಡಿಗೆ, ಆ. ೪: ಕೂಡಿಗೆಯಲ್ಲಿರುವ ಸೈನಿಕ ಶಾಲೆಯ ೨೦೨೩-೨೪ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ನೆರವೇರಿಸಿದರು. ಮೊದಲಿಗೆ ಕೆಡೆಟ್ ಹೈರಸ್ ಬಾಚಿಯವರ ನೇತೃತ್ವದ ತಂಡ ಪ್ರದರ್ಶಿಸಿದ ಸಾಂಪ್ರದಾಯಿಕ ನೃತ್ಯವಾದ ‘ಕಂಸಾಳೆ' ನೃತ್ಯವು ಸಭಿಕರ ಗಮನ ಸೆಳೆಯಿತು. ನಂತರ ಮುಖ್ಯ ಅತಿಥಿಗಳು ಶಾಲೆಯ ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಜವಾಬ್ದಾರಿಗಳನ್ನು ವಹಿಸಿದರು. ಈ ಸಂದರ್ಭ ಶಾಲೆಯ ನಾಯಕನಾಗಿ ಆಯ್ಕೆಯಾದ ಕೆಡೆಟ್ ಮಾನಸ್ ಕುಮಾರ್ ಹಾಗೂ ಶಾಲೆಯ ವಿವಿಧ ವಿಭಾಗಗಳ ಹಾಗೂ ವಿವಿಧ ನಿಲಯಗಳ ನಾಯಕರುಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ವಿದ್ಯಾರ್ಥಿಗಳು ತೋರಿದ ಶಿಸ್ತನ್ನು ಪ್ರಶಂಸಿದರು. ಇದರೊಂದಿಗೆ, ವ್ಯಕ್ತಿತ್ವ ರಚನೆ ಮತ್ತು ಸಾಂಘಿಕ ಹೋರಾಟದ ಮೌಲ್ಯಗಳ ಅರಿವು ಮೂಡಿಸುವಲ್ಲಿ ಕ್ರೀಡೆಯು ಮಹತ್ವದ್ದಾಗಿದೆ. ಹಾಗೆಯೇ ತಮ್ಮ ಶಾಲಾ ದಿನಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳು ತಮ್ಮ ಸ್ನೇಹವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಜೀವನದುದ್ದಕ್ಕೂ ಅದನ್ನು ಸಕಾರಾತ್ಮಕವಾಗಿ ಮುಂದುವರೆಸಿಕೊAಡು ಹೋಗಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಕರ್ನಲ್ ಕಣ್ಣನ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್‌ರಾವ್, ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು. ಎನ್‌ಸಿಸಿ ಮತ್ತು ದೈಹಿಕ ಶಿಕ್ಷಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.