ಕೂಡಿಗೆ, ಆ. ೪ : ‘ಸೆಲ್ಫಿ’ ತೆಗೆಯುವ ಸಂದರ್ಭ ಹಾರಂಗಿ ಜಲಾಶಯದೊಳಗೆ ಬಿದ್ದು ನಾಪತ್ತೆಯಾಗಿದ್ದ ಪ್ರವಾಸಿಗ ಸಂದೀಪ್ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಟ್ಯಾಟು ಆರ್ಟಿಸ್ಟ್, ಡಾಗ್ ಬ್ರೀಡರ್ ಸಂದೀಪ್ (೪೫) ತಮ್ಮ ಸ್ನೇಹಿತರುಗಳಾದ ರಾಮಮೂರ್ತಿ, ರಂಜಿತ್ ಹಾಗೂ ಗೋವಿಂದರಾಜು ಅವರೊಂದಿಗೆ ಹಾರಂಗಿ ಜಲಾಶಯಕ್ಕೆ ಗುರುವಾರ ಭೇಟಿ ನೀಡಿದ್ದ ಸಂದರ್ಭ ಆಕಸ್ಮಿಕವಾಗಿ ಬಿದ್ದು ನೀರು ಪಾಲಾಗಿದ್ದರು.
ಅಣೆಕಟ್ಟೆ ಮುಂಭಾಗದ ಸೇತುವೆ ಮೇಲೆ ‘ಸೆಲ್ಫಿ’ ತೆಗೆಯಲು ಮುಂದಾದ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಸಂದೀಪನನ್ನು ರಕ್ಷಿಸಲು ಸ್ನೇಹಿತರು ಮುಂದಾದರೂ ಸಾಧ್ಯವಾಗಿರಲಿಲ್ಲ. ಸಂಜೆ ಅಗ್ನಿಶಾಮಕ ದಳದವರು ಪತ್ತೆ ಕಾರ್ಯ ನಡೆಸಿದರೂ ಸಂದೀಪ್ ಪತ್ತೆಯಾಗಿರಲಿಲ್ಲ. ಶಾಸಕ ಮಂಥರ್ ಗೌಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
(ಮೊದಲ ಪುಟದಿಂದ) ಶುಕ್ರವಾರ ಪತ್ತೆ ಕಾರ್ಯ ಮುಂದುವರೆಸಿದ ಅಗ್ನಿಶಾಮಕ ದಳದವರು ಹಾಗೂ ದುಬಾರೆ ರ್ಯಾಫ್ಟಿಂಗ್ ಸಿಬ್ಬಂದಿಗಳು ಮಧ್ಯಾಹ್ನದವರೆಗೆ ಶೋಧ ಕಾರ್ಯ ಮುಂದುವರೆಸಿದರು. ಈ ಸಂದರ್ಭ ಸಂದೀಪ್ ಬಿದ್ದ ಸ್ಥಳದಿಂದ ೫೦ ಅಡಿ ದೂರದಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ನೀರಿನಿಂದ ಹೊರತೆಗೆದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರ್ಯಾಫ್ಟಿಂಗ್ ಸಿಬ್ಬಂದಿಗಳಾದ ನಿತಿನ್, ರಕ್ಷಿತ್, ನಿಶ್ಚಿತ್, ಪ್ರತಾಪ್ ಶೋಧ ಕಾರ್ಯದಲ್ಲಿ ಅಗ್ನಿಶಾಮಕದಳ ತಂಡದೊAದಿಗೆ ಪಾಲ್ಗೊಂಡಿದ್ದರು.