ಗೋಣಿಕೊಪ್ಪಲು, ಆ. ೩: ಆರಂಭದಲ್ಲಿ ಪುರಸಭೆಯಾಗಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿ ತಿಯು ನಂತರದ ದಿನಗಳಲ್ಲಿ ಮಂಡಲ ಪಂಚಾಯಿತಿಯಾಗಿ ಪರಿವರ್ತನೆ ಗೊಂಡಿದೆ. ವರ್ಷ ಕಳೆಯುತ್ತಿ ದ್ದಂತೆಯೇ ಪಂಚಾಯಿತಿಯು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಯಾಗಿ ಹಿಂಬಡ್ತಿ ಪಡೆಯುವ ಮೂಲಕ ಇದೀಗ ಕಳೆದ ಎರಡು ದಶಕಗಳಿಂದಲೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಾಗಿಯೇ ಕರ್ತವ್ಯ ನಿರ್ವಹಿಸುತ್ತಿದೆ. ೨೨ ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ಗೋಣಿಕೊಪ್ಪ ಗ್ರಾಮ ಪಂಚಾಯಿ ತಿಯು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ೯ ಸಾವಿರಕ್ಕೂ ಅಧಿಕ ಜನಸಂಖ್ಯೆ ಯನ್ನು ಹೊಂದಿರುವ ಗೋಣಿಕೊಪ್ಪ ಗ್ರಾಮ ಪಂಚಾಯಿ ತಿಯು ಭೌಗೋಳಿಕವಾಗಿ ಬೆಳೆದು ನಿಂತಿದೆ. ಕೊಡಗಿನಲ್ಲಿ ಹೆಚ್ಚಿನ ತೆರಿಗೆ ಸಂಗ್ರಹಿಸುವ ಪಂಚಾಯಿತಿಯಾಗಿ ರೂಪುಗೊಂಡಿದೆ. ದಿನದಿಂದ ದಿನಕ್ಕೆ ನಗರವು ಬೆಳೆಯುತ್ತಿದ್ದು ಜನಸಂಖ್ಯೆಯು ಏರುತ್ತಿದೆ. ಪಟ್ಟಣದಲ್ಲಿ ಉನ್ನತ ಮಟ್ಟದ ವಿದ್ಯಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹಲವು ಬಡಾವಣೆಗಳು ನಿರ್ಮಾಣಗೊಂಡಿವೆ. ನಗರದ ಮೈಸೂರು-ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಡವು ತಲೆ ಎತ್ತಿನಿಂತಿದ್ದು ಬಹುದೊಡ್ಡ ಕಂಪೆನಿಗಳು ಕೆಲಸ, ವ್ಯಾಪಾರ ವಹಿವಾಟು ನಿರ್ವಹಿಸುತ್ತಿವೆ. ಉನ್ನತ ಮಟ್ಟದ ಬ್ಯಾಂಕ್‌ಗಳು ಕರ್ತವ್ಯ ನಿರ್ವಹಿಸುತ್ತಿವೆ.

ಗೋಣಿಕೊಪ್ಪ ನಗರವು ಪಟ್ಟಣ ಪಂಚಾಯಿತಿ, ಪುರಸಭೆಗೂ ಮೀರಿ ಕೆಲಸ ನಿರ್ವಹಿಸುತ್ತಿದೆ.ಆದರೆ ಇನ್ನೂ ಕೂಡ ಗ್ರಾಮ ಪಂಚಾಯಿತಿ ಮಟ್ಟವನ್ನು ಮೀರಿಲ್ಲದಿರುವುದರಿಂದ ಸಹಜವಾಗಿ ರಾಜ್ಯದ ಉಳಿದ ಗ್ರಾಮ ಪಂಚಾಯಿತಿಗಳಿಗೆ ಸಿಗುವಷ್ಟೆ ಅನುದಾನ ಲಭ್ಯವಾಗುತ್ತಿದೆ. ಇದನ್ನು ಮನಗಂಡಿರುವ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿಯನ್ನಾಗಿ ಮಾಡಲು ಈ ಹಿಂದೆಯೇ ನಿರ್ಣಯ ಕೈಗೊಂಡಿತ್ತು. ಆದರೆ ಯಾವುದೇ ರೀತಿಯ ಪತ್ರ ವ್ಯವಹಾರಗಳು ಸರ್ಕಾರದ ಮಟ್ಟದಲ್ಲಿ ನಡೆದಿರಲಿಲ್ಲ. ಇದೀಗ ಪಟ್ಟಣ ಬೆಳೆಯುತ್ತಿದ್ದು, ಪಂಚಾಯಿತಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಪಂಚಾಯಿತಿಯನ್ನು ಮುಂದಿನ ದಿನದಲ್ಲಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎ.ಎಸ್. ಪೊನ್ನಣ್ಣ ಅವರು ಮೊದಲ ಬಾರಿಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಗ್ರಾಮ ಪಂಚಾಯಿತಿ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ನೂತನ ಶಾಸಕರಿಗೆ ಪಂಚಾಯಿತಿ ವತಿಯಿಂದ ಮನವಿ ಪತ್ರ ಸಲ್ಲಿಸಿದ ಆಡಳಿತ ಮಂಡಳಿ, ಅಭಿವೃದ್ಧಿ ದೃಷ್ಟಿಯಿಂದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಮನವಿ ಪತ್ರದಲ್ಲಿ ಉಲ್ಲೇಖ ಮಾಡಿತ್ತು.

ಸಭೆಯಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ ಪಟ್ಟಣ ಪಂಚಾಯಿತಿ ಯನ್ನಾಗಿ ರೂಪುಗೊಳ್ಳಲು ಸಾಕಷ್ಟು ಕಡತ ವ್ಯವಹಾರಗಳು ನಡೆಸಬೇಕಾಗಿದೆ. ಇಲ್ಲಿನ ಭೌಗೋಳಿಕ ಚಿತ್ರಣದೊಂದಿಗೆ ಜನಸಂಖ್ಯೆ, ಆರ್ಥಿಕ ವ್ಯವಸ್ಥೆ ಹಾಗೂ ವಾಣಿಜ್ಯ ವಹಿವಾಟು ಕೂಡ ಗಣನೆಗೆ ಬರಲಿದೆ. ಆ ನಿಟ್ಟಿನಲ್ಲಿ ಪಂಚಾಯಿತಿ ನಿರ್ಧಾರ ಕೈಗೊಂಡಲ್ಲಿ ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡುವುದಾಗಿ ಸದಸ್ಯರಿಗೆ ಭರವಸೆ ನೀಡಿದ್ದರು.

- ಹೆಚ್.ಕೆ. ಜಗದೀಶ್