ನವದೆಹಲಿ, ಆ. ೩: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಸಂಸತ್ ಭವನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಮೋದಿಯವರಿಗೆ ಗಂಧದ ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಗಂಧದ ಅಂಬಾರಿ ನೀಡಿ ಬಳಿಕ ವಿವಿಧ ಯೋಜನೆಗಳಡಿ ಕೇಂದ್ರದಿAದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರ ಬಳಿ ಚರ್ಚೆ ನಡೆಸಿದರು. ಇದರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸುವಂತೆ ಮನವಿ ಮಾಡಿದರು. ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಲಂಚ ಸ್ವೀಕಾರ: ಇಬ್ಬರ ಬಂಧನ; ಓರ್ವ ಪರಾರಿ
ಬೆಂಗಳೂರು, ಆ. ೩: ಬನಶಂಕರಿಯ ಕರಿಸಂದ್ರದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ರಾಜಗೋಪಾಲ್ ತಲೆಮರೆಸಿ ಕೊಂಡಿದ್ದಾನೆ. ರೂ. ೧ ಲಕ್ಷ ಲಂಚ ಸ್ವೀಕರಿಸುವಾಗ ಬಿಬಿಎಂಪಿ ಕಂದಾಯ ಸಿಬ್ಬಂದಿ ಲೋಕಾ ಬಲೆಗೆ ಬಿದ್ದಿದ್ದು, ಇಬ್ಬರನ್ನು ಬಂಧಿಸಲಾಗಿದ್ದು, ಒಬ್ಬ ಪರಾರಿಯಾಗಿದ್ದಾರೆ. ಬಿಬಿಎಂಪಿ ವಾರ್ಡ್ ನಂ. ೧೬೬ ರ ರೆವೆನ್ಯೂ ಇನ್ಸ್ಪೆಕ್ಟರ್ ರಾಜಗೋಪಾಲ್ ಪರಾರಿಯಾಗಿದ್ದು, ಎಫ್ಡಿಎ ರಾಘವೇಂದ್ರ, ಡಾಟಾ ಎಂಟ್ರಿ ಆಪರೇಟರ್ ಸುರೇಶ್ ದತ್ತಾರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಖಾತಾ ಬದಲಾವಣೆ ಮಾಡಿಕೊಡಲು ಮಾಚೋಹಳ್ಳಿಯ ಅರುಣ್ ಎಂಬಾತನಿAದ ೧ ಲಕ್ಷದ ೨೫ ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ೧ ಲಕ್ಷ ಹಣ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು ಪೊಲೀಸರನ್ನು ವಶಕ್ಕೆ ಪಡೆದ ಕೇರಳ ಪೊಲೀಸರು
ಬೆಂಗಳೂರು, ಆ. ೩: ವಂಚನೆ ಪ್ರಕರಣದಲ್ಲಿ ಆರೋಪಿ ಪತ್ತೆಗೆ ಕೇರಳಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಖ್ಯ ಆರೋಪಿಯನ್ನು ವಶಕ್ಕೆ ಪಡೆದು ಮತ್ತಿಬ್ಬರು ವ್ಯಕ್ತಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬೆಂಗಳೂರಿನ ವೈಟ್ಫೀಲ್ಡ್ ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಸಹಿತ ನಾಲ್ವರು ಸಿಬ್ಬಂದಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ೩ ಲಕ್ಷ ರೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಇನ್ಸ್ಪೆಕ್ಟರ್ ಶಿವಪ್ರಕಾಶ, ಹಾಗೂ ಇಬ್ಬರು ಹೆಡ್ ಕಾನ್ಸ್ಟೇಬಲ್ಸ್ ಸೇರಿ ಮೂವರು ಸಿಬ್ಬಂದಿಯನ್ನ ಕೇರಳದ ಕೊಚ್ಚಿಯ ಕಲಂಸ್ಸೇರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉದ್ಯೋಗದ ಹೆಸರಿನಲ್ಲಿ ರೂ. ೨೬ ಲಕ್ಷ ವಂಚಿಸಲಾಗಿದೆ ಎಂದು ಶ್ರೀಕಾಂತ್ ಎಂಬವರು ಜೂನ್ ೧೬ ರಂದು ವೈಟ್ಫೀಲ್ಡ್ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಐಸಾಕ್ನ ವಿಚಾರಣೆ ವೇಳೆ ಬ್ಯಾಂಕ್ ಖಾತೆಯನ್ನು ರಾಜೇಶ್ ಎಂಬಾತನ ಪರವಾಗಿ ತೆರೆಯಲಾಗಿದೆ ಎಂಬುದನ್ನು ತಿಳಿದ ಪೊಲೀಸರು ಆತನ ವಿಚಾರಣೆ ನಡೆಸಿದ್ದರು. ಕೇರಳ ಮೂಲದ ಪರೇಶ್ ಹಾಗೂ ನಿಶಾಂತ್ ಎಂಬಾತನ ಸೂಚನೆಯಂತೆ ಖಾತೆ ತೆರೆಯಲಾಗಿದೆ ಎಂದು ರಾಜೇಶ್ ತಿಳಿಸಿದ್ದ. ಅದರಂತೆ ಪರೇಶ್ ಹಾಗೂ ನಿಶಾಂತ್ನನ್ನು ವಿಚಾರಿಸಿದಾಗ, ವಂಚನೆಯ ಸೂತ್ರಧಾರ ಮಣಪ್ಪುರಂ ಮೂಲದ ನೌಶಾದ್ ಎಂಬುದು ತಿಳಿದುಬಂದಿತ್ತು. ಜುಲೈ ೩೧ ರಂದು ವೈಟ್ಫೀಲ್ಡ್ ಸಿಇಎನ್ ಠಾಣಾ ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್ಟೇಬಲ್ ಸಂದೇಶ್ ನೇತೃತ್ವದ ತಂಡ ಕೇರಳಕ್ಕೆ ತೆರಳಿತ್ತು. ಅದೇ ದಿನ ವೆಂಗಾರದಲ್ಲಿ ನೌಶಾದ್ನನ್ನು ವಶಕ್ಕೆ ಪಡೆದಿದ್ದ ತಂಡ, ಬಳಿಕ ನಿಖಿಲ್ ಹಾಗೂ ಅಖಿಲ್ ಎಂಬ ಇನ್ನಿಬ್ಬರು ಶಂಕಿತರನ್ನು ಎರ್ನಾಕುಲಂನ ಪಲ್ಲುರ್ತಿಯಲ್ಲಿ ವಶಕ್ಕೆ ಪಡೆದು ಸ್ಥಳೀಯ ಠಾಣೆಗೆ ಮಾಹಿತಿ ನೀಡಿತ್ತು. ಆಗಸ್ಟ್ ೨ ರಂದು ವೈಟ್ಫೀಲ್ಡ್ ಸಿಇಎನ್ ಪೊಲೀಸರ ತಂಡಕ್ಕೆ ಕರೆ ಮಾಡಿದ್ದ ಕೊಚ್ಚಿಯ ಕಲಂಸ್ಸೇರಿ ಠಾಣಾ ಪೊಲೀಸರು, ಆರೋಪಿ ಅಖಿಲ್ ಪರ ವಕೀಲರು ನೀಡಿದ ದೂರಿನಂತೆ ಆತನಿಂದ ೩ ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪದಡಿ ರಾಜ್ಯದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ. ಶಿವಪ್ರಕಾಶ್ ಈ ಹಿಂದೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.