ಗೋಣಿಕೊಪ್ಪಲು, ಆ. ೪: ನಡುರಾತ್ರಿಯ ವೇಳೆ ಕಾಡಾನೆಯೊಂದು ವಾಸದ ಮನೆಯ ಮೇಲೆ ದಾಳಿ ನಡೆಸಿದ ಪರಿಣಾಮ ಮನೆಯು ಸಂಪೂರ್ಣ ಧ್ವಂಸಗೊAಡಿದೆ. ಮನೆಯಲ್ಲಿ ವಾಸವಿದ್ದ ಯರವರ ಶಿವು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಬುಕಾಡು ಗಿರಿಜನ ಹಾಡಿಯಲ್ಲಿ ನಡೆದಿದೆ.

೬೦ ಹೆಚ್ಚು ಗಿರಿಜನ ಕುಟುಂಬಗಳು ವಾಸವಿರುವ ಬೊಂಬುಕಾಡು ಹಾಡಿಯಲ್ಲಿ ಯರವರ ಶಿವು ಕೂಡ ಗುಣಮಟ್ಟದ ಶೀಟ್‌ಮನೆ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದರು. ಕೂಲಿ ಕೆಲಸದಲ್ಲಿರುವ ಮನೆ ಮಾಲೀಕ ಯರವರ ಶಿವು ಗುರುವಾರ ತನ್ನ ದೈನಂದಿನ ಕೆಲಸ ಮುಗಿಸಿ ಮನೆಯಲ್ಲಿ ವಾಸವಾಗಿದ್ದ. ನಿದ್ರೆಯಲ್ಲಿದ್ದ ಶಿವು, ಸುಮಾರು ೧೨ ಗಂಟೆಯ ವೇಳೆ ಮನೆಯ ಮೂಲೆ ಹೆÀಂಚುಗಳು ಹಾಸಿಗೆ ಬಳಿ ಬೀಳುತ್ತಿದ್ದಂತೆಯೇ ಎಚ್ಚರಗೊಂಡಿದ್ದಾನೆ. ಗಾಬರಿಯಿಂದ ಹೊರ ಬರುತ್ತಿದ್ದಂತೆಯೇ ಕಾಡಾನೆಯು ಮನೆಯ ಶೀಟ್‌ಅನ್ನು ಸಂಪೂರ್ಣ ಧ್ವಂಸಗೊಳಿಸಿ ಮುಂದೆ ಸಾಗಿದೆ. ಹೆಂಚುಗಳೆಲ್ಲವೂ ಪುಡಿಪುಡಿಯಾಗಿ ಕೋಣೆಯೊಳಗಡೆ ಬಿದ್ದಿವೆ. ನಡುರಾತ್ರಿಯಲ್ಲಿ ಮನೆಯೊಳಗೆ ಕಾಲಕಳೆದ ಮನೆಯ ಯಜಮಾನ ಶಿವು ಬೆಳಗಾಗುತ್ತಿದ್ದಂತೆಯೇ ಸಮೀಪದಲ್ಲಿದ್ದ ಮನೆಯವರಿಗೆ ಮಾಹಿತಿ ನೀಡಿದ್ದಾನೆ.

ಅರಣ್ಯದಂಚಿನಲ್ಲಿರುವ ಬೊಂಬುಕಾಡು ಗಿರಿಜನ ಹಾಡಿಗೆ ಹೊಂದಿಕೊAಡAತೆ ಸುರಕ್ಷತಾ ಕ್ರಮವಾಗಿ ಸೋಲಾರ್ ಬೇಲಿಗಳನ್ನು ಅಳವಡಿಸಲಾಗಿದೆ. ಆದರೆ ಸೋಲಾರ್ ಬೇಲಿ ಮುರಿದ ಕಾಡಾನೆಯು ಹಾಡಿಯತ್ತ ನುಗ್ಗಿ ಮನೆಯ ಮೇಲೆ ದಾಳಿ ನಡೆಸಿದೆ. ಇದರಿಂದ ಮನೆಯ ಮಾಲೀಕ ಶಿವುಗೆ ಭಾರಿ ನಷ್ಟವಾಗಿದೆ. ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಮನೆ ಮಾಲೀಕ ಶಿವು ನಡುರಾತ್ರಿಯ ವೇಳೆ ಕಾಡಾನೆ ದಾಳಿ ನಡೆಸಿದೆ. ನಿದ್ರೆಯಲ್ಲಿದ್ದ ನನಗೆ ಅದೃಷ್ಟವಶಾತ್ ಯಾವುದೇ ತೊಂದರೆ ಆಗಲಿಲ್ಲ. ಆದಷ್ಟು ಬೇಗನೆ ಇಲಾಖೆಯು ಕ್ರಮಕೈಗೊಂಡು ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಕಾಡಾನೆ ದಾಳಿಯಿಂದ ಮನೆ ಧ್ವಂಸಗೊAಡಿರುವ ಮಾಹಿತಿ ತಿಳಿದ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಶಾಸಕ ಎ.ಎಸ್.ಪೊನ್ನಣ್ಣನವರ ನಿರ್ದೇಶನದ ಮೇರೆ ಮುಂಜಾನೆ ಬೊಂಬುಕಾಡು ಹಾಡಿಗೆ ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮತ್ತಿಗೋಡು ಅರಣ್ಯ ವಲಯದ ಆರ್‌ಎಫ್‌ಓ ದಿಲೀಪ್ ಕುಮಾರ್ ಮನೆಯವರೊಂದಿಗೆ ಘಟನೆ ಬಗ್ಗೆ ಮಾಹಿತಿ ಪಡೆದರು. ಕಾಡಾನೆಯಿಂದ ಮನೆಯು ಸಂಪೂರ್ಣ ಹಾಳಾಗಿರುವುದರಿಂದ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.

ದೂರವಾಣಿ ಮೂಲಕ ಶಾಸಕ ಎ.ಎಸ್.ಪೊನ್ನಣ್ಣ ಮನೆ ಕಳೆದುಕೊಂಡ ಯರವರ ಶಿವುರವರ ಪತ್ನಿ ದೇವಿಯೊಂದಿಗೆ ಮಾತನಾಡಿ ಅರಣ್ಯ ಅಧಿಕಾರಿಗಳಿಗೆ ಕೂಡಲೇ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ. ಈಗಾಗಲೇ ಅಧಿಕಾರಿಗಳು ತಮ್ಮ ಬಳಿ ಆಗಮಿಸಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು. ಭೇಟಿಯ ವೇಳೆ ಮತ್ತಿಗೋಡು ಅರಣ್ಯ ವಲಯದ ಅಧಿಕಾರಿ ದಿಲೀಪ್‌ಕುಮಾರ್, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಸೇವಾದಳದ ಸದಸ್ಯೆ ರವಿನಾ, ಮಾಜಿ ಗ್ರಾ.ಪಂ. ಅಧ್ಯಕ್ಷ ಶಿವುಕುಮಾರ್, ಗಿರಿಜನ ಮುಖಂಡ ಪಿ.ಎಸ್.ಮಾರ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. -ಹೆಚ್.ಕೆ.ಜಗದೀಶ್