ಶನಿವಾರಸಂತೆ, ಆ. ೪: ಜಗತ್ತಿನ ಇತಿಹಾಸದಲ್ಲಿ ಹೊಸ ಪರಿವರ್ತನೆ ಕಾಣಬೇಕಾದರೆ ಸೈನಿಕ, ಕೃಷಿಕ, ಶಿಕ್ಷಕ ಹಾಗೂ ವೈದ್ಯ ಈ ನಾಲ್ಕು ಜನರು ನಿಷ್ಠೆ, ನಿಸ್ವಾರ್ಥತೆ ಹಾಗೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಯಾವ ದೇಶವಾದರೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಹೇಳಿದರು.
ಸಮೀಪದ ಕೊಡ್ಲಿಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಎಲ್ ಕೆಜಿ ಮತ್ತು ಯುಕೆಜಿ ಸಂಸ್ಥಾಪನಾ ಸಮಿತಿ, ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರ ವತಿಯಿಂದ ನಿವೃತ್ತಿ ಹೊಂದಿದ ಶಾಲಾ ಮುಖ್ಯಶಿಕ್ಷಕ ಎಂ.ಎಸ್.ಗಣೇಶ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು.
೩೦ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಮುಖ್ಯಶಿಕ್ಷಕ ಗಣೇಶ್ ಪ್ರಾಮಾಣಿಕ ಶಿಕ್ಷಕರಾಗಿದ್ದು ಶಾಲಾಭಿವೃದ್ಧಿಗೆ ಶ್ರಮಿಸಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದ ಪತ್ರಕರ್ತ ಪಾಸ್ಟರ್ ಪಿ.ಸಿ. ಫ್ರೆಡ್ಡಿ ಅವರು ಮಾತನಾಡಿದರು.
ನಿವೃತ್ತ ಮುಖ್ಯಶಿಕ್ಷಕ ಎಂ.ಎಸ್. ಗಣೇಶ್, ಅವರ ತಾಯಿ ಹಾಗೂ ಪತ್ನಿಯನ್ನು ಸನ್ಮಾನಿಸಿ, ಗೌರವಿಸ ಲಾಯಿತು. ಮುಖ್ಯಶಿಕ್ಷಕ ಗಣೇಶ್ ಕೃತಜ್ಞತೆಯ ನುಡಿಗಳನ್ನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಕವಿತಾ, ಪದಾಧಿಕಾರಿಗಳಾದ ಕರುಂಬಯ್ಯ, ಸೌಭಾಗ್ಯ, ಉಮಾದೇವಿ, ಬಿಪಿನ್ ಕುಮಾರ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಸುರೇಶ್, ಭಗವಾನ್, ರೇವಣ್ಣ, ಇಂದ್ರೇಶ್, ಕೆಂಚೇಶ್, ರಘು, ಇತರರು ಇದ್ದರು.