ವೀರಾಜಪೇಟೆ, ಆ. ೨: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದನೂರು ಹೊಳೆ ಬದಿ ಪ್ಲಾಸ್ಟಿಕ್ ಚೀಲಗಳನ್ನು ಸುರಿದ ವೀರಾಜಪೇಟೆಯ ಸತ್ಯನಾರಾಯಣ ಕಾಫಿ ಕ್ಯೂರಿಂಗ್ ವರ್ಕ್ಸ್ನ ಮಾಲೀಕರಿಗೆ ಪಂಚಾಯಿತಿ ವತಿಯಿಂದ ದಂಡ ವಿಧಿಸಲಾಯಿತು.
ವೀರಾಜಪೇಟೆಯ ಸತ್ಯ ನಾರಾಯಣ ಕಾಫಿ ಕ್ಯೂರಿಂಗ್ ವರ್ಕ್ಸ್ನ ಸಿಬ್ಬಂದಿಗಳು ಲಾರಿಯಲ್ಲಿ ತುಂಬಿಕೊAಡು ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಮಂಗಳವಾರ ತಂದು ಹೊಳೆಬದಿಯಲ್ಲಿ ಸುರಿದಿದ್ದನ್ನು ಗಮನಿಸಿದ ಗ್ರಾಮಸ್ಥರು, ಕದನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮೌಖಿಕ ದೂರನ್ನು ನೀಡಿದ್ದರು.
ಇದನ್ನು ತೆರವುಗೊಳಿಸಲು ಕಾಫಿ ಕ್ಯೂರಿಂಗ್ ವರ್ಕ್ಸ್ನ ಮಾಲೀಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ಅದನ್ನು ತೆರವುಗೊಳಿಸಲು ಸಹಕರಿಸುವಂತೆ ಕೋರಿದ್ದರು.
ಅದರಂತೆ ಸತ್ಯನಾರಾಯಣ ಕಾಫಿ ಕ್ಯೂರಿಂಗ್ ವರ್ಕ್ಸ್ನ ಮಾಲೀಕರಾದ ಎನ್.ಕೆ ಅಚ್ಚಪ್ಪ ಅವರಿಗೆ ೩,೦೦೦ ದಂಡ ವಿಧಿಸಿ ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಅವರ ಲಾರಿಯಲ್ಲೆ ತುಂಬಿಸಿ ವಾಪಸ್ಸು ಕಳುಹಿಸಲಾಗಿದೆ.
ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಕೆ. ಅಪ್ಪಣ್ಣ ಅವರ ನಿರ್ದೇಶನದಂತೆ ದಂಡ ವಿಧಿಸಲಾಗಿದೆ.