ಕೊಡಗಿನ ಕಕ್ಕಡ ಮಾಸವು ಕರ್ನಾಟಕ ಪಂಚಾAಗ ಪ್ರಕಾರ ಆಷಾಡ ಮಾಸವಾಗಿದೆ. ತುಳು ಹಾಗೂ ಕೆಲ ತಮಿಳು ಮತ್ತು ಮಲ ಯಾಳಿಗರಿಗೆ ಆಟಿಮಾಸ ವಾಗಿದೆ. ಆದರೆ ಕಕ್ಕಡ ಮತ್ತು ಆಷಾಡ ಮಾಸವು ಮಲೆನಾಡು ಹಾಗೂ ಇತರ ಪ್ರದೇಶಗಳ ಭೌಗೋಳಿಕ ಪರಿಸರ ಸನ್ನಿವೇಶಗಳಿಗೆ ಪೂರಕವಾಗಿ ವರ್ಷಂಪ್ರತಿ ತಾರೀಖಿನಲ್ಲಿ ಕೊಂಚ ವ್ಯತ್ಯಾಸ ಹೊಂದಿರುತ್ತದೆ. ಕಕ್ಕಡ ಎಂಬ ಪದವು ಕರ್ಕಾಟಕದಿಂದ ಕರ್ಕಾಟವಾಗಿ ಕಕ್ಕಡವಾಗಿದೆ. ಜುಲೈ ತಿಂಗಳ ಮಧ್ಯಭಾಗ ದಿಂದ ಆಗಸ್ಟ್ ತಿಂಗಳ ಮಧ್ಯದವರೆಗೆ ಕಕ್ಕಡ ಮಾಸ ವಾಗಿದೆ. ಬಹುಮುಖ್ಯವಾಗಿ ಕಕ್ಕಡ ತಿಂಗಳು ಇತರ ಮಲೆನಾಡಿನ ವರಿಗಿಂತ ವಿಶೇಷವಾಗಿ ಕೊಡಗಿನವರಿಗೆ ಅನೇಕ ಪ್ರಕೃತಿ ವಿಸ್ಮಯಗಳನ್ನು ತೋರಿಸುವಂತಹ ಮುಂಗಾರು ಮಳೆಯ ಕಾಲವಾಗಿದೆ. ಈ ವಿಶೇಷ ತಿಂಗಳಿನಲ್ಲಿ ಕೊಡಗಿನ ಬೇರೆ ಬೇರೆ ಸಮುದಾಯಗಳು ಪ್ರಕೃತಿ ಪೂರಕ ಅನೇಕ ನಾಡ ಪದ್ಧತಿಗಳನ್ನು ಆಚರಿಸುತ್ತಾ ಬಂದಿದ್ದಾರೆ. ಕಕ್ಕಡ ತಿಂಗಳು ಜಡಿ ಮಳೆ ಬೀಳುವ ಸಮಯವಾದ್ದರಿಂದ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುವುದಲ್ಲದೆ ಪ್ರವಾಹ, ಪ್ರಕೃತಿ ವಿಕೋಪಗಳು ಕೂಡ ಸಂಭವಿಸುತ್ತಿರುತ್ತವೆ. ಅದೇ ಕಾರಣದಿಂದಾಗಿ ಪ್ರಕೃತಿ ಪೂಜೆ, ನದಿಗೆ ಆರತಿ ಮುಂತಾದವುಗಳನ್ನು ನಡೆಸಲಾಗುತ್ತದೆ.
ಆದರೆ ಯಾವುದೇ ಮದುವೆ, ನಾಮಕರಣದಂತಹ ಶುಭಕಾರ್ಯ ಗಳನ್ನು ನಡೆಸುವುದಿಲ್ಲ. ಮಾತ್ರವಲ್ಲ ದೇವರ ಹಬ್ಬ, ಜಾತ್ರೆ, ತೀರ್ಥ ಸ್ನಾನಗಳಾವುದನ್ನೂ ಮಾಡುವುದಿಲ್ಲ.
ವೈಜ್ಞಾನಿಕ ಕಾರಣ
ಈ ಸಮಯದಲ್ಲಿ ಕಾವೇರಿಯು ಋತುಮತಿಯಾಗಿರುತ್ತಾಳೆಂದು ಹಿರಿಯರು ಹೇಳುತ್ತಿದ್ದರು. ವೈಜ್ಞಾನಿಕವಾಗಿ ಹೇಳುವುದಾದರೆ ನೆಲ ಹದಗೊಂಡು ಕೆಸರುಮಯ ವಾಗಿರುವುದು, ವಿಪರೀತ ಜಾರುವುದು, ಕಾಡು ಪ್ರಾಣಿ, ವಿಷಜಂತುಗಳ ಚಲನವಲನ, ಪ್ರವಾಹ ಮುಂತಾದವುಗಳಿAದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಆಗಿನ ಕಾಲದಲ್ಲಿ ಲೋಕಜ್ಞಾನ ಪಡೆದಂತವರು ಮುಖ್ಯವಾಗಿ ಅನಕ್ಷರಸ್ಥರು, ವೃದ್ಧರು, ಹೆಂಗಸರು, ಮಕ್ಕಳ ಮನಸ್ಸನ್ನು ಹಿಡಿದಿಡಲು ಮತ್ತು ಅಪಾಯದಿಂದ ಪಾರುಮಾಡಲು ದೇವರ ಹೆಸರಿನಲ್ಲಿ ಅನೇಕ ಕಟ್ಟುಪಾಡುಗಳನ್ನು ಹೆಣೆದಿಟ್ಟು ಪಾಲಿಸಿಕೊಂಡು ಬಂದಿದ್ದರು. ಆದರೆ ಈಗಿನ ಅಕ್ಷರಸ್ಥರು ಪ್ರಕೃತಿ ಜೀವಂತಿಕೆಯ ಹಿನ್ನೆಲೆ ತಿಳಿದಿರುವು ದರಿಂದ ಕಕ್ಕಡ ವಿಶೇಷತೆಗಳನ್ನು ಅರಿವಿನಿಂದ ಪರಿಪಾಲಿಸುತ್ತಿದ್ದಾರೆ.
ಕೃಷಿಕನ ಹಬ್ಬ
ಮುಖ್ಯವಾಗಿ ಕೊಡಗಿನಲ್ಲಿ ಕಕ್ಕಡ ತಿಂಗಳಿನಲ್ಲಿ ಗದ್ದೆ ನಾಟಿಕೆಲಸ ಮುಗಿಯುತ್ತಿರುತ್ತದೆ. ಧೋ ಎಂದು ಸುರಿಯುವ ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ಬಿರುಸಾಗಿ ದುಡಿದು ಗದ್ದೆಯನ್ನು ಹಸನುಗೊಳಿಸಿದ ಕಾಲಕ್ಕೆ ಶ್ರಮಜೀವಿ ಕೃಷಿಕನ ಪಾಲಿನ ಈ ಹಬ್ಬ ಆಚರಿಸಲಾಗುತ್ತದೆ. ಹೀಗೆ ಮುಂಗಾರಿನಲ್ಲಿ ದೈಹಿಕವಾಗಿ ದುಡಿಯುವವರ ಆರೋಗ್ಯ ರಕ್ಷಣೆ ಇಂತಹ ಸಮಯದಲ್ಲಿ ಅತಿ ಮುಖ್ಯವಾಗಿದೆ. ಅದಕ್ಕೆಂದೇ ಪ್ರಕೃತಿ ವರವಾಗಿ ಅಣಬೆ, ಏಡಿ, ಕೋಳಿ, ಕಣಿಲೆ, ಕೆಸದಂತಹ ಉಷ್ಣ ಅಂಶ ಯಥೇಚ್ಛವಿರುವ ಆಹಾರದೊಂದಿಗೆ ಔಷಧಿಯುಕ್ತ ಗಿಡ ಮದ್ದು ಸೊಪ್ಪು ಎಂಬ ವಿಶಿಷ್ಟವಾದ ಆರೋಗ್ಯ ರಕ್ಷಾಕವಚ ನೈಸರ್ಗಿಕ ಗಿಡವನ್ನು ಒದಗಿಸಿದೆ. ಈ ಮದ್ದು ಸೊಪ್ಪಿನ ವೈಜ್ಞಾನಿಕ ಹೆಸರು ‘‘ಜೆಸ್ಟಿಸಿಯ ವೈನಾಡೆನ್ಸಿಸ್’’ ಇದು ಎಕನ್ತಾಸೀಯೇ (೧) ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.
ಮದ್ದು ಸೊಪ್ಪು, ಆಟಿಸೊಪ್ಪು ಅಥವಾ ಕುರುಂಜಿ ಸೊಪ್ಪನ್ನು ಕಕ್ಕಡ ಹದಿನೆಂಟನೆಯ ದಿನದಂದೇ ಸೇವಿಸಲು ಬಳಸಲಾಗುತ್ತದೆ. ಈ ಕಕ್ಕಡ ಹದಿನೆಂಟರ ಆಸುಪಾಸು ಹೊರತು ಪಡಿಸಿದರೆ ಬೇರೆ ದಿನಗಳಲ್ಲಿ ಆ ಗಿಡದಿಂದ ತೆಗೆದ ನೀರಿಗೆ ವಿಶೇಷವಾದ ಪರಿಮಳವಾಗಲಿ, ನೇರಳೆ ಬಣ್ಣವಾಗಲಿ ಇರುವುದಿಲ್ಲ. ಇದೇ ಈ ಗಿಡದ ವೈಶಿಷ್ಟö್ಯತೆ. ಕಕ್ಕಡ ಆರಂಭಗೊAಡ ಹದಿನೆಂಟನೆಯ ದಿನ ಹದಿನೆಂಟು ರೀತಿಯ ಔಷಧೀಯ ಗುಣಗಳು ಈ ಗಿಡದಲ್ಲಿ ಸೇರುತ್ತವೆ. ಎಂಬುದು ಪೂರ್ವಜರಿಂದ ತಿಳಿಸಲ್ಪಡುತ್ತ ಬಂದಿರುವ ರಹಸ್ಯ. ಹಾಗಾಗಿ ಯಥೇಚ್ಚವಾಗಿ ಆಗಸ್ಟ್ ೨, ೩, ೪ ರಂದು ಇದರ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆ ದಿನ ಮನುಷ್ಯನ ಎತ್ತರ ಅಥವಾ ಫಲವತ್ತು ಪ್ರದೇಶದಲ್ಲಿ ಇನ್ನೂ ಎತ್ತರ ಬೆಳೆಯುವ ಕಡ್ಡಿಗಳಿಂದ ಚೂಪಾದ ಎಲೆಗಳನ್ನು ಕಡ್ಡಿ ಸಮೇತ ಬಳಸಿ ನೀರಲ್ಲಿ ಹಾಕಿಟ್ಟು ಸೋಸಿದ ಅಥವಾ ಕುದಿಸಿದ ನೀರನ್ನು ಬಳಸಿ ತಯಾರಿಸಲಾಗುವ ಪ್ರಮುಖ ಖಾದ್ಯ. ಅಕ್ಕಿ, ಬೆಲ್ಲ, ತೆಂಗಿನ ತುರಿ ಬೆರೆಸಿ ತಯಾರಿಸಲಾದ ಪಾಯಸ. ಮದ್ದು ಸೊಪ್ಪಿನ ಅರ್ಕದಿಂದ ಹೆಣ್ಣು ಮಕ್ಕಳ ಅಡುಗೆ ಕೌಶಲ್ಯವೂ ಹಲ್ವ, ತಟ್ಟೆಪುಟ್ಟು, ಇತರ ಸಿಹಿತಿಂಡಿಗಳ ತಯಾರಿಕೆ ಮತ್ತು ಪ್ರಸ್ತುತ ಪಡಿಸುವಿಕೆಯ ಮೂಲಕ ಬೆಳಕಿಗೆ ಬರುತ್ತದೆ.
ಹಬ್ಬಾಚರಣೆ
ಆನಂತರದ ನಿತ್ಯ ಭೋಜನದಲ್ಲಿ ರೊಟ್ಟಿ, ಕಡುಬು, ಅನ್ನ ಇದ್ದೇ ಇರುತ್ತದೆ. ಅದರ ಜೊತೆ ನಿಸರ್ಗದ ಕೊಡುಗೆಗಳನ್ನು ಬಳಸಿ ತಯಾರಿಸಿದ ಆಹಾರವನ್ನು ಮನೆಮಂದಿಯೆಲ್ಲ ಜೊತೆ ಕುಳಿತು ಹರಟೆ ಹೊಡೆಯುತ್ತ ಚಪ್ಪರಿಸುವುದೇ ದೊಡ್ಡ ಹಬ್ಬವಾಗುತ್ತದೆ. ಆ ದಿನ ಚೆನ್ನಾಗಿ ಊಟ ಮಾಡಿದವರಿಗೆ ಶರೀರದ ಉಷ್ಣತೆ ಏರಿದ ಅನುಭವ ಕೂಡ ಆಗುತ್ತದೆ. ಕಕ್ಕಡ ತಿಂಗಳ ಇದೇ ಸಂದರ್ಭದಲ್ಲಿ ನಾಟಿ ಓಟ, ಕೆಸರುಗದ್ದೆ ಆಟೋಟ, ಇತರ ಒಳಾಂಗಣ ಕ್ರೀಡೆಗಳು ಕೂಡ ನಡೆಯುತ್ತವೆ. ಕೊಡಗಿನಲ್ಲಿ ಕೊಡವರು, ಕೊಡವ ಭಾಷಿಕರು, ಗೌಡರು, ತುಳು, ಮಲಯಾಳಿ ಭಾಷಿಕರು ಈ ಕಕ್ಕಡ ಪದ್ನೆಟ್ಟ್ (ಆಟಿ ಹದಿನೆಂಟನೆಯ ದಿನ) ಅನ್ನು ಹಬ್ಬವಾಗಿ ಆಚರಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ತಂಪಾದ ಹಸಿಹಸಿ ಹವಾಮಾನದ ಶೀತಕಾಯಿಲೆಗಳಿಂದ ಮುಕ್ತರಾಗಲು, ದೇಹ ರಕ್ಷಣೆ ಮಾಡುವ ನಿಸರ್ಗದತ್ತ ಆಹಾರ ಸೇವನೆಯ ಹಬ್ಬವೇ ಕಕ್ಕಡ ಪದ್ನೆಟ್ಟ್ ನಮ್ಮೆ ಅಥವಾ ಆಟಿ ಹಬ್ಬ.
ಕಡಲು ಉಕ್ಕುವ ಸಮಯ
ತುಳು ನಾಡಿನವರು ಕೂಡ ಆಟಿ ಹದಿನೆಂಟನ್ನು ವಿಶೇಷವಾಗಿ ಆಚರಿಸುತ್ತಾರೆ. ಅವರು ಆ ದಿನವನ್ನು ಕಡಲು ಉಕ್ಕುವ ಸಮಯ ಎನ್ನುತ್ತಾರೆ. ಅಂದರೆ ಆ ದಿನ ಸಂಪೂರ್ಣವಾಗಿ ಕಡಲಿನ ಒಡಲು ತುಂಬಿರುತ್ತದೆ ಎಂದು ಪರಿಗಣಿಸುತ್ತಾರೆ. ಹಾಗಾಗಿ ಕಡಲಿಗೆ ಹಾಲು ಸುರಿದು ಸಮುದ್ರ ದೇವನನ್ನು ಶಾಂತಗೊಳಿಸುವ ಪದ್ಧತಿ ಪಾಲಿಸುತ್ತಾರೆ. ಅವರು ಈ ಸಂದರ್ಭದಲ್ಲಿ ಪತ್ರೊಡೆಯಂತಹ ತಿನಿಸು ತಯಾರಿಸುವುದು ವಿಶೇಷವಾಗಿದೆ. ಅದರಂತೆ ಕೊಡಗಿನ ತುಳುನಾಡಿಗರು ಕಾವೇರಿಗೆ ಹಾಲು ಎರೆಯುತ್ತಾರೆ. ಇನ್ನು ತಮಿಳರು ‘‘ಆಟಿ ಪದಿನೆಟಾಂ ಪೆರಕ್ಕು’’ ಎಂದು ಆಚರಿಸುತ್ತಾರೆ. ಆ ದಿನ ತಮಿಳರು ಸಿಹಿಪೊಂಗಲ್, ಖಾರಪೊಂಗಲ್ ಮತ್ತು ಇತರ ಸಿಹಿ ತಯಾರಿಸಿ ಪ್ರಸಾದ ಹಂಚುತ್ತಾರೆ. ಕಾವೇರಿ ತೀರದ ತಮಿಳಿಗರು ಮತ್ತು ಇತರ ಕೆಲ ಜನಾಂಗದವರು ಆ ದಿನ ಕಾವೇರಿ ನದಿಗೆ ಆರತಿ ಮಾಡಿ ಬಾಗಿನ ಅರ್ಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಕ್ಕಡ ಮದ್ದುಸೊಪ್ಪು ಸಸ್ಯವು ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ ಮತ್ತು ವೈಜ್ಞಾನಿಕ ವಾಗಿಯೂ ಮಹತ್ವವನ್ನು ಪಡೆದು ಕೊಂಡಿದೆ.
- ಮಾಳೇಟಿರ ಸೀತಮ್ಮ ವಿವೇಕ್,
ಹಾಸನ.