ಸಿದ್ದಾಪುರ, ಆ. ೨: ಸಿದ್ದಾಪುರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಮಲಕ್ಕೆ ಸೆಡ್ಡು ಹೊಡೆದು ಕೈ ಪಡೆಯು ಗ್ರಾ.ಪಂ. ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.
ಸಿದ್ದಾಪುರ ಗ್ರಾ.ಪಂ. ೨೫ ಸದಸ್ಯರನ್ನೊಳಗೊಂಡ ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ೧೫ ಮಂದಿಯ ಸದಸ್ಯ ಬಲದೊಂದಿಗೆ ಪ್ರಥಮ ಬಾರಿಗೆ ಬಿಜೆಪಿ ಪಕ್ಷವು ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧಿಕಾರವನ್ನು ವಹಿಸಿಕೊಂಡಿತ್ತು. ಸಿದ್ದಾಪುರ ಗ್ರಾ.ಪಂ. ಸದಸ್ಯರಲ್ಲಿ ೧೫ ಬಿಜೆಪಿ, ೯ ಕಾಂಗ್ರೆಸ್, ೧ ಪಕ್ಷೇತರ ಸೇರಿ ಒಟ್ಟು ೨೫ ಮಂದಿಯ ಸದಸ್ಯ ಬಲವನ್ನು ಹೊಂದಿದೆ. ಮೊದಲನೇ ಅವಧಿಗೆ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ರೀನಾ ತುಳಸಿ ಅಧಿಕಾರ ವಹಿಸಿಕೊಂಡಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ಪ್ರವರ್ಗ(ಅ) ಮೀಸಲಾತಿಯಲ್ಲಿ ಮಹೇಶ್ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲದೆ ಆಡಳಿತ ಮಂಡಳಿಯಲ್ಲಿ ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಇಬ್ಬರು ಹಂಚಿಕೊಳ್ಳುವ ಒಡಂಬಡಿಕೆ ಇದ್ದರೂ ಕೂಡ ಕೊನೆಯ ಘಳಿಗೆಯಲ್ಲಿ ಸ್ವಪಕ್ಷದಲ್ಲಿನ ಒಡಕು, ಅಧಿಕಾರದ ಆಸೆಯು ಇದೀಗ ಮುಳುವಾಗಿದೆ.
ಬುಧವಾರದಂದು ನಡೆದ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು, ಆಡಳಿತಾರೂಢ ಬೆಜೆಪಿ ಬೆಂಬಲಿತ ಸದಸ್ಯರ ಒಳಜಗಳವನ್ನು
(ಮೊದಲ ಪುಟದಿಂದ) ತನ್ನ ಗಾಳವಾಗಿ ಬಳಸಿಕೊಂಡು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವು ಎಸ್.ಸಿ. (ಪರಿಶಿಷ್ಟ ಜಾತಿ) ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹೆಚ್.ಧನಲಕ್ಷಿö್ಮ, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎ. ಆನಂದ ನಾಮಪತ್ರ ಸಲ್ಲಿಸಿದ್ದರು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಪ್ರೇಮ ಗೋಪಾಲ್ ಕಾಂಗ್ರೆಸ್ ಸದಸ್ಯರ ಬೆಂಬಲದೊAದಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಳನಿ ನಾಮಪತ್ರ ಸಲ್ಲಿಸಿದ್ದರು. ೧೫ ಸಂಖ್ಯಾ ಬಲದೊಂದಿಗೆ ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಚುನಾವಣಾ ಫಲಿತಾಂಶವು ತೀವ್ರ ಮುಜುಗರ ತಂದೊಡ್ಡಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊAದಿಗೆ ಸ್ಪರ್ಧಿಸಿದ ಪ್ರೇಮ ಗೋಪಾಲ್ ೧೪ ಮತ ಗಳಿಸಿ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿಯಿಂದ ಧನಲಕ್ಷಿö್ಮ ೧೧ ಮತ ಗಳಿಸಿ ಕೇವಲ ೩ ಮತಗಳ ಅಂತರದಿAದ ಸೋಲನ್ನು ಅನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಳನಿಸ್ವಾಮಿ ೧೪ ಮತಗಳನ್ನು ಪಡೆದು ಗೆಲುವು ಪಡೆದುಕೊಂಡರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ ಅವರು ೧೧ ಮತ ಗಳಿಸಿ ೩ ಮತಗಳ ಅಂತರದಿAದ ಸೋಲನ್ನು ಅನುಭವಿಸಿದರು.
ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ ಕಾರ್ಯ ನಿರ್ವಹಿಸಿದ್ದರು. ಈ ಸಂದÀರ್ಭ ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಬಿಜೋಯ್, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ ಹಾಗೂ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.
ಅವಕಾಶವಿದ್ದರೂ ಅಧಿಕಾರ ಕಳೆದುಕೊಂಡ ಬಿಜೆಪಿ
ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯ ದಿನಾಂಕ ನಿಗದಿಯಾದ ನಂತರ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಪಡೆಯುವ ಸಲುವಾಗಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿತ್ತು. ಆದರೆ ಆಡಳಿತಾರೂಡ ಬಿಜೆಪಿಯಲ್ಲಿ ಒಳಜಗಳ ನಡೆಯುತ್ತಿದ್ದರೂ ಕೂಡ ಪಕ್ಷದ ವರಿಷ್ಠರು ಸಮಸ್ಯೆಯನ್ನು ಇತ್ಯರ್ಥಪಡಿಸಲು ಮುಂದಾಗದೇ ಇದ್ದ ಪರಿಣಾಮ, ಆಡಳಿತ ಪಕ್ಷದ ಒಳಜಗಳವನ್ನು ಗಾಳವಾಗಿ ಬಳಸಿಕೊಂಡ ಕಾಂಗ್ರೆಸ್ ಬಿಜೆಪಿಯ ನಾಲ್ವರು ಸದಸ್ಯರನ್ನು ತನ್ನೆಡೆಗೆ ಸೆಳೆದು ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಆದರೆ ಇತ್ತ ೧೫ ಮಂದಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಒಳಗೊಂಡು ಸ್ಪಷ್ಟ ಬಹುಮತ ಹೊಂದುವ ಅವಕಾಶ ಇದ್ದರೂ ಕೂಡ, ಅಧಿಕಾರದ ಒಳಜಗಳದ ಕಾರಣದಿಂದ ಇದೀಗ ಕೈಯಲ್ಲಿದ್ದ ಅಧಿಕಾರವನ್ನು ಬಿಜೆಪಿ ಕಳೆದುಕೊಂಡAತಾಗಿದೆ. - ವಾಸು