ವೀರಾಜಪೇಟೆ, ಆ. ೧: ಚುನಾವಣಾ ಸಂದರ್ಭದಲ್ಲಿ ನೀಡಿರುವ ಐದು ಗ್ಯಾರೆಂಟಿಗಳ ಪೂರೈಕೆಯನ್ನು ಯಾವುದೇ ಅಡೆತಡೆ ಇಲ್ಲದೆ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ನಾಲ್ಕು ಕೋಟಿ ಜನರು ಗ್ಯಾರೆಂಟಿಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು. ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ವೀರಾಜಪೇಟೆ ಬ್ಲಾಕ್ ಬಿಟ್ಟಂಗಾಲ ವಲಯ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಮಹಿಳೆಯರು ಸದೃಢರಾಗಿರಬೇಕು ಎಂದು ಕೆಲವು ಯೋಜನೆಗಳನ್ನು ರೂಪಿಸಿದರೆ ಪುರುಷರಿಗೂ ಅಂತಹ ಯೋಜನೆಗಳನ್ನು ಕೊಡಿ ಎಂದು ವಿಧಾನಸಭೆಯಲ್ಲಿ ಅವರು ಬೊಬ್ಬೆ ಹಾಕುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಸಿದ ಪರಿಣಾಮ ಬಸ್ ಸಂಚಾರದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಜನರ ಭಾವನೆಗಳ ಬಗ್ಗೆ ದಾರಿ ತಪ್ಪಿಸಿದವರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಫ್.ಸಿ.ಐನ ಗೋದಾಮಿನಲ್ಲಿ ಟನ್‌ಗಟ್ಟಲೆ ಅಕ್ಕಿ ಕೊಳೆಯುತ್ತಿದ್ದರು ರಾಜ್ಯಕ್ಕೆ ಅಕ್ಕಿ ನೀಡಲು ಬಿಡಲಿಲ್ಲ. ಅಕ್ಕಿಯನ್ನು ಬಹಿರಂಗ ಹರಾಜು ಹಾಕಿದರು ಯಾರು ಹರಾಜಿನಲ್ಲಿ ಭಾಗವಹಿಸಲಿಲ್ಲ. ದೇಶದ ಸಂಪತ್ತು ಒಬ್ಬರ ಬಳಿಯೇ ಕ್ರೋಢೀಕರಣ ಆಗಬಾರದು. ಎಲ್ಲರಿಗೂ ಹಂಚುವ ಮನೋಭಾವನೆ ಇರಬೇಕು. ರಾಜಕೀಯ ಆಧಾರದಲ್ಲಿ ಅಭಿವೃದ್ಧಿ ಮಾಡುವ ಆಲೋಚನೆಯನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ, ಜನರ ಕಲ್ಯಾಣ, ಬಡವರ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಕಳೆದ ೨೦ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ತುಚ್ಚವಾಗಿ ಕಾಣುತ್ತಿದ್ದವರಿಗೆ ಈ ಬಾರಿ ಉತ್ತಮ ಫಲಿತಾಂಶವನ್ನು ನೀಡಿದ್ದೇವೆ. ಕೃಷಿ, ಕೈಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆ ಸಾಧಿಸಲು ಕಾಂಗ್ರೆಸ್ ಪಕ್ಷ ಕಾರಣವಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಜನ ಸಾಮಾನ್ಯರ ಮನಮುಟ್ಟುವಂತೆ ಮಾಡಲು ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು. ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಕೊಕ್ಕಂಡ ಗಣಪತಿ ಮಾತನಾಡಿ ಉತ್ತಮ ಕೆಲಸ ಮಾಡಿದರೆ ಎಲ್ಲಾ ಪಕ್ಷದವರು ಬೆಂಬಲಿಸುತ್ತಾರೆ. ಒಬ್ಬ ವ್ಯಕ್ತಿಯನ್ನು ನಂಬದೆ ಶಕ್ತಿಯನ್ನು ನಂಬಬೇಕು. ಚುನಾವಣಾ ಸಂದರ್ಭದಲ್ಲಿ ಟೀಕೆ ಮಾಡಿದ ಬಹುತೇಕರು ಇಂದು ಶಾಸಕರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಐದು ಯೋಜನೆ ಗಳಿಗಾಗಿ ಪೊನ್ನಣ್ಣ ಅವರನ್ನು ಗೆಲ್ಲಿಸಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಗೆಲ್ಲಿಸಿದ್ದೇವೆ ಎಂದು ಹೇಳಿದರು. ವೇದಿಕೆಯಲ್ಲಿ ಬಿಟ್ಟಂಗಾಲ ವಲಯ ಕಾಂಗ್ರೆಸ್ ಅಧ್ಯಕ್ಷ ಆಟ್ರಂಗಡ ಲೋಹಿತ್, ಅಜ್ಜಿಕುಟ್ಟಿರ ಕಾಂಚನ್ ಪೊನ್ನಣ್ಣ, ಕಾಂಗ್ರೆಸ್ ಮುಖಂಡರಾದ ಅಜ್ಜಕುಟ್ಟಿರ ನರೇನ್ ಕಾರ್ಯಪ್ಪ, ಮಳವಂಡ ಅರವಿಂದ್ ಕುಟ್ಟಪ್ಪ, ಕಂಜಿತAಡ ಗಿಣಿ ಮೊಣ್ಣಪ್ಪ, ಹೆಗ್ಗಡೆ ಸಮಾಜದ ಅಧ್ಯಕ್ಷ ಪಿ.ಜಿ ಅಯ್ಯಪ್ಪ, ಉಮೇಶ್ ಕೇಚಮಯ್ಯ, ಕೊಲ್ಲಿರ ಬೋಪಣ್ಣ ಉಪಸ್ಥಿತರಿದ್ದರು. ಚೇಂದ್ರಿಮಾಡ ಗಣೇಶ್ ನಂಜಪ್ಪ ಸ್ವಾಗತಿಸಿ, ಕೋಲತಂಡ ರಘು ಮಾಚಯ್ಯ ಕಾರ್ಯಕ್ರಮ ನಿರೂಪಿಸಿದರು.