(ವಿಶೇಷ ವರದಿ: ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಆ. ೧: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೈಟೆಕ್ ಬಸ್ ನಿಲ್ದಾಣದ ಕನಸು ಭಗ್ನಗೊಂಡಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದ ರೂ. ೧ ಕೋಟಿ ಅನುದಾನವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಇದರಿಂದಾಗಿ ಸಹಜವಾಗಿಯೇ ನೂತನ ಬಸ್ ನಿಲ್ದಾಣದ ನಿರೀಕ್ಷೆಯಲ್ಲಿದ್ದ ಗ್ರಾಮ ಪಂಚಾಯಿತಿಗೆ ಹಾಗೂ ನಾಗರಿಕರಿಗೆ ನಿರಾಸೆಯಾಗಿದೆ.

ಕಳೆದ ೧ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗೋಣಿಕೊಪ್ಪ ಬಸ್ ನಿಲ್ದಾಣದ ಯೋಜನೆಗೆ ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೂ. ೧ ಕೋಟಿ ಅನುದಾನವನ್ನು ಆರಂಭಿಕ ಹಂತದಲ್ಲಿ ಬಿಡುಗಡೆಗೊಳಿಸಿದ್ದರು. ಬಸ್ ನಿಲ್ದಾಣದ ಕಾಮಗಾರಿಯ ಬಗ್ಗೆ ಸರ್ಕಾರದ ಏಜೆನ್ಸಿಯಾಗಿರುವ ‘ಲ್ಯಾಂಡ್ ಆರ್ಮಿ’ಗೆ ಜವಾಬ್ದಾರಿ ನೀಡಲಾಗಿತ್ತು. ಇದರಿಂದಾಗಿ ನೂತನ ಬಸ್ ನಿಲ್ದಾಣದ ಕಾಮಗಾರಿಯು ಸದ್ಯದಲ್ಲಿಯೇ ಆರಂಭಗೊಳ್ಳುವ ನಿಟ್ಟಿನಲ್ಲಿ ಅಂದಿನ ವಿಧಾನ ಸಭಾ ಚುನಾವಣಾ ಪೂರ್ವದಂದು ಬಸ್ ನಿಲ್ದಾಣದಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮುಂದಾಳತ್ವದಲ್ಲಿ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಇದೀಗ ಅನುದಾನ ರದ್ದಾಗಿರುವುದ ರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನವನ್ನು ಎದುರು ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ವಾಣಿಜ್ಯ ನಗರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗೋಣಿಕೊಪ್ಪ ನಗರವು ಗಡಿಭಾಗ ಕೇರಳ ರಾಜ್ಯಕ್ಕೆ ಹತ್ತಿರವಾಗಿದೆ. ಗೋಣಿಕೊಪ್ಪ ನಗರದ ಮೂಲಕವೇ ಕೇರಳ ರಾಜ್ಯಕ್ಕೆ ತೆರಳಬೇಕಾಗಿದೆ. ಕೇರಳ ರಾಜ್ಯದಿಂದ ಮೈಸೂರು ಭಾಗಕ್ಕೆ ತೆರಳುವ ಪ್ರಯಾಣಿಕರು ಗೋಣಿಕೊಪ್ಪ ನಗರ ಮಾರ್ಗವಾಗಿ ತೆರಳುತ್ತಾರೆ. ಇದರಿಂದಾಗಿ ಗೋಣಿಕೊಪ್ಪ ನಗರವು ವಾಣಿಜ್ಯ ನಗರವಾಗಿ ಶರವೇಗದಲ್ಲಿ ಬೆಳೆಯುತ್ತಿದೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದ ಜಾಗವು ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿದ್ದು ಸುಸಜ್ಜಿತ ಬಸ್ ನಿಲ್ದಾಣ ತಂಗುದಾಣ ಹಾಗೂ ಹಲವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ನಿಲ್ದಾಣದ ನೀಲನಕ್ಷೆ ಸೇರಿದಂತೆ ಸರ್ವೆ ಕಾರ್ಯವೂ ಅಂತಿಮಗೊAಡಿತ್ತು. ಅನುದಾನದ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭ ಗ್ರಾ.ಪಂ. ಆಡಳಿತ ಮಂಡಳಿಯು ಹಿಂದಿನ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಇವರನ್ನು ಹಲವು ಬಾರಿ ಮನವಿ ಮಾಡಿತ್ತು. ಪಂಚಾಯಿತಿ ಸದಸ್ಯರ ಮನವಿಯನ್ನು ಪರಿಗಣಿಸಿದ ಶಾಸಕ ಕೆ.ಜಿ.ಬೋಪಯ್ಯ ಮುಖ್ಯಮಂತ್ರಿ ಬಳಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಕೆಲ ಮುಖಂಡರ ನಿಯೋಗವನ್ನು ಕರೆದೊಯ್ದು ಆರಂಭಿಕ ಹಂತದಲ್ಲಿ ರೂ. ೧ ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳಿAದ ಬಸ್ ನಿಲ್ದಾಣದ ಅಭಿವೃದ್ದಿಗೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೇರಿದೆ. ಕ್ಷೇತ್ರದಲ್ಲಿ ಶಾಸಕರ ಬದಲಾವಣೆ ಯಾಗಿದ್ದು ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಎ.ಎಸ್.ಪೊನ್ನಣ್ಣನವರು ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿಗೆ

(ಮೊದಲ ಪುಟದಿಂದ) ಆಗಮಿಸಿದ ನೂತನ ಶಾಸಕ ಎ.ಎಸ್.ಪೊನ್ನಣ್ಣನವರನ್ನು ಬಸ್ ನಿಲ್ದಾಣದ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು ಪ್ರಸ್ತಾಪಿಸಿದರು. ಈ ವೇಳೆ ಮಾತನಾಡಿದ ಶಾಸಕ ಪೊನ್ನಣ್ಣ ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಸಕಾಲದಲ್ಲಿ ಬಳಕೆ ಮಾಡಿಕೊಳ್ಳದ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಅನುದಾನವು ರದ್ದಾಗಿದೆ. ಮುಂದಿನ ದಿನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಲಾಗುವುದೆಂದು ನೂತನ ಬಸ್ ನಿಲ್ದಾಣದ ವಿಚಾರವಾಗಿ ಶಾಸಕರು ಪ್ರಸ್ತುತ ಸನ್ನಿವೇಶದ ವಿಷಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ತಿಳಿಸಿದರು. ಇದರಿಂದ ಗೋಣಿಕೊಪ್ಪ ನೂತನ ಬಸ್ ನಿಲ್ದಾಣದ ಕನಸು ಭಗ್ನಗೊಂಡAತಾಗಿದೆ.

ಈ ಹಿಂದೆ ಪುರಸಭೆ ಇದ್ದ ಸಂದರ್ಭ ಬುಟ್ಟಿಯಂಡ ಅಪ್ಪಾಜಿ ಅವರು ಅಧ್ಯಕ್ಷರಾಗಿದ್ದ ವೇಳೆ ನೂತನ ಬಸ್ ನಿಲ್ದಾಣ, ತಂಗುದಾಣ ಹಾಗೂ ಶೌಚಾಲಯವನ್ನು ೧೯೭೦ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲೆಯಲ್ಲಿಯೇ ಮಾದರಿ ಬಸ್ ನಿಲ್ದಾಣ ಎಂಬ ಹೆಸರು ಗಳಿಸಿತ್ತು.

ಬಸ್ ನಿಲ್ದಾಣ ೪೫ ವರ್ಷಗಳಿಗೂ ಅಧಿಕ ಸಮಯದವರೆಗೂ ಗಟ್ಟಿಮುಟ್ಟಾಗಿತ್ತು. ಮಳೆಗಾಲ ಸಂದರ್ಭ ನಿಲ್ದಾಣದ ಮುಂಭಾಗ ಕೊಂಚ ಕುಸಿದು ಬಿದ್ದಿತ್ತು. ಕೂಡಲೇ ಹಳೆಯದಾದ ಕಟ್ಟಡವನ್ನು ಕೆಡವಲು ರಾತ್ರೋರಾತ್ರಿ ಕ್ರಮ ಕೈಗೊಳ್ಳಲಾಯಿತು. ಆದರೆ ಕೆಡವಿದ ವೇಗದಲ್ಲಿ ಹೊಸ ಬಸ್ ನಿಲ್ದಾಣದ ಕನಸ್ಸು ನನಸಾಗಲಿಲ್ಲ.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಉತ್ತಮ ಕೆಲಸ ಮಾಡುವ ನಿರೀಕ್ಷೆಯಲ್ಲಿದ್ದ ಜನತೆಗೆ ನಿರೀಕ್ಷೆಗಳು ಮತ್ತೆ ಹುಸಿಯಾಗತೊಡಗಿದ್ದವು. ಜನತೆಗೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹೈಟೆಕ್ ಬಸ್ ನಿಲ್ದಾಣ ಕಟ್ಟುವ ಕೆಲಸಕ್ಕೆ ಕೆಲವು ಪಂಚಾಯ್ತಿ ಸದಸ್ಯರು ಸ್ವಇಚ್ಚೆಯಿಂದ ಆಸಕ್ತಿ ವಹಿಸಿ ನೀಲನಕ್ಷೆ ತಯಾರು ಮಾಡಿದ್ದರು. ೩೦ ಕೋಟಿ ವೆಚ್ಚದಲ್ಲಿ ಕೆಲಸ ನಿರ್ವಹಿಸಲು ಕೇರಳದ ಸಂಸ್ಥೆ ಮುಂದೆ ಬಂದಿತ್ತು. ಮೂರು ಅಂತಸ್ತಿನಲ್ಲಿ ನೆಲ ಮಳಿಗೆ ಸೇರಿದಂತೆ ಮೂರುವರೆ ಎಕರೆ ಜಾಗದಲ್ಲಿ ೨೫ ವರ್ಷಕ್ಕೆ ಗುತ್ತಿಗೆ ಪಡೆಯಲು ಸಂಸ್ಥೆ ತಯಾರು ನಡೆಸಿತ್ತು. ಇನ್ನೇನು ಕಾಗದ ಪತ್ರಗಳಿಗೆ ಸಹಿ ಆಗಬೇಕು ಅನ್ನುವಷ್ಟರಲ್ಲಿ ಹಲವು ಕಾರಣಗಳಿಂದ ಅತೀ ದೊಡ್ಡ ಬಸ್ ನಿಲ್ದಾಣದ ಪ್ರಾಜೆಕ್ಟ್ ಹಳ್ಳ ಹಿಡಿದಿತ್ತು. ನಂತರದ ವರ್ಷಗಳಲ್ಲಿ ನೂತನ ಬಸ್ ನಿಲ್ದಾಣಕ್ಕೆ ಅನುದಾನ ಕ್ರೋಢಿಕರಿಸುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಮಂಡಳಿ ತಮ್ಮ ಮಾಸಿಕ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಂಡರು ಯಾವುದೇ ಪ್ರಯೋಜನವಾಗಿಲ್ಲ. ನಂತರದ ಸಮಯದಲ್ಲಿ ನಿಲ್ದಾಣದಲ್ಲಿ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಲಾಯಿತು.

ನಿಲ್ದಾಣದಲ್ಲಿ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ, ಬಸ್‌ಗಳ ನಿಲುಗಡೆಗೆ ಕಷ್ಟಕರವಾಗಿದೆ. ಹಲವು ಬಾರಿ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಚಾಲಕರ ನಡುವೆ ದಿನನಿತ್ಯ ಜಟಾಪಟಿ ಸಾಮಾನ್ಯ. ಪ್ರಸ್ತುತ ಇರುವ ತಾತ್ಕಾಲಿಕ ಬಸ್ ತಂಗುದಾಣದಲ್ಲಿ ಶುಚಿತ್ವವಿಲ್ಲದೆ. ಧೂಮಪಾನಿಗಳ, ಮದ್ಯವ್ಯಸನಿಗಳ ತಾಣವಾಗಿದೆ. ನಿಲ್ದಾಣದಲ್ಲಿ ರಾತ್ರಿಯಂತೂ ವಿದ್ಯುತ್ ದೀಪವಿದ್ದರೂ ಪುಂಡ ಪೋಕರಿಗಳು ನಿದ್ರೆ ಮಾಡುವ ಸ್ಥಳವಾಗಿದೆ.

ಹಗಲಿನ ವೇಳೆಯಲ್ಲಿ ಮಹಿಳೆಯರು ನಿಲ್ದಾಣದ ಒಳಗೆ ಇಂದಿಗೂ ಕಾಲಿಡುವಂತಿಲ್ಲ. ಕುಡಿಯುವ ನೀರಿಗಂತೂ ಅವಕಾಶವೇ ಇಲ್ಲ. ಬಾಯಾರಿಕೆಯಾದವರು ಸಮೀಪದ ಬೇಕರಿ ಹೋಟೆಲ್‌ಗೆ ತೆರಳಬೇಕಾದ ಅನಿವಾರ್ಯತೆ ಇದೆ. ವೀರಾಜಪೇಟೆ-ಮಡಿಕೇರಿಯತ್ತ ತೆರಳುವ ಬಸ್‌ಗಳು ಮುಖ್ಯ ರಸ್ತೆಯ ಬದಿಯಲ್ಲಿಯೇ ನಿಲ್ಲಬೇಕಾಗಿದೆ. ಮೈಸೂರಿನತ್ತ ತೆರಳುವ ಬಸ್‌ಗಳು ಇಲ್ಲಿನ ರಿಫಾರ್‌ರ‍್ಸ್ ಕ್ಲಬ್ ಮುಂಭಾಗವೇ ನಿಲ್ಲುವಂತಾಗಿರುವುದರಿAದಾಗಿ ನಿಲ್ದಾಣದ ಮೇಲೆ ಅಧಿಕ ಒತ್ತಡ ಉಂಟಾಗಿ ಇತರ ಲಘು ವಾಹನಗಳು, ಸರಕು ಸಾಗಾಟ ವಾಹನಗಳು, ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ನಿರಂತರ ಬವಣೆ ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ.