ಕಕ್ಕಡ ೧೮ಕ್ಕೆ ಜಾನಪದ ಹಾಗೂ ಆಯುರ್ವೇದ ಸ್ಪರ್ಶವಿದ್ದು, ಈ ದಿನ ಸಂಪ್ರದಾಯದAತೆ ಸಾಮೂಹಿಕವಾಗಿ ಮನೆಯವರೆಲ್ಲ ಸೇರಿ ಮದ್ದುಸೊಪ್ಪಿನ ಪಾಯಸ ಸೇವಿಸುತ್ತಾರೆ. ಕಕ್ಕಡ ಆರಂಭವಾದ ದಿನದಿಂದ ೧೮ ದಿನಗಳವರೆಗೆ ಪ್ರತಿದಿನ ಒಂದೊAದು ಔಷಧಿಯಂತೆ ಒಟ್ಟು ೧೮ ಔಷಧಿಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲೂ ಮನೆಮಾಡಿದೆ.
೧೮ ಔಷಧಿಗಳು ಸಂಪೂರ್ಣವಾಗಿ ಸೇರಿಕೊಂಡ ನಂತರವಷ್ಟೇ ಸೊಪ್ಪಿಗೆ ಪರಿಪೂರ್ಣ ಔಷಧೀಯ ಗುಣ ಬರುತ್ತದೆ ಎನ್ನುವ ಕಾರಣಕ್ಕೆ ಕಕ್ಕಡ ೧೮ ರಂದೇ ಮದ್ದು ಸೊಪ್ಪನ್ನು ಕೊಯ್ದು ವಿವಿಧ ಬಗೆಯ ಆಹಾರ ಪದಾರ್ಥವನ್ನು ಮಾಡಲಾಗುತ್ತದೆ. ಈ ಸೊಪ್ಪನ್ನು ಮಧುಬನ ಮತ್ತು ಮದ್ದುಸೊಪ್ಪು ಎಂದು ಕೂಡ ಕರೆಯುತ್ತಾರೆ.
ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆಯ ಅಕ್ಕಪಕ್ಕದಲ್ಲೇ ಬೇಲಿಗಳಲ್ಲಿ ಅಥವಾ ಇನ್ಯಾವುದೇ ಖಾಲಿ ಸ್ಥಳಗಳಲ್ಲಿ ಇದನ್ನು ಬೆಳೆದುಕೊಂಡಿದ್ದರೆ ಪಟ್ಟಣದ ಜನ ಗ್ರಾಮಸ್ಥರು ತಂದು ಮಾರುವ ಸೊಪ್ಪಿಗೆ ಹಣ ನೀಡಿ ಕೊಂಡುಕೊಳ್ಳುತ್ತಾರೆ.
ಆಟಿ ಅಥವಾ ಕಕ್ಕಡ ಆಚರಣೆಯ ೧೮ ನೇ ದಿನ ಅಂದರೆ ಆಗಸ್ಟ್ ೩ ರಂದು ಕಕ್ಕಡ ೧೮ ತುಂಬುತ್ತಿದ್ದAತೆ ೧೮ ಔಷಧೀಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಬಗೆಯ ಆಹಾರವನ್ನು ಮಾಡಿ ಸೇವಿಸುವುದು ವಿಶೇಷ. ಕೊಡಗಿನ ಮನೆ ಮನೆಗಳಲ್ಲಿ ಮದ್ದು ಸೊಪ್ಪಿನ ಪಾಯಸ ಘಮಘಮಿಸುತ್ತದೆ.
ತುಳುನಾಡಿನಲ್ಲಿ ಆಟಿ ೧೮ ಹೇಗೆ ಆಚರಿಸಲಾಗುತ್ತದೆಯೋ ಹಾಗೇ ಕೊಡಗಿನಲ್ಲಿ ಕಕ್ಕಡ ೧೮ ಕೂಡ ಒಂದು ವಿಶಿಷ್ಟ ಸಂಪ್ರದಾಯದ ಆಚರಣೆ ಕೂಡ ಹೌದು. ತುಳುನಾಡಿನಲ್ಲಿ ಆಟಿ ೧೮ ರಂದು ಒಂದು ಬಗೆಯ ಮರದ ಚಕ್ಕೆಯನ್ನು ಕಷಾಯ ಮಾಡಿ ಕುಡಿಯುವ ರೂಢಿ ಇದೆ. ಮಲೆನಾಡಾದ ಕೊಡಗಿನಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ ಸಂಪತ್ತು ಹೇರಳವಾಗಿದೆ.
ಮಳೆಗಾಲದಲ್ಲಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪುö್ಪ ಇವುಗಳೆಲ್ಲ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗುತ್ತವೆ ಎಂದು ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಮಾತ್ರವಲ್ಲ ಇವುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಕೂಡ ಹಿರಿಯರ ನಂಬಿಕೆ. ನಾಟಿ ಕೋಳಿ, ಏಡಿ, ಹೊಳೆ ಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಹಾರಿಗಳ ಹೊಟ್ಟೆಯನ್ನು ಸೇರಿ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯ ವೃದ್ಧಿಸಲು ಸಹಕಾರಿ ಎಂಬುವುದು ಕೂಡ ಒಂದು ನಂಬಿಕೆ.
ಆದರೆ ಇವುಗಳೆಲ್ಲದಕ್ಕಿಂತಲೂ ಭಿನ್ನವಾದ ಖಾದ್ಯವೆಂದರೆ ಮದ್ದು ಸೊಪ್ಪಿನಿಂದ ತಯಾರಿಸುವ ಪಾಯಸ. ವರ್ಷಕ್ಕೊಂದು ಬಾರಿ ಕಕ್ಕಡ ೧೮ ರಂದು ಮದ್ದು ಸೊಪ್ಪಿನ ಪಾಯಸವನ್ನು ಸೇವಿಸುವ ಪದ್ಧತಿ ವಾಡಿಕೆಯಲ್ಲಿದೆ. ವಿಶಿಷ್ಟವಾದ ಸುವಾಸನೆಯನ್ನು ಹೊಂದಿರುವ ಸೊಪ್ಪಿನಿಂದ ತಯಾರಾದ ಪಾಯಸ, ತಟ್ಟೆ ಹಿಟ್ಟು, ಹಲ್ವ ಹೀಗೆ ಯಾವುದೇ ಪದಾರ್ಥವಾದರೂ ಕೊಡಗಿನ ಜೇನು ಮತ್ತು ತುಪ್ಪದೊಂದಿಗೆ ಇವುಗಳನ್ನು ಸೇವಿಸಬಹುದು.
ಹಾಗಾಗಿ ಕಕ್ಕಡ ೧೮ ರಂದು ಅಂದರೆ ಇಂದು ಆಗಸ್ಟ್ ೩ ರಂದು ವಿಶೇಷವಾದ ಮದ್ದುಸೊಪ್ಪಿನ ಪಾಯಸ ಎಲ್ಲರೂ ಸವಿಯುವಂತಾಗಲಿ. ಹಾಗೆಯೇ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಂತಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.
ಎಲ್ಲರಿಗೂ ಕಕ್ಕಡ (ಆಟಿ) ೧೮ ರ ಶುಭಾಶಯಗಳು.
- ಬಡಕಡ ರಜಿತ ಕಾರ್ಯಪ್ಪ, ವೀರಾಜಪೇಟೆ. ಮೊ. ೯೪೮೧೭೭೧೮೫೧