ಸೋಮವಾರಪೇಟೆ, ಆ.೧: ರಾಜ್ಯ ವ್ಯಾಪಿ ಡಯಾಲಿಸಿಸ್ ಘಟಕದ ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇ ರಿಕೆಗಾಗಿ ಮುಷ್ಕರ ಆರಂಭಿಸಿದ್ದು, ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಗಳೂ ಸಹ ತಾ. ೨ರಿಂದ (ಇಂದಿ ನಿಂದ) ಮುಷ್ಕರದ ಭಾಗವಾಗುತ್ತಿರುವ ಹಿನ್ನೆಲೆ, ಪ್ರತಿದಿನ ಚಿಕಿತ್ಸೆಗೆ ಒಳಗಾಗುತ್ತಿರುವ ರೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.
ಕಳೆದೆರಡು ವರ್ಷಗಳಿಂದ ಸಕಾ ಲಕ್ಕೆ ವೇತನ ಸಿಗುತ್ತಿಲ್ಲ. ಇದರೊಂದಿಗೆ ಅಗತ್ಯ ಸೌಲಭ್ಯಗಳನ್ನೂ ಒದಗಿಸುತ್ತಿಲ್ಲ. ಬಾಕಿ ವೇತನವನ್ನು ೨ ವಾರದೊಳಗೆ ಪಾವತಿಸಬೇಕೆಂದು ಜೂನ್ನಲ್ಲಿ ಸ್ವತಃ ಈಗಿನ ಆರೋಗ್ಯ ಸಚಿವರೇ ಸೂಚಿಸಿ ದ್ದರೂ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿರುವ ಸಿಬ್ಬಂದಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು, ಇದರ ನೇರ ಪರಿಣಾಮ ರೋಗಿಗಳ ಆರೋಗ್ಯದ ಮೇಲೆ ಬೀಳಲಿದೆ.
ಕಳೆದ ೨೦೧೭ರಿಂದ ರಾಜ್ಯದಲ್ಲಿ ೧೬೭ ಡಯಾಲಿಸಿಸ್ ಘಟಕಗಳಲ್ಲಿ ೯೦೦ ಸಿಬ್ಬಂದಿಗಳು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ೨ ವರ್ಷದಿಂದ ಇಎಸ್ಐ, ಪಿಎಫ್, ಮಾತೃತ್ವ ರಜೆ ನೀಡಿಕೆ ಸೇರಿ ದಂತೆ ವೇತನ ಹೆಚ್ಚಳವೂ ಆಗಿಲ್ಲ. ಸಕಾಲಕ್ಕೆ ವೇತನವನ್ನೂ ಪಾವತಿ ಸುತ್ತಿಲ್ಲ. ಬಾಕಿ ವೇತನ ಪಾವತಿ, ಸಂಬಳ ಪರಿಷ್ಕರಣೆ, ಮಾತೃತ್ವ ರಜೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಲಾಗಿದೆ.
ನೌಕರರ ಸಂಘದ ಸೂಚನೆ ಹಿನ್ನೆಲೆ ಸೋಮವಾರಪೇಟೆಯ ಡಯಾ ಲಿಸಿಸ್ ಘಟಕದ ಎಲ್ಲಾ ಸಿಬ್ಬಂದಿ ಗಳೂ ಸಹ ಮುಷ್ಕರದಲ್ಲಿ ಭಾಗಿಯಾ ಗುತ್ತಿದ್ದು, ಇದರ ಪ್ರತಿಕೂಲ ಪರಿ ಣಾಮವನ್ನು ಬಡ ರೋಗಿಗಳು ಎದುರಿಸಲೇಬೇಕಾಗಿದೆ.
ಸೋಮವಾರಪೇಟೆಯ ಕೇಂದ್ರ ದಲ್ಲಿ ಒಟ್ಟು ಐವರು ಸಿಬ್ಬಂದಿಗಳಿ ದ್ದಾರೆ. ಓರ್ವ ಟೆಕ್ನೀಷಿಯನ್, ಮೂವರು ಸ್ಟಾಫ್ ನರ್ಸ್, ಓರ್ವ ಗ್ರೂಪ್ ಡಿ. ನೌಕರರಿದ್ದು, ತಾ. ೨ರಿಂದ ಆರಂಭವಾಗುವ ಮುಷ್ಕರ ದಲ್ಲಿ ಎಲ್ಲರೂ ಭಾಗಿಯಾಗುತ್ತಿದ್ದಾರೆ. ಕೇಂದ್ರದಲ್ಲಿ ೩ ಪಾಳಿಯಂತೆ ಒಟ್ಟಾರೆ ೩೦ ರೋಗಿಗಳು ಪ್ರತಿದಿನ ಡಯಾಲಿಸಿಸ್ಗೆ ಒಳಗಾಗುತ್ತಿದ್ದಾರೆ.
ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ತಮ್ಮ ನ್ಯಾಯೋಚಿತ ಬೇಡಿಕೆಗಾಗಿ ಸಿಬ್ಬಂದಿಗಳು ಮುಷ್ಕರದ ಭಾಗವಾ ಗುತ್ತಿದ್ದಾರೆ. ಪರಿಣಾಮ ರೋಗಿಗಳಿಗೆ ಡಯಾಲಿಸಿಸ್ ಸೇವೆ ಸ್ಥಗಿತಗೊಳ್ಳ ಲಿದ್ದು, ಪ್ರತಿದಿನ ಜೀವ ಕೈಯಲ್ಲಿಡಿದು ಬದುಕುತ್ತಿರುವ ಡಯಾಲಿಸಿಸ್ ರೋಗಿಗಳಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ.