ಕುಶಾಲನಗರ, ಆ. ೧: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ಕರೆದೊಯ್ಯುವ ಅಂಗವೇ ಪತ್ರಿಕಾ ರಂಗ ಎಂದು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ರವರು ಇಂದಿಲ್ಲಿ ಹೇಳಿದರು.

ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆಯ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಗಮ ಟಿವಿ ಪ್ರಧಾನ ಸಂಪಾದಕ ಎಚ್.ಎಂ. ರಘು ಕೋಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪುರಸಭಾ ಸದಸ್ಯರಾದ ಅಮೃತ್ ರಾಜ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘರ್ಷ ಸಂಚಾಲಕ ದಾಮೋದರ, ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ, ಹಿರಿಯ ಪತ್ರಕರ್ತ ಭರಮಣ್ಣ ಬೆಟ್ಟಗೇರಿ, ಟೋನಿ ಕಾಲೇಜಿನ ಪ್ರಬಾರ ಪ್ರಾಂಶುಪಾಲ ನಾಗೇಶ್ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ರಘು ಕೋಟಿ ಅವರು ಮಾತನಾಡಿದರು. ಬಿ ಟಿವಿ ವರದಿಗಾರ ಸುಜಿತ್ ಕುಮಾರ್, ಸಹ ಶಿಕ್ಷಕ ಹೆಚ್.ಸಿ. ರಮೇಶ್, ಸಂಚಾರಿ ಪೊಲೀಸ್ ಕೆ.ಕೆ. ಸ್ವಾಮಿ, ಶಿಕ್ಷಕಿ ನಗಿನ ಬಾನು, ಮಂಜೇಗೌಡ, ಉಪನ್ಯಾಸಕ ಮೋಹನ್ ಕುಮಾರ್, ಲೀಲಾಕುಮಾರಿ ತೂಡಿಕಾನ, ಸುಶೀಲ, ಕೆ.ಬಿ. ರಾಜು, ಮಾಲದೇವಿ ಸೇರಿದಂತೆ ೧೬ ಮಂದಿಯನ್ನು ಸನ್ಮಾನಿಸಲಾಯಿತು.