ಚೆಯ್ಯಂಡಾಣೆ, ಜು. ೩೧: ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಮನೋಹರ್ ನಾಯ್ಕ್ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿ ಅಮಾನತ್ತುಗೊಂಡಿದ್ದರೂ, ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟಿಸಿದರು.

ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಯಾವುದೇ ಕಾರಣಕ್ಕೂ ಅವರನ್ನು ಈ ಶಾಲೆಯಲ್ಲಿ ನಿಯೋಜಿಸಲು ಬಿಡುವುದಿಲ್ಲವೆಂದು ಪ್ರತಿಕ್ರಿಯೆ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸಿ ಪ್ರತಿಭಟನೆ ಕೈಬಿಟ್ಟರು.

ನೊಂದ ವಿದ್ಯಾರ್ಥಿಯ ತಾಯಿ ಮಾತನಾಡಿ, ನಮ್ಮ ಗೋಳು ಕೇಳುವವರಿಲ್ಲ. ನೀವು ಅದೇ ಶಿಕ್ಷಕರನ್ನು ಪುನಃ ಇದೇ ಶಾಲೆಗೆ ನೇಮಿಸುತ್ತಿದ್ದೀರಾ ಈ ರೀತಿಯಾದರೆ ನಮ್ಮ ಮಕ್ಕಳ ವರ್ಗಾವಣೆ ಪತ್ರ ನೀಡಿ ಕಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೋಧಕರ ಹುದ್ದೆಗೆ ನೇಮಕಾತಿ ಮಾಡಿದರೆ ಗ್ರಾಮಸ್ಥರ ನೆರವಿನೊಂದಿಗೆ ಉಗ್ರ ಹೋರಾಟ ಮಾಡಲಾಗುವುದೆಂದು ಅಕ್ರೋಶಿತರಾಗಿ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ ಮಾತನಾಡಿ, ಇಲಾಖೆಗೆ ಇವರನ್ನು ವರ್ಗಾವಣೆ ಮಾಡುವ ಹಕ್ಕಿದೆ ನಮಗೆ ಇವರನ್ನು ವರ್ಗಾವಣೆ ಮಾಡುವಂತಿಲ್ಲ, ಹೈಕೋರ್ಟ್ ಆದೇಶ ಇದೆ ಯಾವುದೇ ಕಾರಣಕ್ಕೂ ಈ ಶಿಕ್ಷಕ ನರಿಯಂದಡ ಪ್ರೌಢ ಶಾಲೆಗೆ ಪ್ರವೇಶಿಸುವಂತಿಲ್ಲ, ಇವರನ್ನು ಯಾವುದೇ ಬೇರೆ ಶಾಲೆಗೆ ವರ್ಗಾವಣೆ ಮಾಡಿ ನಮ್ಮ ವಿರೋಧವಿಲ್ಲ ನಮ್ಮ ಶಾಲೆಗೆ ಮಾತ್ರ ಇವರನ್ನು ನೇಮಿಸಲು ನಾವು ಬಿಡುವುದಿಲ್ಲ ನೇಮಿಸಿದರೆ ಕೂಡಲೇ ಆಡಳಿತ ಮಂಡಳಿ ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದೇವೆ ಎಂದು ಪ್ರತಿಭಟಿಸಿದರು. ದೌರ್ಜನ್ಯ ನಡೆದ ಸಂದರ್ಭ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಬಂದಿಲ್ಲ ಎಂದು ಕಿಡಿಕಾರಿದರು.

ಗ್ರಾಮಸ್ಥ ಜೆಪ್ಪು ದೇವಯ್ಯ ಮಾತನಾಡಿ, ಪೂರ್ವಜರ ಶ್ರಮದಿಂದ ಶಾಲೆ ನಿರ್ಮಾಣವಾಗಿದೆ. ೨ ಕುಟುಂಬಸ್ಥರು ದಾನವಾಗಿ ೧೫ ಎಕರೆ ಜಾಗ ನೀಡಿದ್ದಾರೆ. ಈ ಶಾಲೆಗೆ ಕಳಂಕ ತರುವ ಕೆಲಸ ಶಿಕ್ಷಕ ಮಾಡಿದ್ದಾರೆೆ. ಆದ್ದರಿಂದ ಯಾವುದೇ ಕಾರಣಕ್ಕೂ ಇವರನ್ನು ಈ ಶಾಲೆಗೆ ನೇಮಿಸಲು ಬಿಡುವುದಿಲ್ಲ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗ ದಾಮಯ್ಯ ಸ್ಥಳಕ್ಕೆ ಆಗಮಿಸಿ ಮಾಧ್ಯಮದೊಂದಿಗೆ ಮಾತನಾಡಿ, ಶಿಕ್ಷಕನನ್ನು ಈ ಶಾಲೆಗೆ ನಿಯೋಜಿಸಲು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ ಪ್ರತಿಭಟನಾಕಾರರ ಮಾಹಿತಿ ಪಡೆದುಕೊಂಡಿದ್ದೇನೆ. ಇದನ್ನು ಇಲಾಖೆಗೆ ಸಲ್ಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಿರೀಶ್ ಪೂಣಚ್ಚ, ಪದಾಧಿಕಾರಿಗಳು, ಪೋಷಕರು, ಕೋಕೇರಿ, ಚೇಲಾವರ, ಪಾಲಂಗಾಲ, ಕರಡ, ನರಿಯಂದಡ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.