ಕೂಡಿಗೆ, ಜು. ೩೧: ಕುಶಾಲನಗರ-ಮಡಿಕೇರಿ ಹೆದ್ದಾರಿಯ ನಡುವಿನ ಆನೆಕಾಡು ಸಮೀಪದ ಮುಖ್ಯ ರಸ್ತೆಯಲ್ಲಿ ರಾತ್ರಿ ಮಲಗಿದ್ದ ಐದು ಹಸುಗಳಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ಹಸುಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ಭಾನುವಾರ ರಾತ್ರಿ ಆನೆಕಾಡು ಪ್ರದೇಶದಲ್ಲಿ ಕಾಡಿನಲ್ಲಿ ಹುಲ್ಲು ಸೇರಿದಂತೆ ಇತರೆ ಅಹಾರವನ್ನು ತಿಂದು ಹೆದ್ದಾರಿಯ ಪಕ್ಕದಲ್ಲಿ ಮತ್ತು ರಸ್ತೆಯಲ್ಲಿ ಹಸುಗಳು ಕಾಣದೆ ಅವುಗಳ ಮೇಲೆ ಹೆದ್ದಾರಿಯಲ್ಲಿ ಚಲಿಸುವ ವಾಹನಗಳೇ ಡಿಕ್ಕಿ ಹೊಡೆದ ಪರಿಣಾಮವಾಗಿ, ಎರಡು ಹಸುಗಳು ಸಾವನ್ನಪ್ಪಿ, ಇನ್ನೂ ಎರಡು ಹಸುಗಳು ಗಂಭೀರ ಗಾಯಗೊಂಡಿವೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕುಶಾಲನಗರ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆದ್ದಾರಿಯ ಆನೆಕಾಡು ಸಮೀಪದ ಹಸುಗಳಿಗೆ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಮಾಹಿತಿ ಪೊಲೀಸ್ ಇಲಾಖೆಗೆ ತಿಳಿದ ತಕ್ಷಣವೇ ಕುಶಾಲನಗರ ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್ ಮತ್ತು ಕುಶಾಲನಗರ ಸಂಚಾರಿ ಠಾಣಾಧಿಕಾರಿ ಕಾಶಿಕುಮಾರ್ ಸೇರಿದಂತೆ ಕುಶಾಲನಗರ ಸಮಾಜ ಸೇವಕ ಚಂದ್ರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ಡಿಕ್ಕಿಯಾಗಿ ರಸ್ತೆಯ ಬದಿಯಲ್ಲಿ ಬಿದ್ದಿದ ಹಸುಗಳುನ್ನು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಹಗ್ಗ ಕಟ್ಟಿ ವಾಹನಕ್ಕೆ ಎತ್ತಿ ಪಶು ಚಿಕಿತ್ಸಾಲಯಕ್ಕೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಡಿಕ್ಕಿ ಹೊಡೆತಕ್ಕೆ ಸಾವನ್ನಪ್ಪಿದ ಎರಡು ಹಸುಗಳನ್ನು ಗ್ರಾಮ ಪಂಚಾಯತಿ ವತಿಯಿಂದ ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿ ಗುಂಡಿ ತೆಗೆದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಗಾಯಗೊಂಡಿದ್ದ ಹಸುವಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ.ಕೆ. ನಾಗರಾಜಶೆಟ್ಟಿ