ಮಡಿಕೇರಿ, ಜು. ೩೧: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಹಿಂದಿನ ವರ್ಷಗಳಷ್ಟು ತೀವ್ರತೆಯನ್ನು ಕಾಣುತ್ತಿಲ್ಲ. ಆದರೆ ನಡುನಡುವೆ ಭಾರೀ ಮಳೆ ಸುರಿಯುವುದರೊಂದಿಗೆ ಮತ್ತೆ ಬಿಸಿಲಿನ ವಾತಾವರಣದಂತಹ ಸನ್ನಿವೇಶದಿಂದಾಗಿ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಬೆಳೆಗೆ ಭಾರೀ ಧಕ್ಕೆಯಾಗುತ್ತಿದೆ. ಜಿಲ್ಲೆಯ ಶ್ರೀಮಂಗಲ ಹೋಬಳಿ, ಹುದಿಕೇರಿ ಹೋಬಳಿ, ನಾಪೋಕ್ಲು, ಭಾಗಮಂಡಲ, ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಫಿ ತೋಟಗಳಲ್ಲಿ ಕಾಫಿ ಉದುರುವಿಕೆ ದಿನೇದಿನೇ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ, ಕೊಳೆ ರೋಗದಿಂದಲೂ ಕಾಫಿ ಫಸಲು ಹಾನಿಗೀಡಾಗುತ್ತಿದ್ದು, ಬೆಳೆಗಾರರು ಆತಂಕ ಎದುರಿಸುವಂತಾಗಿದೆ.

ಕಾಫಿ ಫಸಲಿಗೆ ಜಿಲ್ಲೆಯಲ್ಲಿ ಧಕ್ಕೆಯಾಗುತ್ತಿರುವ ನಿಟ್ಟಿನಲ್ಲಿ ಬೆಳೆನಷ್ಟದ ಸಮೀಕ್ಷೆಗೆ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ. ವರ್ಷದ ಬೆಳೆ ಹಾನಿಗೀಡಾಗುತ್ತಿರುವುದರಿಂದ ಇದರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಿ, ನಷ್ಟ ಪರಿಹಾರ ಒದಗಿಸು ವಂತಾಗಬೇಕು ಎಂಬ ಆಗ್ರಹ ಬೆಳೆಗಾರರಿಂದ ಕೇಳಿಬರುತ್ತಿದೆ.

ಇದೀಗ ಬೆಳೆ ನಷ್ಟವಾಗುತ್ತಿರುವ ಕುರಿತು ಜಂಟಿ ಸಮೀಕ್ಷೆಯ ಮೂಲಕ ಅಧ್ಯಯನ ನಡೆಸಿ ವರದಿಯನ್ನು ತಯಾರಿಸುವ ಕುರಿತು ಜಿಲ್ಲಾಡಳಿತ ಮುಂದಾಗುತ್ತಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಬೆಳೆಗಾರರ ಸಂಘಟನೆಗಳೂ ಈ ಬಗ್ಗೆ ಮನವಿ ಮಾಡಿವೆ. ಈ ಬಗ್ಗೆ ಸಮಿತಿಯೊಂದನ್ನು ರಚಿಸಲಾಗಿದೆ.

ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಕಾಫಿ ಮಂಡಳಿಯ ಅಧಿಕಾರಿ - ಸಿಬ್ಬಂದಿಗಳು ಈ ಸಮಿತಿಯಲ್ಲಿದ್ದು, ಜಂಟಿ ಸಮೀಕ್ಷೆಯ ಮೂಲಕ ಕೂಲಂಕಷ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗುವುದು. ವರದಿ ಬಳಿಕ ಈ ಬಗ್ಗೆ ಸರಕಾರ - ಸಂಬAಧಿಸಿ ದವರಿಗೆ ವಿವರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಇಲಾಖೆಗಳ ಸಿಬ್ಬಂದಿಗಳು ಇದೀಗ ಸಮೀಕ್ಷೆಗೆ ಮುಂದಾಗಲು ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.