ಕುಶಾಲನಗರ, ಜು. ೩೧ : ಸಮಾಜಕ್ಕೆ ಒಳಿತಾಗುವ, ನೊಂದವರಿಗೆ ನ್ಯಾಯ ಒದಗಿಸುವ, ರಾಜಕಾರಣಿ ಗಳನ್ನು ತಿದ್ದುವ ವರದಿಗಳು ಪತ್ರಕರ್ತರ ಮೂಲಕ ನಿರಂತರವಾಗಿ ಪ್ರಕಟ ವಾಗಬೇಕು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಕುಶಾಲನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ವರದಿ ಮಾಡುವ ಭರಾಟೆಯಲ್ಲಿ ಯಾವುದೇ ವ್ಯಕ್ತಿಯ ತೇಜೋವಧೆಗೆ ಮುಂದಾಗಬಾರದು.

ಸಮಾಜಮುಖಿ ಚಿಂತನೆಗಳನ್ನು ಮೂಡಿಸುವ, ಉತ್ತಮ ಸಂದೇಶ ನೀಡುವ ವರದಿಗಳು ಹೆಚ್ಚಾಗಿ ಪ್ರಕಟಗೊಳ್ಳಬೇಕಿದೆ ಎಂದ ಅಪ್ಪಚ್ಚುರಂಜನ್, ಪ್ಲಾಸ್ಟಿಕ್ ಮುಕ್ತ ವಾತಾವರಣ, ಸಮೃದ್ಧ ಪರಿಸರ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಈ ಬಗ್ಗೆ ಪತ್ರಿಕೆ ಮಾಧ್ಯಮಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಕರೆ ನೀಡಿದರು. ನಿತ್ಯ ಸಮಯ ಪಾಲನೆ ಮಾಡುವ ಮೂಲಕ ಯಶಸ್ಸು ಸಾಧ್ಯ ಎಂದ ಅವರು ಪತ್ರಿಕಾ ದಿನಾಚರಣೆಯಲ್ಲಿ ಸಂಘದ ಸದಸ್ಯರ ಕುಟುಂಬ ಮಿಲನಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ವಿಚಾರ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಮಾತನಾಡಿ, ಅರಣ್ಯ ಕ್ಷೀಣಿಸಿದಂತೆ ಪರಿಸರ ಅಸಮತೋಲನ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯೀಕರಣಕ್ಕೆ ಅರಣ್ಯ ಇಲಾಖೆ ಹೆಚ್ಚಿನ ಒತ್ತು ನೀಡಿದೆ. ಇದಕ್ಕೆ ಪೂರಕವಾಗಿ ವರದಿಗಳನ್ನು ಮಾಡುವ ಮೂಲಕ ಪತ್ರಕರ್ತರು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಪತ್ರಕರ್ತರನ್ನು ಅಭಿನಂದಿಸಿದರು. ಶುದ್ಧ ವಾಯು, ಜಲಕ್ಕಾಗಿ ಪರಿತಪಿಸುವ ದಿನಗಳ ಬಗ್ಗೆ ಎಚ್ಚರವಹಿಸಬೇಕಿದೆ. ಮಾಧ್ಯಮಗಳ ಮೂಲಕ ಸ್ವಚ್ಛತೆ ಜಾಗೃತಿ ಮಾಹಿತಿ ಬಿತ್ತರವಾಗಬೇಕು. ಪ್ರತಿಯೊಬ್ಬರು ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸುವಂತಾಗಬೇಕಿದೆ ಎಂದರು.

ಉದ್ಯಮಿ ಎಸ್‌ಎಲ್‌ಎನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್ ಮಾತನಾಡಿ, ನಿಸರ್ಗ ರಮಣೀಯ ಕೊಡಗಿನ ಸೌಂದರ್ಯವನ್ನು ಪ್ಲಾಸ್ಟಿಕ್ ತ್ಯಾಜ್ಯಗಳು ಕಳೆಗುಂದಿಸುತ್ತಿದೆ. ಆದಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಎಲ್ಲರೂ ಚಿಂತನೆ ಹರಿಸಬೇಕಿದೆ. ಕುಶಾಲನಗರ ಪಟ್ಟಣವನ್ನು ಪ್ರವಾಹ ಮುಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ಬದುಕು ಕಬ್ಬಿಣದ ಕಡಲೆಯಿದ್ದಂತೆ. ಹಲವು ತೊಡಕುಗಳನ್ನು ಸಮರ್ಥವಾಗಿ ಎದುರಿಸಿ, ಎದೆಗುಂದದೆ ನಡೆಯುವ, ಸಮಾಜದ ತಪ್ಪುಗಳನ್ನು ಆಮಿಷ, ಬೆದರಿಕೆಗಳಿಗೆ ಜಗ್ಗದೆ ಬಿತ್ತರಿಸುವ ಧೈರ್ಯ ಅಗತ್ಯವಿದೆ ಎಂದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಾಲನಗರ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ದಂಪತಿ ಯನ್ನು ಸನ್ಮಾನಿಸಿ ಗೌರವಿಸಲಾಯಿತು.

ವಾರ್ಷಿಕ ಪ್ರಶಸ್ತಿ ವಿಜೇತರಾದ ಎಂ.ಎನ್. ಚಂದ್ರಮೋಹನ್, ಕೆ.ಕೆ. ನಾಗರಾಜಶೆಟ್ಟಿ, ಟಿ.ಆರ್. ಪ್ರಭುದೇವ್, ರಘು ಹೆಬ್ಬಾಲೆ, ವಿನೋದ್, ಇಸ್ಮಾಯಿಲ್ ಕಂಡಕೆರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಚೈತನ್ಯ ಸಿ. ಮೋಹನ್, ತಿಷ್ಯ ಪಿ.ಎಸ್., ಚಿತ್ತಾರ ಎಸ್.ಪಿ., ಇಂಚರ ಎಸ್.ಪಿ., ಅನನ್ಯ ಕೆ.ಎಸ್., ದೀಕ್ಷ ಕೆ.ಎಸ್., ಮಹಮ್ಮದ್ ಅರ್ಹನ್, ಮಹಮ್ಮದ್ ಜೈನ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕರಾದ ಪಿ.ಆರ್. ಪ್ರಭುದೇವ್ ಕಾರ್ಯಕ್ರಮ ನಿರೂಪಿಸಿದರು, ನಿರ್ದೇಶಕ ಕೆ.ಜೆ. ಶಿವರಾಜ್ ವಂದಿಸಿದರು. ಈ ಸಂದರ್ಭ ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ ಸೇರಿದಂತೆ ಇನ್ನಿತರರು ಇದ್ದರು.