ರಾಜ್ಯ ಸಚಿವರು, ಪಕ್ಷದ ಮುಖಂಡರಿಗೆ ಹೈಕಮಾಂಡ್ ಬುಲಾವ್
ಬೆಂಗಳೂರು, ಜು. ೩೧: ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲು ಕರ್ನಾಟಕದ ಸಚಿವರು, ಪಕ್ಷದ ಮುಖಂಡರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆ. ೨ ರಂದು ಆಹ್ವಾನಿತ ಮುಖಂಡರು ನವದೆಹಲಿಗೆ ತೆರಳಲಿದ್ದಾರೆ. ಆಡಳಿತಾರೂಢ ಪಕ್ಷದಲ್ಲಿ ಅಸಮಾಧಾನ ತಲೆದೋರಿರುವ ಲಕ್ಷಣಗಳು ಗೋಚರಿಸಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ಕುತೂಹಲ ಮೂಡಿಸಿದೆ. ನಮಗೆ ರಾಜಕೀಯ ಅಜೆಂಡಾ ಇದೆ. ಸಂಸತ್ ಚುನಾವಣೆಗೆ ನಾವು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಲೋಕಸಭಾ ಚುನಾವಣೆ ಹಾಗೂ ಟಿಕೆಟ್ ಹಂಚಿಕೆ ಪ್ರಕ್ರಿಯೆಗಾಗಿ ನಾನು ನಾಯಕರಿಗೆ ಅವರ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕಿದೆ ಎಂದು ಡಿ.ಕೆ ಶಿವಕುಮಾರ್ ಹೈಕಮಾಂಡ್ ಬುಲಾವ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ಜು. ೩೧: ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬAಧಿಸಿ ದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಸೋಮ ವಾರ ನಿರಾಕರಿಸಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಸಿಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಫೆಬ್ರವರಿ ೧೦ ರಂದು ನೀಡಿದ್ದ ಆದೇಶದ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಮಾತನಾಡಿ, ಸಂಸ್ಥೆಯ ಪರವಾಗಿ ಆದೇಶವಿದ್ದರೂ, ಹೈಕೋರ್ಟ್ನ ವಿಭಾಗೀಯ ಪೀಠವು ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ ಎಂದರು.
ನಗ್ನ ಮೆರವಣಿಗೆ ಪ್ರಕರಣ : ನ್ಯಾಯಾಲಯ ಮೆಟ್ಟಿಲೇರಿದ ಸಂತ್ರಸ್ತೆಯರು
ನವದೆಹಲಿ, ಜು. ೩೧: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತç ಗೊಳಿಸಿ, ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬAಧಿಸಿದAತೆ, ಇಬ್ಬರು ಸಂತ್ರಸ್ತೆಯರು ಇದೀಗ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಬೇಕು ಎಂದು ಇಬ್ಬರು ಮಹಿಳೆಯರು ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಲೈವ್ ಕಾನೂನಿನ ಪ್ರಕಾರ ತಮ್ಮ ಗುರುತನ್ನು ಗೌಪ್ಯವಾಗಿಡಬೇಕೆಂದು ವಿನಂತಿ ಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊ ಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ. ಕಲಹ ಪೀಡಿತ ಮಣಿ ಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತçಗೊಳಿಸಿ, ಮೆರವಣಿಗೆ ಮಾಡಿದ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಮಾಡಿರುವ ಮನವಿಯನ್ನು ಕೂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ಮಣಿಪುರ ವಿಚಾರವಾಗಿ ಗೋವಾ ಸದನದಲ್ಲಿ ಗದ್ದಲ
ಪಣಜಿ, ಜು. ೩೧: ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಗೋವಾ ವಿಧಾನಸಭೆಯ ಎಲ್ಲಾ ಏಳು ಪ್ರತಿಪಕ್ಷಗಳ ಸದಸ್ಯರನ್ನು ಸೋಮವಾರ ಎರಡು ದಿನಗಳ ಕಾಲ ಅಮಾನತುಗೊಳಿಸಲಾಯಿತು. ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ, ಕಾಂಗ್ರೆಸ್ ಶಾಸಕರಾದ ಅಲ್ಟೋನ್ ಡಿ'ಕೋಸ್ಟಾ ಮತ್ತು ಕಾರ್ಲೋಸ್ ಫೆರೇರಾ, ಎಎಪಿಯ ವೆಂಜಿ ವಿಗಾಸ್ ಮತ್ತು ಕ್ರೂಜ್ ಸಿಲ್ವಾ, ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ್ ಸರ್ದೇಸಾಯಿ ಮತ್ತು ರೆವಲ್ಯೂಷನರಿ ಗೋನ್ಸ್ ಪಾರ್ಟಿಯ ವೀರೇಶ್ ಬೋರ್ಕರ್ ಅಮಾನತುಗೊಂಡವರು. ಪ್ರಶ್ನೋತ್ತರ ಅವಧಿಯ ನಂತರ, ಅಲೆಮಾವೊ ಅವರು ಸದನದಲ್ಲಿ ಮಣಿಪುರ ಹಿಂಸಾಚಾರದ ಕುರಿತು ಚರ್ಚೆಗೆ ವಿನಂತಿಸಿದರು. ಇದೇ ವಿಷಯಕ್ಕೆ ಸಂಬAಧಿಸಿದAತೆ ಖಾಸಗಿ ಸದಸ್ಯರ ನಿರ್ಣಯವನ್ನು ಹಿಂದಿನ ಶುಕ್ರವಾರ ಕ್ರೂಜ್ ಸಿಲ್ವಾ ಅವರು ಮಂಡಿಸಿದ್ದರು. ಆಗಲೂ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಆ ಸಮಯದಲ್ಲಿ ನಿರ್ಣಯದ ಕುರಿತು ಚರ್ಚಿಸಲು ಅನುಮತಿ ನೀಡಿರಲಿಲ್ಲ. ಪ್ರತಿಪಕ್ಷದ ಸದಸ್ಯರೆಲ್ಲರೂ ಕಪ್ಪು ಬಟ್ಟೆ ಧರಿಸಿ ಸದನದಲ್ಲಿ ಗದ್ದಲ ಸೃಷ್ಟಿಸಿದರು.
೬೮ನೇ ಮಹಡಿಯಿಂದ ಬಿದ್ದು ಸಾವು
ಹಾಂಗ್‌ಕಾAಗ್, ಜು. ೩೧: ಗಗನಚುಂಬಿ ಕಟ್ಟಡಗಳ ತುತ್ತತುದಿಗೆ ತಲುಪಿ ನೋಡುಗರ ಮೈ ಜುಮ್ಮೆನಿಸುವಂತೆ ಸ್ಟಂಟ್, ರೀಲ್ಸ್ (ವಿಡಿಯೊ) ಮಾಡುತ್ತಿದ್ದ ರೆಮಿ ಲುಸಿಡಿ (೩೦) ಹಾಂಗ್‌ಕಾAಗ್‌ನ ವಸತಿ ಕಟ್ಟಡವೊಂದರ ೬೮ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಲುಸಿಡಿ ಅವರು ಫ್ರೆಂಚ್ ಡೇರ್ ಡೆವಿಲ್ ಎಂದೇ ಖ್ಯಾತಿ ಪಡೆದಿದ್ದರು. ಇವರು ಟ್ರೆಗುಂಟ ಟವರ್ ಸಂಕೀರ್ಣ ಹತ್ತಿದ್ದ ವೇಳೆ ಬಿದ್ದಿದ್ದಾರೆ. ಅವರು ಕಾಲು ಜಾರಿ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಸಂಜೆ ೬ ಗಂಟೆ ವೇಳೆಗೆ ಲುಸಿಡಿ ಅವರು ೪೦ನೇ ಮಹಡಿಯಲ್ಲಿನ ಸ್ನೇಹಿತ ನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯುರಿಟಿ ಬಳಿ ಹೇಳಿದ್ದರು, ಸೆಕ್ಯುರಿಟಿ ತಡೆಯಲು ಯತ್ನಿಸಿದರೂ ಅಷ್ಟರಲ್ಲಿ ಅವರು ಕಟ್ಟಡದ ಒಳಗೆ ಪ್ರವೇಶಿಸಿದ್ದರು. ೪೯ನೇ ಮಹಡಿಗೆ ಲುಸಿಡಿ ಬಂದು ನಂತರ ಮೆಟ್ಟಿಲುಗಳ ಮೂಲಕ ಕೊನೆಯ ಮಹಡಿಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹಾಂಗ್‌ಕಾAಗ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲುಸಿಡಿ ಅವರ ಕ್ಯಾಮೆರಾ ದೊರಕಿದ್ದು, ಅದರಲ್ಲಿ ಎತ್ತರಕ್ಕೆ ಏರಿ ಅವರು ಸಾಹಸಗಳನ್ನು ಮಾಡಿದ ವಿಡಿಯೊಗಳು ದಾಖಲಾಗಿವೆ.
ಆತ್ಮಾಹುತಿ ದಾಳಿಯ ಹಿಂದೆ ಐಸಿಸ್ ಕೈವಾಡ ಶಂಕೆ
ಪೆಶಾವರ, ಜು. ೩೧: ೪೪ ಜನರು ಮೃತಪಟ್ಟ ರಾಜಕೀಯ ಪಕ್ಷದ ಸಮಾವೇಶವೊಂದರಲ್ಲಿ ನಡೆದ ಆತ್ಮಾಹುತಿ ದಾಳಿಯ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಕೈವಾಡವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪಾಕಿಸ್ತಾನದ ಖೈಬರ್ ಪುಂಖ್ಯಾ ಪ್ರಾಂತ್ಯದ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಂಪ್ರದಾಯವಾದಿ ಜಮಿಯತ್ ಉಲೇಮಾ ಇಸ್ಲಾಂ-ಫಜಲ್ (ಜೆಯುಐ-ಎಫ್) ಪಕ್ಷದ ೪೦೦ಕ್ಕೂ ಹೆಚ್ಚು ಸದಸ್ಯರು ಖಾ ಪಟ್ಟಣದಲ್ಲಿ ಸಮಾವೇಶಗೊಂಡಿದ್ದಾಗ ಭಾನುವಾರ ಈ ದಾಳಿ ನಡೆದಿದೆ. ಘಟನೆಯಲ್ಲಿ ೧೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟದ ಕುರಿತಂತೆ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ. ಸಂಬAಧಪಟ್ಟ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಆರಂಭಿಕ ತನಿಖೆಯಲ್ಲಿ ನಿಷೇಧಿತ ಸಂಘಟನೆ ಐಸಿಸ್) ಭಾಗಿಯಾಗಿರುವಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ನಜೀರ್ ಖಾನ್ ಹೇಳಿದ್ದಾರೆ. ಆತ್ಮಾಹುತಿ ಬಾಂಬರ್ ೧೦ ಕೆ.ಜಿಗಳಷ್ಟು ಸ್ಫೋಟಕಗಳನ್ನು ಸ್ಫೋಟಕ್ಕೆ ಬಳಸಿದ್ದಾನೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಅಖ ಹಯಾತ್ ಖಾನ್ ಹೇಳಿದ್ದಾರೆ. ಸಭೆಯ ಮುಂದಿನ ಸಾಲುಗಳಲ್ಲಿ ಕುಳಿತಿದ್ದವರ ಪೈಕಿ ಬಾಂಬರ್ ಕೂಡ ಇದ್ದ ಎಂದು ಅವರು ತಿಳಿಸಿದ್ದಾರೆ.