"ಆಕಾಶವಾಣಿ ಮಡಿಕೇರಿ. ಇದೀಗ ೧೦೩.೧ ಮೆಘಾ ಹರ್ಟ್ಸ್ ತರಂಗಾAತರಗಳಲ್ಲಿ...'

ಹೀಗೆ ಮುಂಜಾನೆಯ ಮಂಜನ್ನು ಭೇದಿಸುತ್ತ ಮಡಿಕೇರಿ ಆಕಾಶವಾಣಿಯಲ್ಲಿ ತೇಲಿ ಬರುವ ಸುಸ್ಪಷ್ಟ ಸುಮಧುರ ಧ್ವನಿ ದಿನವಿಡೀ ಮನೆ ಮನಗಳಿಗೆ ಮುದ ನೀಡು ವಂತದ್ದು. ಮಡಿಕೇರಿ ಆಕಾಶವಾಣಿ ಯಲ್ಲಿ ಉದ್ಘೋಷಕಿಯಾಗಿರುವ ಕೂಪದಿರ ಶಾರದಾ ನಂಜಪ್ಪ ಅವರ ಕೋಗಿಲೆ ಕಂಠದ ಪರಿಚಯ ಇಲ್ಲದವರು ವಿರಳ ಎನ್ನಬಹುದು. ಧ್ವನಿಯನ್ನು ಆಲಿಸಿ ಇವರನ್ನು ಕಲ್ಪಿಸಿಕೊಳ್ಳಬಲ್ಲ ಯಾರಿಗೂ ನಿರಾಸೆ ಮಾಡದಂತಹ ಆಕರ್ಷಕ ನಡೆ-ನುಡಿ-ರೂಪ ವ್ಯಕ್ತಿತ್ವ ಇವರದು. ಕಾಲ ನಿಯಮದಂತೆ ಆರೋಗ್ಯಪೂರ್ಣರಾಗಿ ನಿನ್ನೆ ನಿವೃತ್ತರಾಗಿರುವ ಇವರ ಧ್ವನಿ ಆಕಾಶವಾಣಿ ಯಲ್ಲಿ ಅಪರೂಪವಾಗುವುದನ್ನು ಊಹಿಸಿಕೊಳ್ಳುವುದು ತುಸು ಕಷ್ಟವೇ ಸರಿ.

ಕೆಂಜAಗಡ ಕಾಶಿ ಗಣಪತಿ ಹಾಗೂ ಸುಂದರಿ ಅವರ ಮೂವರು ಮಕ್ಕಳಲ್ಲಿ ಎರಡನೆಯವರಾಗಿ ಚಿಕ್ಕಮಗಳೂರಿನಲ್ಲಿ ಇಸವಿ ೧೯೬೫ ರಲ್ಲಿ ಜನಿಸಿದ ಶಾರದಾ ಅವರು ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಮತ್ತು ಬಿ. ಎಡ್ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲೇ ಪೂರೈಸಿದರು. ಕೂಪದಿರ ರಾಜಾ ನಂಜಪ್ಪ ಅವರನ್ನು ವಿವಾಹವಾಗಿ ಕೆಲ ಕಾಲ ಬೆಂಗಳೂರಿನಲ್ಲಿದ್ದು ಬಳಿಕ ಮಡಿಕೇರಿ ಯಲ್ಲಿ ನೆಲೆಸಿದರು. ಮೂರ್ನಾಡು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿದ ಶಾರದಾ ಅವರು ೧೯೯೪ ರಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರದ ಉದ್ಘೋಷಕಿಯಾಗಿ ನೇಮಕಗೊಂಡರು. "ಕೊಡವಸಿರಿ" ಕಾರ್ಯಕ್ರಮವನ್ನು ಸಿದ್ಧಪಡಿಸಿ ಪ್ರಸಾರ ಮಾಡುವ ಕೈಂಕರ್ಯವನ್ನು ಕಳೆದ ಮೂವತ್ತು ವರ್ಷಗಳಿಂದ ಮಾಡುತ್ತಾ ಬಂದರು.

ಕೊಡವ ಸಿರಿ ಕಾರ್ಯಕ್ರಮದಲ್ಲಿ ಭಾಷೆ, ಸಂಸ್ಕೃತಿ, ಆಚಾರ- ವಿಚಾರಗಳು, ನಶಿಸಿ ಹೋಗುತ್ತಿರುವ ಜನಾಂಗದ ಪದ್ಧತಿಗಳು, ಕೃಷಿ ವಿಚಾರ, ಕೊಡಗಿನ ವೀರ ಪರಂಪರೆ, ಜಾನಪದ, ಕ್ರೀಡೆ, ವನ್ಯ ಸಂಪತ್ತು, ಕ್ರೀಡಾಪಟು ಗಳ ಪರಿಚಯ, ಸಾಹಿತ್ಯ, ಈಗ ಇರುವ ಮತ್ತು ನಮ್ಮನ್ನಗಲಿದ ಸಾಹಿತಿಗಳು, ನಾಟಕ, ಸಂಗೀತ ಹೀಗೆ ವಿಭಿನ್ನ ವಿಚಾರಗಳಿಗೆ ಆದ್ಯತೆ ನೀಡಿ ಆಯಾ ಕ್ಷೇತ್ರಗಳ ಕುರಿತು ಜನತೆಗೆ ಮಾಹಿತಿ ನೀಡುವ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು. ಪಳಮೆ ಪೊಮ್ಮಾಲೆ, ಚೋದ್ ಪಳಮೆ, ಪಳಂಜೊಲ್ಲ್ ರಾ ಚೋದ್, ಪಚ್ಚೆ ಪಚ್ಚಡ, ಕಾರ್ಡ್ ಲ್ ಕತೆ, ಇದಾ ಇದ್ ನಾಡ ಊರ್, ಕೊಡಗ್ ರ ನಾಯಕಂಗ, ಅಂದಿ ಪಳಮೆ, ಜನಪದ ಕತೆ, ಗೀತಾ ದರ್ಶನ, ಕೊಡವ ಪುದುಮೆ-ಈ ಶೀರ್ಷಿಕೆಗಳ ಮೂಲಕ ನೂರಾರು ಜನರನ್ನು ಬಾನುಲಿಯತ್ತ ಸೆಳೆಯುವ ಕೆಲಸ ಮಾಡಿದರು. ಕೊಡಗಿನಲ್ಲಿರುವ ಮತ್ತು ಕೊಡಗಿನವರಾಗಿದ್ದು ಪರ ಊರಿನಲ್ಲಿ ನೆಲೆಸಿರುವ ಹಲವು ಸಂಪನ್ಮೂಲ ವ್ಯಕ್ತಿಗಳನ್ನು ಸಂದರ್ಶಿಸುವ ಮೂಲಕ ಅವರ ಅನುಭವ ಧಾರೆಯನ್ನು ಜನತೆಗೆ ಉಣಬಡಿಸುವ ಕೆಲಸ ಮಾಡಿದರು.

ಶಾರದಾ ಅವರು ಉತ್ತಮ ನಾಟಕ ಕಲಾವಿದೆ ಕೂಡ ಹೌದು. ಹಲವು ರೇಡಿಯೋ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಹಲವು ಯುವ ಬರಹಗಾರರನ್ನು ಕೊಡವ ಸಿರಿ ರೂಪಿಸಿದೆ. ಕೊಡವ ಸಿರಿಯಲ್ಲಿ ಪ್ರಸಾರವಾದ ಭಾಷಣಗಳ ಸಂಗ್ರಹವೊAದನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹೊರ ತಂದಿದೆ. ಅಕಾಡೆಮಿ ಹೊರ ತಂದ "ಮುತ್ತು ಮಾಲೆ" ಎಂಬ ಭಕ್ತಿ ಗೀತೆಗಳ ಸಿಡಿ ತಯಾರಿಸುವಲ್ಲಿ ಅದರ ಪೂರ್ಣ ಜವಾಬ್ದಾರಿ ನಿರ್ವಹಿಸಿದವರು ಶಾರದಾ ಅವರು. ಇವರ ಪ್ರಯತ್ನದಿಂದಾಗಿಯೇ ಬೆಳಗ್ಗಿನ ಉದಯರಾಗ- ಭಕ್ತಿ ಸಂಗೀತದಲ್ಲಿ ಕೊಡಗಿನ ಗಣ್ಯ ಕವಿಗಳ ಭಕ್ತಿಗೀತೆಗಳು ನಿರಂತರ ಪ್ರಸಾರವಾಗಲು ಅನುವು ದೊರೆಯಿತು.

ಆಕಾಶವಾಣಿ ಪ್ರಸಾರ ಮಾಡುವ ಇನ್ನಿತರ ಕಾರ್ಯಕ್ರಮಗಳಲ್ಲೂ ಶಾರದಾ ನಂಜಪ್ಪ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಕೌಟುಂಬಿಕ ಮಾತುಕತೆ, ನೇರ ಫೋನ್ ಇನ್ ಕಾರ್ಯಕ್ರಮ, ವೀಕ್ಷಕ ವಿವರಣೆಗಳಲ್ಲಿ ಇವರು ಜನತೆಗೆ ಸಮೀಪವಾದರು. ಮಡಿಕೇರಿ ಆಕಾಶವಾಣಿ ಪ್ರಸಾರ ಮಾಡಿದ ಐದು ರೂಪಕಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿತು. ಈ ಐದು ರೂಪಕಗಳಲ್ಲೂ ಪ್ರಧಾನ ಧ್ವನಿ ಶಾರದಾ ಅವರದು. ರೇಡಿಯೋದಲ್ಲಿ ಪ್ರತಿ ನಿತ್ಯ ಪ್ರಸಾರವಾಗುವ ಸಾಮಾಜಿಕ ಕಳಕಳಿಯ ಸಂದೇಶಗಳಲ್ಲಿ ಕೂಡ (ಜಿಂಗಲ್) ಮುಕ್ಕಾಲು ಪಾಲು ಇರುವುದು ಶಾರದಾ ಮತ್ತು ಉದ್ಘೋಷಕ ಸುಬ್ರಾಯ ಸಂಪಾಜೆ ಅವರ ಧ್ವನಿಯಲ್ಲಿರುವ ಸಂದೇಶಗಳು! ಶಾರದಾ ಅವರ ಧ್ವನಿಯಲ್ಲಿರುವ ಸಂದೇಶವೊAದಕ್ಕೆ ರಾಜ್ಯ ಪ್ರಶಸ್ತಿಯೂ ಲಭಿಸಿತು.

ನಿಧನ ಸುದ್ದಿಗಾಗಿ ಈ ಸುದ್ದಿ ಪ್ರಸಾರಕ್ಕೆ ಪ್ರಸಾರ ಭಾರತಿಯಿಂದ ಅನುಮತಿ ದೊರೆಯಲು ಶಾರದಾ ನಂಜಪ್ಪ ವಿಶೇಷ ಶ್ರಮ ವಹಿಸಿದರು. ೨೦೧೮-೧೯ರಲ್ಲಿ ನಡೆದ ಮಳೆ, ಭೂಕುಸಿತ ಮತ್ತು ಪ್ರಕೃತಿ ವಿಕೋಪದ ಸಂದರ್ಭ ದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಸಂತ್ರಸ್ತರಿಗೆ ಇವರು ನೆರವಾದರು. ಆಗ ಪತ್ರಿಕೆ, ದೂರವಾಣಿ, ಟಿ ವಿ ಯಾವ ಮಾಧ್ಯಮಗಳೂ ಜನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಜನತೆ ರೇಡಿಯೋ ಒಂದನ್ನೇ ಮಾಹಿತಿಗಾಗಿ ಅವಲಂಬಿಸಿದ್ದರು. ಸಹೋದ್ಯೋಗಿ ಸುಬ್ರಾಯ ಸಂಪಾಜೆ ಅವರ ಜೊತೆಗೆ ಜಂಟಿಯಾಗಿ ನಡೆಸಿದ ಲೈವ್ ಕಾರ್ಯಕ್ರಮಗಳು ಜನರಿಗೆ ಅತ್ಯಂತ ಪ್ರಯೋಜನಕಾರಿಯಾದುವು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಡಿಕೇರಿ ರೇಡಿಯೋ ಜನತೆಗೆ ತುಂಬಿದ ಧೈರ್ಯ ಅಭೂತವಾದುದು. ಇದರಲ್ಲೂ ಶಾರದಾ ಅವರ ಪಾತ್ರ ಗಣನೀಯ. ಅನೇಕ ವೈದ್ಯರು ಮತ್ತು ಸಮಾಜದ ಮುಖ್ಯ ವಾಹಿನಿಯಲ್ಲಿ ರುವವರನ್ನು ಮಾತನಾಡಿಸಿ ಜನತೆಗೆ ಮಾಹಿತಿ ಮಾಡಿಕೊಡುವ ಹಾಗೂ ಧೈರ್ಯ ತುಂಬುವ ಕೆಲಸವನ್ನು ಅವರು ಮಾಡಿದರು.

ಒಟ್ಟಾರೆಯಾಗಿ ‘‘ತುಂಬಿದ ಕೊಡ ತುಳುಕುವುದಿಲ್ಲ’’ ಎಂಬ ಮಾತಿಗೆ ಮಾದರಿಯಾಗಿರುವ ಮಹಿಳೆ ಇವರು. ಶಾರದಾ ಬಾಳ ಸಂಗಾತಿ ನಿವೃತ್ತ ಬಾಟಾ ಮೆನೇಜರ್ ರಾಜಾ ನಂಜಪ್ಪ ಹಾಗೂ ಏಕಮಾತ್ರ ಸುಪುತ್ರಿ ನಿಕ್ಷಿತ್- (ಗಿಫ್ಟಿ ),ಅಳಿಯ ಗಾಂಡAಗಡ ಅವಿನ್ ಅಯ್ಯಪ್ಪರೊಂದಿಗೆ ಇವರ ಸಾರ್ಥಕ, ಸಂತೃಪ್ತ ಬದುಕಿನ ಎರಡನೆಯ ಇನ್ನಿಂಗ್ಸ್ ಸುಖ ಸಂತಸಗಳಿAದ ಸಮೃದ್ಧವಾಗಿರಲಿ ಎಂಬ ಹಾರೈಕೆ ಎಲ್ಲಾ ರೇಡಿಯೋ ಕೇಳುಗರದ್ದು.

-ಕೊಟ್ಟಕೇರಿಯನ ಲೀಲಾ ದಯಾನಂದ,

ಉಪ ಮಂಡಲ ಅಭಿಯಂತರರು, ಬಿ.ಎಸ್.ಎನ್.ಎಲ್,

ಮಡಿಕೇರಿ. ಮೊ: ೯೪೪೯೮೫೮೫೮೬