ಗೋಣಿಕೊಪ್ಪಲು, ಜು.೩೧: ಮುಂಜಾನೆಯಿAದಲೇ ವಿಶಾಲವಾದ ಕೆಸರುಗದ್ದೆಯ ಸುತ್ತಲೂ ಮಹಿಳೆಯರು, ಮಕ್ಕಳು ಸೇರಿದಂತೆ ನಾಗರಿಕರ ದಂಡು ಅಲ್ಲಿ ನೆರೆದಿತ್ತು. ಭತ್ತದ ಗದ್ದೆಯನ್ನು ಹದಗೊಳಿಸಿ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಮೈದಾನವನ್ನು ಅಣಿಗೊಳಿಸಲಾಗಿತ್ತು. ಈ ಕೆಸರಿನಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಓಡುವುದು, ಬೀಳುವುದು ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ಸಮುದಾಯದ ಬಾಂಧವರು ಒಂದೆಡೆ ಸೇರುವ ಪ್ರಯತ್ನದಲ್ಲಿ ಕೆಸರುಗದ್ದೆ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ಕಾಳಪ್ಪ ಕಾಲೋನಿಯಲ್ಲಿ ಒಕ್ಕಲಿಗರ ರಮೇಶ್ ಹಾಗೂ ಉದಯ ಸಹೋದರರ ಗದ್ದೆಯಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗರ ಯುವ ವೇದಿಕೆ ಇವರ ವತಿಯಿಂದ ಕೆಂಪೇಗೌಡ ಜಯಂತಿ ಪ್ರಯುಕ್ತ ೨ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ಜರುಗಿತು. ವಾಲಿಬಾಲ್, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ಥ್ರೋಬಾಲ್ ಹಾಗೂ ಕಪಲ್ಸ್ ರೇಸ್, ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆಗಿಂದ್ದಾಗಿಯೇ ಸುರಿಯುತ್ತಿದ್ದ ಮಳೆಯ ನಡುವೆ ಕ್ರೀಡಾಕೂಟವು ನೋಡುಗರ ಗಮನ ಸೆಳೆಯಿತು.

ಮಹಿಳೆಯರು ಹಾಗೂ ಪುರುಷರಿಗೆ ನಡೆದ ಹಗ್ಗಜಗ್ಗಾಟ ಅತ್ಯಂತ ಕುತೂಹಲ ಮೂಡಿಸಿತು. ಕೆಸರಿನ ನಡುವೆ

(ಮೊದಲ ಪುಟದಿಂದ) ಹಗ್ಗ ಹಿಡಿದು ಪೈಪೋಟಿ ನಡೆಸಿದರು. ಹಗ್ಗಜಗ್ಗಾಟದಲ್ಲಿ ಗೆಲುವು ಸಾಧಿಸಲು ಎರಡು ತಂಡಗಳು ಕೆಸರಿನ ನಡುವೆ ಸೆಣಸಾಟ ನಡೆಸಿದವು. ತಮ್ಮ ಪತ್ನಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಸ್ಪರ್ಧೆಯು ನೋಡುಗರನ್ನು ರಂಜಿಸಿತು.

ಒಂದು ಬದಿಯಿಂದ ಮತ್ತೊಂದು ಬದಿಗೆ ಕೆಸರಿನ ನಡುವೆ ತಮ್ಮ ಪತ್ನಿಯನ್ನು ಹೆಗಲ ಮೇಲೆ ಇರಿಸಿಕೊಂಡು ಓಡುತ್ತಿದ್ದಂತೆಯೇ ಆಯಾ ತಪ್ಪಿದ ಕೆಲವು ಜೋಡಿಗಳು ಕೆಸರಿನಲ್ಲಿಯೇ ಬಿದ್ದು ಹೊರಳಾಡುವಂತಾಗಿತ್ತು. ಇಂತಹ ಮನಮೋಹಕ ದೃಶ್ಯವನ್ನು ಕಂಡು ದಡದಲ್ಲಿದ್ದ ನೂರಾರು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು. ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ ಒಕ್ಕಲಿಗ ಸಮುದಾಯವು ಒಂದೆಡೆ ಸೇರುವ ಮೂಲಕ ಪರಸ್ಪರ ವಿಚಾರ ವಿನಿಮಯ ನಡೆಸಿದರು.

೨ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ರಾಜಕೀಯವಾಗಿ ಭಾರತ ದೇಶಕ್ಕೆ ಪ್ರಧಾನಿಯನ್ನು ಕೊಟ್ಟಂತಹ ಕೀರ್ತಿ ಒಕ್ಕಲಿಗ ಸಮಾಜಕ್ಕಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ನೀಡಿದಂತ ಸಮಾಜ ಇದಾಗಿದೆ. ಸಮುದಾಯ ಬಾಂಧವರು ಕ್ರೀಡೆಯ ಮೂಲಕ ಒಂದೆಡೆ ಸೇರುವುದು, ಬೆರೆಯುವುದು ಉತ್ತಮ ಬೆಳವಣಿಗೆ. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕು. ಒಕ್ಕಲಿಗ ಸಮಾಜದ ಹಿನ್ನಲೆ ಬಹುದೊಡ್ಡದಾಗಿದೆ. ಇವರ ಕೊಡುಗೆ ಅಪಾರವಾಗಿದೆ. ರಾಜಕೀಯವಾಗಿ ಸಾಕಷ್ಟು ಕೊಡುಗೆಗಳನ್ನು ಒಕ್ಕಲಿಗ ಸಮಾಜ ಈ ನಾಡಿಗೆ ನೀಡಿದೆ. ಸಮಾಜದ ಪ್ರತಿಭಾವಂತರು ಮುಂದಿನ ದಿನದಲ್ಲಿ ಉತ್ತಮ ಹೆಸರು ಮಾಡುವಂತಾಗಲಿ, ವಿವಿಧ ಕ್ಷೇತ್ರದಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು.

ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ.ಡಾಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಕೇರಿ ಒಕ್ಕಲಿಗ ಸಂಘದ ಅಧ್ಯಕ್ಷ ರಘುನಾಥ್ ವಿ.ಜಿ. ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಸಮುದಾಯ ಬಾಂಧವರು ಒಂದೆಡೆ ಸೇರುವ ಪ್ರಯತ್ನ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕ್ರೀಡಾಕೂಟವು ಯಶಸ್ವಿಯತ್ತ ಸಾಗುತ್ತಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ನೂತನ ಶಾಸಕರಾದ ಎ.ಎಸ್.ಪೊನ್ನಣ್ಣನವರಿಗೆ ಒಕ್ಕಲಿಗ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಶಾಸಕರ ಪತ್ನಿ ಅಜ್ಜಿಕುಟ್ಟಿರ ಕಾಂಚನ ಪೊನ್ನಣ್ಣ, ಕಾರ್ಯಕ್ರಮದ ಸಂಚಾಲಕರಾದ ವಿ.ಟಿ.ವಾಸು, ಕ್ರೀಡಾ ಸಂಚಾಲಕರುಗಳಾದ ವಿ.ಎನ್.ಪ್ರಮೋದ್, ನಿಖಿಲ್ ಡಿ.ಜಿ. ಉಪಾಧ್ಯಕ್ಷ ಕೆ.ಪಿ.ಅಜಿತ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಶ್ರೇಯಸ್, ಪದಾಧಿಕಾರಿ ವಿ.ಕೆ.ಅಶೋಕ್, ಸಮಾಜದ ಹಿರಿಯರಾದ ವಿ.ಕೆ.ರಮೇಶ್, ಉದಯ್, ಗೌರವ ಅಧ್ಯಕ್ಷ ಲೋಹಿತ್‌ಗೌಡ, ಡಾ. ಮಂಜುನಾಥ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕÀ ಮಧುಸೂದನ್ ಸ್ವಾಗತಿಸಿ, ಚಂದನ ನಿರೂಪಿಸಿ ಕು. ಗ್ರಂಥ ಪ್ರಾರ್ಥಿಸಿ, ಪವನ್ ವಂದಿಸಿದರು. -ಹೆಚ್.ಕೆ.ಜಗದೀಶ್