ಮಡಿಕೇರಿ, ಜು. ೩೧: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪಂಚಾAಗದ ಸಾರ್ವತ್ರಿಕ ಕಕ್ಕಡ ಪದ್‌ನೆಟ್ಟ್ ಆಚರಣೆ ತಾ.೨ ರಂದು (ನಾಳೆ) ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ೨೮ನೇ ವರ್ಷದ ಸಾರ್ವತ್ರಿಕ ಕಕ್ಕಡ ಪದ್‌ನೆಟ್ಟ್ ಆಚರಣೆ ಇದಾಗಿದ್ದು, ಕೊಡವ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ೧೦.೩೦ ಗಂಟೆಗೆ ಸಾರ್ವಜನಿಕ ನಾಟಿನಡ್ಪ ಸಮಾರಂಭ (ಭತ್ತ ನಾಟಿ) ಕಾರ್ಯಕ್ರಮ ಕ್ಯಾಪಿಟಲ್ ವಿಲೇಜ್ ಗದ್ದೆಯಲ್ಲಿ ದುಡಿಕೊಟ್ಟ್ ಪಾಟ್‌ನೊಂದಿಗೆ ನಡೆಯಲಿದೆ. ಭತ್ತದ ನಾಟಿ ಮಾಡಿದ ನಂತರ ಭಾಗವಹಿಸಿದ ಎಲ್ಲರೂ ಕಕ್ಕಡಕೋಳಿ, ಮದ್ದ್ಪುಟ್ಟ್, ಮದ್ದ್ ಪಾಯಸ ಮತ್ತಿತರ ಕೊಡವ ಸಾಂಪ್ರದಾಯಿಕ ಖಾದ್ಯಗಳನ್ನು ಸೇವಿಸುವರು. ಕಕ್ಕಡ ಸಮಾರಂಭ ಸೂರ್ಯ-ಚಂದ್ರ, ಜಲದೇವತೆ ಕಾವೇರಿ ಹಾಗೂ ಗುರು ಕಾರೋಣರ ಆಶೀರ್ವಾದವನ್ನು ಪಡೆಯುವ ಮೂಲಕ ಆರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.