ಸೋಮವಾರಪೇಟೆ, ಜು. ೩೧: ಇತರ ಎಲ್ಲಾ ಕಲೆಗಳಿಗಿಂತ ಕಾವ್ಯ ವಿಭಿನ್ನವಾಗಿದೆ. ಲಲಿತ ಕಲೆಗಳಲ್ಲಿ ಒಂದಾದ ಕಾವ್ಯವು ತನ್ನದೇ ಆದ ವೈಶಿಷ್ಟö್ಯವನ್ನು ಪಡೆದುಕೊಂಡಿದೆ ಎಂದು ಸಾಹಿತಿ, ಹಿರಿಯ ಜಾನಪದ ವಿದ್ವಾಂಸ ಡಾ. ಮೋಹನ್ ಪಾಳೇಗಾರ್ ಅಭಿಪ್ರಾಯಿಸಿದರು.
ಪಟ್ಟಣದ ಮಹಿಳಾ ಸಮಾಜದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಿತಿ ಜಲಜಾ ಶೇಖರ್ ಅವರ ‘ನೆಲ ಮುಗಿಲು’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾವ್ಯಕ್ಕೆ ಪ್ರತ್ಯೇಕವಾದ ಮಾಧ್ಯಮವಿಲ್ಲ, ಕಾವ್ಯವನ್ನು ಅಮೃತವೆಂದು ಹಿರಿಯರು ಕರೆದಿದ್ದಾರೆ. ಕಾವ್ಯ ಸಾರ್ಥಕವಾಗಬೇಕಾದರೆ ಅದು ಓದುಗರ ಹೃದಯಕ್ಕೆ ಮುಖ ಮಾಡಿರಬೇಕು. ಅವರ ಹೃದಯವನ್ನು ಮುಟ್ಟಬೇಕು. ತಟ್ಟಬೇಕು. ಇಲ್ಲವಾದರೆ ಅಂತಹ ಕಾವ್ಯ ನಿರರ್ಥಕವಾಗುತ್ತದೆ ಎಂದು ಮೋಹನ್ ಪಾಳೇಗಾರ್ ಹೇಳಿದರು.
ಬಾಹ್ಯ ವಸ್ತುಗಳು ಕವಿಗೆ ಮುಖ್ಯವಲ್ಲ; ಅವುಗಳು ನಿಮಿತ್ತ ಮಾತ್ರ. ಕವಿಯು ತಾನು ಅನುಭವಿಸಿದಂತೆ ಚಿತ್ರಿಸಬೇಕು ಎಂದ ಅವರು, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತು ಕನ್ನಡ ಸಾಹಿತ್ಯದ ವಿಸ್ತಾರಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಲಜಾ ಶೇಖರ್ ವಿರಚಿತ ನೆಲಮುಗಿಲು ಕವನ ಸಂಕಲನ ಮೊದಲನೇ ಪ್ರಯತ್ನದಲ್ಲೇ ಮಾರ್ಮಿಕವಾಗಿರುವುದು ಮಾತ್ರವಲ್ಲ ಅರ್ಥಪೂರ್ಣವೂ ಆಗಿದೆ. ಇವರ ಲೇಖನಿಯಿಂದ ಇನ್ನಷ್ಟು ಮೌಲಿಕ ಹಾಗೂ ಸಮಾಜಕ್ಕೆ ದಾರಿದೀಪವಾಗುವ ಕೃತಿಗಳು ಮೂಡಿ ಬರಲಿ ಎಂದು ಶುಭ ಕೋರಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ಜಲಜ ಶೇಖರ್ ಅವರ ಕವನ ಸಂಕಲನ, ಸಾಹಿತ್ಯಗಳು ವಿಸ್ತರಿಸಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಲಕಾಳಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಡಿ. ವಿಜೇತ್, ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಉಪಸ್ಥಿತರಿದ್ದರು. ಜೆ. ಸಿ. ಶೇಖರ್ ಸ್ವಾಗತಿಸಿ, ಮಂಜುಳಾ ನಿರೂಪಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ವಂದಿಸಿದರು.