ಸೋಮವಾರಪೇಟೆ, ಜು.೩೧: ಶ್ರೀಗಂಧ ಮರವನ್ನು ಬುಡ ಸಹಿತ ತೆಗೆದು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳು, ಮಾಲು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಸೋಮವಾರಪೇಟೆ ಅರಣ್ಯ ವಲಯ, ಬಾಣಾವರ ಉಪವಲಯದ ಬಾಣವಾರ ಗಸ್ತಿನ "ನಿಡ್ತ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಶ್ರೀಗಂಧ ಮರವನ್ನು ಅಕ್ರಮವಾಗಿ ಬುಡ ಸಮೇತ ಅಗೆದು ತುಂಡುಗಳಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆ ಬಸಿರುಗುಪ್ಪೆ ಗ್ರಾಮದ ಚಂಗಪ್ಪ ಅವರ ಪುತ್ರ ಎ.ಸಿ. ಯೋಗೇಶ್ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯೊಂದಿಗೆ ೧೨ ಶ್ರೀಗಂಧದ ಹಸಿ ತುಂಡುಗಳು (೧೨.೩೮೦ ಕೆ.ಜಿ) ಮತ್ತು ಹತ್ಯಾರುಗಳನ್ನು ವಶಪಡಿಸಿಕೊಂಡು, ಅರಣ್ಯ ಮೊಕದ್ದಮೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಹೆಚ್.ಪಿ. ಚೇತನ್, ಉಪವಲಯ ಅರಣ್ಯಾಧಿಕಾರಿ ರಾಕೇಶ್ ಹೆಚ್. ಎಂ., ಗಸ್ತು ವನಪಾಲಕರಾದ ಪ್ರಸಾದ್ ಕುಮಾರ್ ಎ.ಎಸ್, ಸದಾನಂದ ಹಿಪ್ಪರಗಿ, ಅರಣ್ಯ ವೀಕ್ಷಕರಾದ ಪ್ರವೀಣ್ ಕೆ.ಎ, ಚೆಟ್ಟಿಯಪ್ಪ, ವಿಕಾಸ್, ಧರ್ಮ, ಉದಯಕುಮಾರ್ ಹಾಗೂ ಚಾಲಕ ಸಂತೋಷ್ ಕುಮಾರ್ ಭಾಗವಹಿಸಿದ್ದರು.