ವಿಶೇಷ ವರದಿ - ವನಿತಾ ಚಂದ್ರಮೋಹನ್
ಕುಶಾಲನಗರ, ಜು. ೩೧: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಕಳೆದ ಮೂರು ದಶಕಗಳಿಂದ ಅತಿ ಶೀಘ್ರವಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಡೋಂಗ್ರಿ ಗೆರಾಶಿಯ ಸಮುದಾಯದ ಜನರ ಬೆಳವಣಿಗೆ ಕಂಡುಬAದರೂ ಉನ್ನತ ಶಿಕ್ಷಣ ವ್ಯವಸ್ಥೆಗಳಿಂದ ವಂಚಿತವಾಗಿರುವ ಕಥೆ ಇದು.
ಇಲ್ಲಿ ಡಿಗ್ರಿ ಶಿಕ್ಷಣ ಪಡೆಯಲು ತೆರಳಬೇಕಾದ ಮಕ್ಕಳು ಗುಜರಿ ಆಯುವ ಕೆಲಸಕ್ಕೆ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ತಮ್ಮ ಮನೆಗಳ ಸಮೀಪದಲ್ಲಿ ಕೂಗಳತೆಯಲ್ಲಿ ಪದವಿ ಶಿಕ್ಷಣ ಕಾಲೇಜು ಇದ್ದರೂ ಇವರಿಗೆ ಶಿಕ್ಷಣ ಪಡೆಯುವ ಭಾಗ್ಯ ಇನ್ನೂ ಲಭಿಸಿಲ್ಲ. ಕುಟುಂಬಗಳು ಅಭಿವೃದ್ಧಿ ಕಂಡರೂ ಎಲ್ಲರಂತೆ ಇವರಿಗೆ ದೊರಕಬೇಕಾದ ಸವಲತ್ತುಗಳು ಮಾತ್ರ ಮರೀಚಿಕೆಯಾದಂತಿದೆ.
ಅದು ೩೦ ವರ್ಷಗಳ ಹಿಂದಿನ ಕಾಲ, ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಸಣ್ಣಪುಟ್ಟ ವಸ್ತುಗಳ ನಾಪತ್ತೆ ಅಥವಾ ಕಳ್ಳತನವಾದಲ್ಲಿ ಈ ಸಮುದಾಯದ ಮಂದಿ ಪೊಲೀಸರ ಅತಿಥಿಗಳಾಗೋದು ಅಂದಿನ ಸಾಮಾನ್ಯ ಸುದ್ದಿಯಾಗಿತ್ತು. ದಿನನಿತ್ಯ ಗುಜರಿ ಆಯುತ್ತಿದ್ದ ಈ ಸಮುದಾಯ ಮಂದಿಯನ್ನು ಕಳವು ಮಾಲು ದೊರೆಯದಿದ್ದರೂ ನೈಜ ಪ್ರಕರಣ ಅಂತ್ಯಗೊಳಿಸಿ ಇವರನ್ನು ಜೈಲಿಗೆ ಕಳಿಸುವ ಕಾಲ ಅದಾಗಿತ್ತು. ಬೆಳಗಿಂದ ಸಂಜೆ ತನಕ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಆಯುವುದು ಇವರ ದಿನಚರಿಯಾಗಿತ್ತು. ಮೂರು ದಶಕಗಳಿಂದ ಹಿಂದೆ ಗುಜರಾತ್ ಕಡೆಯಿಂದ ವಲಸೆ ಬಂದಿರುವ ಈ ಸಮುದಾಯದ ಜನರಿಗೆ ಕುಶಾಲನಗರ ಸಮೀಪದ ಕೊಪ್ಪ ರಸ್ತೆ ಬದಿಗಳಲ್ಲಿ ಇರುವ ಖಾಲಿ ಜಾಗಗಳಲ್ಲಿ ಹರುಕಲು ಬಟ್ಟೆ ಮೂಲಕ ನಿರ್ಮಿಸಿದ ಸಣ್ಣಪುಟ್ಟ ಡೇರೆಗಳೇ ಬಂಗಲೆಯಾಗಿದ್ದವು. ತಮ್ಮ ಪುಟ್ಟ ಗೂಡಿನಲ್ಲಿ ಆಕಾಶವೇ ಹೊದಿಕೆ, ಭೂಮಿಯೇ ಹಾಸಿಗೆ ಎನ್ನುವ ರೀತಿಯಲ್ಲಿ ದಿನದೂಡುತ್ತಿದ್ದರು.
ಇವರಲ್ಲಿ ಕೆಲವು ಬೆರಳೆಣಿಕೆಯ ಮಂದಿ ದೇವರ ಫೋಟೋ ಹಿಡಿದುಕೊಂಡು ತಮ್ಮ ಹೊಟ್ಟೆ ಹೊರೆಯಲು ಭಿಕ್ಷಾಟನೆ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದ ದೃಶ್ಯವೂ ಕೂಡ ಕಂಡುಬರುತ್ತಿತ್ತು. ಸಂಜೆಯಾಗುತ್ತಲೇ ಭಿಕ್ಷಾಟನೆ ಪರಿಕರಗಳನ್ನು ಪಕ್ಕದಲ್ಲಿಟ್ಟು ದಿನನಿತ್ಯ ಸಂಗ್ರಹವಾದ ಹಣದಲ್ಲಿ ತಮ್ಮದೇ ಆದ ಸಂಭ್ರಮದಲ್ಲಿ ಜೀವನ ಕಳೆಯುತ್ತಿದ್ದರು. ಮತ್ತೆ ಅದೇ ಗುಜರಿ ಆಯುವುದು, ಭಿಕ್ಷಾಟನೆ ಮಾಡುವುದು ಕೆಲವರ ಜೀವನದ ದಿನಚರಿಯಾಗಿತ್ತು.
ರಾಜ್ಯದ ಎಲ್ಲೆಡೆ ಸುತ್ತಾಡುತ್ತಾ ಗುಜರಿ ಆಯ್ದು ಅದನ್ನು ಮಾರಿ ಜೀವನ ನಡೆಸುವಂತಹ ಅಲೆಮಾರಿ ಜನಾಂಗ ಅದಾಗಿತ್ತು. ಸುಮಾರು ೫೦ಕ್ಕೂ ಅಧಿಕ ಮಂದಿ ಜನಾಂಗದ ಸದಸ್ಯರು ಇದೇ ರೀತಿಯ ಜೀವನವನ್ನು ನಿರಂತರವಾಗಿ ಸಾಗಿಸುವ ಪರಿಸ್ಥಿತಿ ಮುಂದುವರೆದಿತ್ತು.
ಈ ಸಮುದಾಯದ ಹಿರಿಯರು ಸ್ಥಳೀಯ ಕೆಲ ಜನಪ್ರತಿನಿಧಿಗಳ ಸಹಾಯದೊಂದಿಗೆ ಡೇರೆಗಳ ಪಕ್ಕದಲ್ಲಿ ಇದ್ದ ಖಾಲಿ ಪ್ರದೇಶದಲ್ಲಿ ಮತ್ತೆ ಶೆಡ್ಗಳನ್ನು ನಿರ್ಮಿಸುವ ಮೂಲಕ ಅದೇ ಜೀವನ ಮುಂದುವರಿದಿತ್ತು.
ಕಾಲವೇ ಉತ್ತರಿಸುವ ಹಾಗೆ ಅವರಲ್ಲಿ ಕೆಲವು ಮುಖಂಡರು ಎಚ್ಚೆತ್ತುಕೊಂಡು ಸರ್ಕಾರದ ಕೆಲವು ಯೋಜನೆಗಳ ಮೂಲಕ ಮನೆಗಳನ್ನು ಕಟ್ಟಿಕೊಡುವ ಅವಕಾಶವನ್ನು ಬಳಸಿಕೊಂಡ ಈ ಸಮುದಾಯದ ಸುಮಾರು ೫೦ಕ್ಕೂ ಅಧಿಕ ಕುಟುಂಬ ಸರಕಾರ ಕಟ್ಟಿಕೊಟ್ಟ ಶಾಶ್ವತ ಸೂರುಗಳಲ್ಲಿ ವಾಸ ಮಾಡಲು ತೊಡಗಿ ಇದೀಗ ಅತಿ ವೇಗದಲ್ಲಿ ಹಲವು ಕುಟುಂಬಗಳು ಅಭಿವೃದ್ಧಿಯಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರೆ ನಿಜಕ್ಕೂ ಅದು ಒಂದು ಅಚ್ಚರಿಯ ವಿಷಯ ಎನ್ನಬಹುದು. ಹೆಚ್ಚಿನ ಮಂದಿ ಮದ್ಯವ್ಯಸನಿಗಳಾಗಿದ್ದು ದಿನ ಕಳೆದಂತೆ ಇವರಲ್ಲಿ ಹಲವರು ಮದ್ಯಮುಕ್ತರಾಗಿರುವುದು ಕೂಡ ಇವರ ಪೈಕಿ ಕೆಲವರ ವೈಯಕ್ತಿಕ ಬೆಳವಣಿಗೆಗೆ ಒಂದು ಮೂಲ ಕಾರಣ ಎನ್ನಬಹುದು. ಮದ್ಯ ಸೇವನೆ ಮಾಡಿದವರಿಗೆ ದಂಡ ವಿಧಿಸುವ ಒಂದು ಕಾಲವು ಕೂಡ ಕಾಲೋನಿಯಲ್ಲಿ ಇತ್ತು.
ಇವರ ಮೂಲ ಕಸುಬು ಗುಜರಿ ಆಯುವುದಾದರೂ, ಜೀವನೋಪಾಯಕ್ಕಾಗಿ ಕೊಡೆ ರಿಪೇರಿ, ಪ್ಲಾಸ್ಟಿಕ್ ಬಕೆಟ್ಗೆ ತೇಪೆ ಹಾಕುವುದು, ಗ್ಯಾಸ್ ಸ್ಟವ್, ಇದೀಗ ಮಿಕ್ಸಿ ರಿಪೇರಿ ಇತ್ಯಾದಿಗಳಲ್ಲಿ ಕೂಡ ಅವರು ತಮ್ಮನ್ನು ತೊಡಗಿಸಿಕೊಂಡಿರುವುದು ಕಾಣಬಹುದು.
ಅದೃಷ್ಟವಶಾತ್ ಅವರಿಗೆ ಕುಶಾಲನಗರ ಸ್ಥಳೀಯ ಆಡಳಿತ ಸರ್ಕಾರದ ಮೂಲಕ ಸಮೀಪದ ಕೊಪ್ಪದ ಎಸ್ಟಿ ಕಾಲೋನಿ ಶಾಶ್ವತ ನೆಲೆ ದೊರಕಿಸಿ ಕೊಟ್ಟಿದ್ದೇ ತಡ ಈ ಕುಟುಂಬಗಳು ದಿನೇ ದಿನೇ ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ಸು ಕಂಡುಬರುತ್ತಿದೆ.
ಇಡೀ ಸಮುದಾಯದಲ್ಲಿ ಕುಟುಂಬದ ಮಕ್ಕಳಿಗೆ ಶಿಕ್ಷಣ ಅನ್ನೋದು ಅಂದಿನ ಕಾಲದಲ್ಲಿ ಮರೀಚಿಕೆಯಾಗಿತ್ತು. ಮಕ್ಕಳು ಶಾಲೆಗೆ ತೆರಳಲು ಪ್ರಾರಂಭಗೊAಡ ಬೆನ್ನಲ್ಲಿ ಹಲವು ಮಕ್ಕಳು ಪಿಯುಸಿ ತನಕ ಓದಿ ಡಿಗ್ರಿ ಶಿಕ್ಷಣ ಪಡೆಯಲು ಆಗದೆ ಗುಜರಿ ಆಯುವ ಕೆಲಸಕ್ಕೆ ತೆರಳುತ್ತಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಪಿಯುಸಿ ವ್ಯಾಸಂಗ ಮಾಡಿದ ಬಹುತೇಕ ಮಕ್ಕಳು ಸಮೀಪದ ಟಿಬೆಟಿನ್ ಶಿಬಿರಕ್ಕೆ ತೆರಳಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ, ಮತ್ತೆ ಕೆಲವರು ತಾತ್ಕಾಲಿಕ ಕೆಲಸಕ್ಕೆ ತೆರಳುತ್ತಿದ್ದಾರೆ ಎನ್ನುತ್ತಾರೆ ಪಿಯುಸಿ ಮುಗಿಸಿ ಕೂಲಿ ಕೆಲಸಕ್ಕೆ ತೆರಳುತ್ತಿರುವ ಯುವಕ ಸುರೇಶ. ನಮ್ಮ ಸಮುದಾಯದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಯುವಕರಿಗೆ ಸರ್ಕಾರಿ ಕೆಲಸ ಸಿಗುವಂತಾಗಬೇಕು ಎನ್ನುವುದು ಅವರ ಆಶಯ.
ಕಾಲೋನಿಯ ಪಕ್ಕದ ಆವರಣ ಗೋಡೆ ಒಳಗೆ ಡಿಗ್ರಿ ಕಾಲೇಜು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದರೂ, ಈ ಕಾಲೋನಿ ಮಕ್ಕಳು ಮಾತ್ರ ಉನ್ನತ ಶಿಕ್ಷಣಕ್ಕೆ ತೆರಳಲು ಮನಸ್ಸು ಮಾಡದೆ ಮತ್ತೆ ಗುಜರಿ ಆಯಲು ತೆರಳುತ್ತಿರುವುದು ನಿಜಕ್ಕೂ ಇವರ ಬಗ್ಗೆ ಸರಕಾರ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆ ಹೆಚ್ಚಿನ ಕಾಳಜಿ ವಹಿಸದಿರುವುದು ಇದಕ್ಕೆ ಕಾರಣ ಎನ್ನಬಹುದು.
ಡೋಂಗ್ರಿ ಗೆರಾಶಿಯ ಕಾಲೋನಿಯಲ್ಲಿ ಇದೀಗ ಸುಮಾರು ೬೦ ಕುಟುಂಬಗಳಿದ್ದು ಎಲ್ಲರೂ ತಮ್ಮ ದಿನನಿತ್ಯದ ಜೀವನಕ್ಕೋಸ್ಕರ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಓದಿದ ಮಕ್ಕಳಿಗೆ ಸರ್ಕಾರಿ ಕೆಲಸ ಮಾತ್ರ ಮರೀಚಿಕೆ ಯಾಗಿದೆ. ಕಾಲೋನಿಯಲ್ಲಿ ಅಲೆಮಾರಿ ಬುಡಕಟ್ಟು ಕಸುಬುದಾರರ ಸಂಘ ಕೂಡ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ಏಳಿಗೆಗಾಗಿ ಶ್ರಮಿಸುತ್ತಿದೆ.
ಸರ್ಕಾರ ಈ ಕಾಲೋನಿ ಬಗ್ಗೆ ಕಾಳಜಿ ವಹಿಸಿ ಇಲ್ಲಿನ ವಿದ್ಯಾವಂತರಿಗೆ ಸರಕಾರಿ ಉದ್ಯೋಗ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕಾಗಿದೆ. ಉನ್ನತ ಮಟ್ಟದ ಶಿಕ್ಷಣ ಪಡೆಯಲು ಕೂಡ ಕುಟುಂಬ ಸದಸ್ಯರಲ್ಲಿ ಜಾಗೃತಿ ಮೂಡಿಸಿ ಸಮುದಾಯದ ಏಳಿಗೆಗೆ ಪಣತೊಡಬೇಕಾಗಿದೆ. ಡೇರೆಯಿಂದ ಶಾಶ್ವತ ಸೂರಿಗೆ ಸ್ಥಳಾಂತರಗೊAಡಿರುವ ಈ ಸಮುದಾಯದ ಯುವ ಪೀಳಿಗೆಯನ್ನು ಮೇಲೆತ್ತುವ ಕೆಲಸ ಆಗಬೇಕಿದೆ.
ಕಾಲೋನಿಯಲ್ಲಿ ಒಂದು ಅಂಗನವಾಡಿ ಕೇಂದ್ರ ಕೆಲಸ ನಿರ್ವಹಿಸುತ್ತಿದ್ದು ಹೆಚ್ಚಿನ ಸಂಖ್ಯೆಯ ಪುಟ್ಟ ಮಕ್ಕಳು ಇಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಕೆಲವು ಯುವಕ-ಯುವತಿಯರು ತಾಂತ್ರಿಕ ಶಿಕ್ಷಣ ಸೇರಿದಂತೆ ವಕೀಲ, ವೈದ್ಯಕೀಯ, ಇಂಜಿನಿಯರಿAಗ್ ಶಿಕ್ಷಣದ ವ್ಯಾಸಂಗ ಮಾಡುವ ಆಸಕ್ತಿಯಲ್ಲಿರುವ ಕೆಲವು ಮಕ್ಕಳು ತಮ್ಮ ಭವಿಷ್ಯದ ಚಿಂತನೆಯಲ್ಲಿ ಇರುವುದು ಕೂಡ ಕಾಣಬಹುದು. ತಮ್ಮ ಕಾಲೋನಿಯಲ್ಲಿ ಮಹಿಳಾ ಸ್ವಸಹಾಯ ಸಂಘ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುವ ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ಇಲ್ಲಿನ ಗೃಹಿಣಿ ಕಾವೇರಿ ಸ್ಥಳಕ್ಕೆ ತೆರಳಿದ ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಈ ಕಾಲೋನಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೆಯ ಅಂಶ ಎನ್ನಬಹುದು. ಕಾಲೋನಿಯ ಚರಂಡಿಗಳು ಮತ್ತು ತಮ್ಮ ಮನೆಗಳ ಎದುರುಗಡೆ ಸ್ವಚ್ಛತೆ ಮಾಡಿಕೊಳ್ಳುವುದು ನಿತ್ಯದ ಕಾಯಕ ಎಂದು ಸ್ಥಳೀಯರು ತಿಳಿಸಿದ್ದಾರೆ.