ಮಡಿಕೇರಿ, ಜು. ೩೧ : ನಬಾರ್ಡ್ ಮತ್ತು ಓಡಿಪಿ ಸಂಸ್ಥೆ ಮೈಸೂರು ಸಹಭಾಗಿತ್ವದಲ್ಲಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಹಾಗೂ ತರಬೇತಿ ಕಾರ್ಯಕ್ರಮ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.

ನಬಾರ್ಡ್ ಸಂಸ್ಥೆಯ ಕೊಡಗು ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಶಿಬಿರ ಉದ್ಘಾಟಿಸಿ ಮಾತನಾಡಿ ನಬಾರ್ಡ್ ಸಂಸ್ಥೆ ಓಡಿಪಿ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಿಂದುಳಿದಿರುವ ಮಹಿಳೆಯರಿಗೆ ಸ್ವಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ ಬದುಕಲು ಮುಖ್ಯವಾಹಿನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಂಡು ಮುಂದೆ ಬರಬೇಕೆಂದರು.

ಓಡಿಪಿ ಸಂಸ್ಥೆಯ ನಿರ್ದೇಶಕ ವಂದನಿಯ ಗುರು ಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೆರ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಓ ಡಿ ಪಿ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಸಾವಿರಾರು ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿಕೊಟ್ಟಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಸ್ವಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ದುಡಿಮೆಯ ಮೂಲಕ ಅಭಿವೃದ್ಧಿಯೊಂದಿಗೆ ಗುರುತಿಸಿಕೊಂಡು ಕುಟುಂಬ ನಿವಾರಣೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಮಹಿಳೆಯರು ಸಂಘಟನೆಯ ಮೂಲಕ ಶಕ್ತರಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮಕ್ಕಳ ಶಿಕ್ಷಣದ ಬಗ್ಗೆಯೂ ಗಮನಹರಿಸುವುದರೊಂದಿಗೆ ಮಾದರಿ ಗ್ರಾಮವನ್ನಾಗಿಸಬೇಕೆಂದು ಸಲಹೆ ನೀಡಿದರು. ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಡಾ. ಸಂಜೀವ್ ಕುಮಾರ್ ಸಿಂಧೆ ಮಾತನಾಡಿ ಹಸು, ಕೋಳಿ, ಹಂದಿ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಸದಸ್ಯ ಭುವನೇಂದ್ರ, ಬಾಳೆಗುಂಡಿ ಹಾಡಿಯ ಬುಡಕಟ್ಟು ಸಂಘದ ಅಧ್ಯಕ್ಷ ರಮೇಶ್, ಓಡಿಪಿ ಸಂಸ್ಥೆಯ ಯೋಜನಾ ಸಂಯೋಜಕರಾದ ಅಣ್ಣಮ್ಮ, ಮೇಲ್ವಿನ್, ಓಡಿಪಿ ಸಂಸ್ಥೆ ಕೊಡಗು ವಲಯ ಸಂಯೋಜಕಿ ಜಾಯ್ಸ್ ಮೆನೇಜಸ್ ಪ್ರಮುಖರಾದ ಧನುಕುಮಾರ್, ಮಮತಾ ಸೇರಿದಂತೆ ಸುತ್ತಮುತ್ತಲ ಹಾಡಿಯ ನೂರಾರು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.