ಶ್ರೀಮಂಗಲ, ಜು. ೩೦: ಪ್ರಾಮಾ ಣಿಕತೆ, ದಕ್ಷತೆ ಮತ್ತು ಮೌಲ್ಯಯುತ ರಾಜಕಾರಣಕ್ಕೆ ಒತ್ತು ನೀಡುವ ಸಂಕಲ್ಪದಡಿ ಕ್ಷೇತ್ರದ ಎಲ್ಲಾ ಜನರ ನಂಬಿಕೆ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸೇವೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭರವಸೆಯಿತ್ತರು.

ಹುದಿಕೇರಿ ಕೊಡವ ಸಮಾಜ ದಲ್ಲಿ ಭಾನುವಾರ ಅಂಜಿಗೇರಿ ನಾಡ್ ಕೂಟ ಸಂಘಟನೆ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾ ಡಿದರು. ನಾವು ವಾಸ್ತವತೆಯನ್ನು ಮರೆಮಾಚಬಾರದು, ಸುಳ್ಳುಕಥೆ ಅಪಪ್ರಚಾರ, ಕಥೆ ಸೃಷ್ಟಿಸಿ ರಾಜಕೀಯ ಮಾಡಬಾರದು ಎಂದು ಹೇಳಿದರು. ಅಂಜಿಗೇರಿ ನಾಡ್ ಇತಿಹಾಸದ ಲ್ಲಿಯೇ ಪ್ರಖ್ಯಾತಿಯನ್ನು ಪಡೆದಿದ್ದು ಅದನ್ನು ಮರುಕಳಿಸುತ್ತಾ ಸಾಗಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಈ ನಾಡು ಪ್ರಾತಿನಿಧಿತ್ಯವನ್ನು ಹೊಂದಿದೆ. ೧೯೬೨ ರಲ್ಲಿ ಅಜ್ಜಿಕುಟ್ಟಿರ ಅಪ್ಪಣ್ಣ ಅವರು ಶಾಸಕರಾಗಿ- ಸಚಿವರಾಗಿ ದ್ದರು. ೬೧ ವರ್ಷದ ನಂತರ ಇದೇ ನಾಡಿನ ನಾನು ಶಾಸಕನಾಗಿದ್ದೇನೆ. ಇದಕ್ಕೂ ಮೊದಲು ಎ.ಎನ್. ಸೋಮಯ್ಯ ಎ.ಕೆ. ಸುಬ್ಬಯ್ಯ ಅವರು ಶಾಸಕರಾಗಿದ್ದರು, ನಾಲ್ವರು ಶಾಸಕರು ಅಜ್ಜಿಕುಟ್ಟಿರ ಕುಟುಂಬದವರು ಎಂಬುದು ವಿಶೇಷ ಎಂದು ವಿವರಿಸಿದರು.

ಸಂಘ ಸಂಸ್ಥೆಗಳು ನಿರ್ದಿಷ್ಟವಾದ ಉದ್ದೇಶಗಳನ್ನು ಇಟ್ಟುಕೊಂಡು ಸೇವೆ ಸಲ್ಲಿಸುವುದನ್ನು ಬಿಟ್ಟು ರಾಜಕೀಯ ಮಾಡುತ್ತಾ, ಅಪಪ್ರಚಾರದಲ್ಲಿ ತೊಡಗಬಾರದು ಎಂದರು.

ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಷನ್ ಅಪ್ಪಚ್ಚು ಅವರು ಅಂಜಿಗೇರಿ ನಾಡ್ ಕೂಟದ ಪರ ವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸರಕಾರಿ ಉದ್ಯೋಗಗಳಲ್ಲಿ ಕೊಡವ ಜನಾಂಗದವರು ತೀರಾ ಕಡಿಮೆ ಯಾಗಿದ್ದಾರೆ. ಜನಾಂಗದವರು ಸರ್ಕಾರಿ ಕೆಲಸಕ್ಕೆ ಸೇರಲು ಪ್ರಯತ್ನಿಸಬೇಕು. ಬುಡಕಟ್ಟು ಜನಾಂಗದ ಸ್ಥಾನಮಾನ ಕೊಡವ ಜನಾಂಗಕ್ಕೆ ಬಹಳ ಹಿಂದೆಯೇ ದೊರಕಬೇಕಾಗಿತ್ತು. ಈ ನಿಟ್ಟಿನಲ್ಲಿ ಜನಾಂಗದ ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ೧೩ (೬೬ ಕೆ.ವಿ.) ವಿದ್ಯುತ್ ವಿನಿಮಯ ಕೇಂದ್ರ ಸ್ಥಾಪನೆ ಆಗುತ್ತಿದೆ ಇವು ಕಾರ್ಯರಂಭ ಮಾಡಿದರೆ ಜಿಲ್ಲೆಯ ವಿದ್ಯುತ್ ಸಮಸ್ಯೆಗಳು ಬಹುತೇಕವಾಗಿ ನಿವಾರಣೆ ಯಾಗಲಿದೆ, ವಿದ್ಯುತ್ ಮಾರ್ಗ ಹಾಗೂ ಕೇಂದ್ರದ ಸ್ಥಾಪನೆಗೆ ಅಗತ್ಯ ಜಾಗಗಳನ್ನು ಜನರು ನೀಡುವ ಮೂಲಕ ಸಹಕಾರ ನೀಡಬೇಕೆಂದು ಕೋರಿದರು.

ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಅಂಜಿಗೇರಿ ನಾಡ್ ಶೌರ್ಯವಂತರು ಹುಟ್ಟಿದಂತಹ ನಾಡಾಗಿದೆ. ಹುದಿಕೇರಿಯ ಜನತಾ ಪ್ರೌಢಶಾಲೆ ಸ್ವತಂತ್ರ ಹೋರಾಟಗಾರರನ್ನು ತಯಾರಿಸಿದ ಕಾರ್ಖಾನೆಯಾಗಿದೆ. ಸ್ವತಂತ್ರ ಹೋರಾಟಗಾರರಾದ ಚೆಕ್ಕೆರ ಮೊಣ್ಣಯ್ಯ ೧೦೦ ತಿಂಗಳು ಸೆರೆವಾಸ ಅನುಭವಿಸಿದ್ದರು ಮತ್ತು ಬೆಳಗಾವಿಗೆ ತೆರಳಿ ಸ್ವತಂತ್ರ ಚಳುವಳಿ ರೂಪಿಸಿದ್ದರು. ಮೊಣ್ಣಯ್ಯ ಅವರು ರಾಜ್ಯದ ಪ್ರಬಲ ಜನಾಂಗದಲ್ಲಿ ಹುಟ್ಟಿದ್ದರೆ ಅವರನ್ನು ದೇಶದ ಹಾಗೂ ರಾಜ್ಯದ ಮಹಾನ್ ಸ್ವತಂತ್ರ ಹೋರಾಟಗಾರರನ್ನಾಗಿ ಮಾಡಿ ಪ್ರತಿಮೆ ಮಾಡಲಾಗುತ್ತಿತ್ತು. ಹಾಗೆಯೇ ಕೋಳೆರ ಕಾವೇರಿ ಸ್ವತಂತ್ರ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಬಾಲಕಿಯಾಗಿದ್ದು, ಇಂತಹ ಘಟನೆ ಇತಿಹಾಸದಲ್ಲಿ ಎಲ್ಲಿಯೂ ಆಗಿಲ್ಲ. ಇವರಿಬ್ಬರು ಅಂಜಿಗೇರಿ ನಾಡಿಗೆ ಸೇರಿದವರಾಗಿದ್ದು, ಸ್ವಾತಂತ್ರö್ಯ ದಿನದಂದು ಇಂತಹ ಮಹಾನ್ ಸ್ವಾತಂತ್ರö್ಯ ಹೋರಾಟಗಾರರನ್ನು ಕನಿಷ್ಟ ಪಕ್ಷ ಸ್ಮರಣೆ ಮಾಡಿಕೊಳ್ಳುವ ಸೌಜನ್ಯ ಸಹ ಇದುವರೆಗಿನ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ ಎಂದು ವಿಷಾದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಡವ ವಿರೋಧಿ ಎಂದು ಸಾಮೂಹಿಕವಾಗಿ ಬಿಂಬಿಸಲು ಪ್ರಯತ್ನಿಸುತ್ತ ಬರಲಾಗಿದೆ. ಆದರೆ ಯುಕೊ ಸಂಘಟನೆ ತಲಕಾವೇರಿ ಯಿಂದ ಬೆಂಗಳೂರಿಗೆ ೪೧೪ ಕಿಮೀ ಪಾದಯಾತ್ರೆ ತಲುಪಿದ ಸಂದರ್ಭ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ ಸಂದರ್ಭ ಕೊಡವರ ಬಗ್ಗೆ ವಿಶೇಷ ಕಾಳಜಿ ಯಿಂದ ಸಮಾಲೋಚನೆ ನಡೆಸಿದ್ದರು, ರಾಜ್ಯದ ಯಾವುದೇ ರಾಜಕೀಯ ಮುಖಂಡರು ಕೊಡವರ ವಿರೋಧ ಮನೋಭಾವ ಹೊಂದಿಲ್ಲ ಎಂದರು.

ಈ ಸಂದರ್ಭ ಮಂಜು ಚಿಣ್ಣಪ್ಪ ಅವರ ನೇತೃತ್ವದಲ್ಲಿ ಯುಕೊ ಸಂಘಟನೆಯ ಪ್ರಮುಖರು ಕೊಡವ ಅಭಿವೃದ್ಧಿ ಮಂಡಳಿ ಸ್ಥಾಪನೆ, ಕೊಡವ ಜನಾಂಗ ಪ್ರವರ್ಗ ೩ ಎ ಮೀಸಲಾತಿ ರಾಜ್ಯ ಸರ್ಕಾರಕ್ಕೆ ಸೀಮಿತವಾಗಿದ್ದು, ಇದನ್ನು ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆಲೆಗಳಾದ ಮಂದ್, ಕೈಮಡ, ಐನ್‌ಮನೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಮುಖ್ಯ ಬೇಡಿಕೆಗಳ ಮನವಿಪತ್ರವನ್ನು ಶಾಸಕ ಪೊನ್ನಣ್ಣ ಅವರಿಗೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಜಿಗೇರಿ ನಾಡ್ ಕೂಟದ ಅಧ್ಯಕ್ಷ ಚಂಗುಲAಡ ಅಯ್ಯಪ್ಪ ಸ್ವಾಗತಿಸಿದರು, ವೇದಿಕೆಯಲ್ಲಿ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೀದೇರಿರ ನವೀನ್, ಕೂಟದ ಕಾರ್ಯದರ್ಶಿ ಬಯವಂಡ ಪ್ರತು ಪೂವಣ್ಣ ಹಾಜರಿದ್ದರು. ನೂರೇರ ಜೀವನ್ ಪ್ರಾರ್ಥಿಸಿ, ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ಬಯವಂಡ ಪ್ರತು ಪೂವಣ್ಣ ವಂದಿಸಿದರು. ಅತಿಥಿಗಳ ಸಾಧನೆಗಳನ್ನು ನೂರೇರ ಜೀವನ್, ಚೆಕ್ಕೆರ ಚಂದ್ರಪ್ರಕಾಶ್, ಚೆಕ್ಕೆರ ಬೋಪಣ್ಣ ಮಾಡಿದರು.

(ಹರೀಶ್ ಮಾದಪ್ಪ)