ಮಡಿಕೇರಿ, ಜು. ೨೯: ಸಾರ್ವಜನಿಕರಿಗೆ ತೊಂದರೆ ಮಾಡದೆ ಜನರ ಕಷ್ಟಗಳನ್ನು ನಿವಾರಿಸಲು ಎಲ್ಲಾ ಹಂತದ ಅಧಿಕಾರಿಗಳು ಜವಾಬ್ದಾರಿ ಯುತ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಮುಖ್ಯ ಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಮಡಿಕೇರಿ ತಾಲೂಕಿನ ಸಂಪಾಜೆಯಲ್ಲ್ಲಿ ನೂತನವಾಗಿ ನಿರ್ಮಿಸಿರುವ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ ಜೊತೆ ಸಾರ್ವಜನಿಕರು ನೇರ ಸಂಪರ್ಕ ಹೊಂದಿದ್ದು, ಸರ್ಕಾರದ ಹಲವು ಯೋಜನೆಗಳ ಪ್ರಮಾಣ ಪತ್ರಕ್ಕೆ ನಾಡ ಕಚೇರಿಗೆ ಆಗಮಿಸುತ್ತಾರೆ. ಆದ್ದರಿಂದ ನಾಗರಿಕರನ್ನು ಸತಾಯಿಸದೆ ಸ್ಪಂದಿಸುವAತಾಗಬೇಕು.
ಕAದಾಯ ಇಲಾಖೆ ಜನರಿಗೆ ನೇರವಾಗಿ ಸ್ಪಂದಿಸಬೇಕು ಸರ್ವೆ ಹಾಗೂ ಇನ್ನಿತರ ದಾಖಲೆಗಳನ್ನು ಜನರಿಗೆ ಕಾಲಮಿತಿಯಲ್ಲಿ ನೀಡಬೇಕು. ಸಂಪಾಜೆಗೆ ಹೊಸ ನಾಡ ಕಚೇರಿ ಕಟ್ಟಡ ಕಲ್ಪಿಸಿದ್ದು, ಜನರು ಹಾಗೂ ಅಧಿಕಾರಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು, ಜನ ಸೇವೆ ಅತಿ ಮುಖ್ಯವಾಗಿದ್ದು, ಹಿರಿಯ ಅಧಿಕಾರಿಗಳಿಂದ ಹಿಡಿದು ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಜನರ ಸೇವೆ ಮಾಡಬೇಕು, ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಜನರಿಗೆ ಕಂದಾಯ ಇಲಾಖೆಯಿಂದ ಸಿಗುವಂತಹ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಜನರಿಗೆ ಸರಿಯಾದ ಸಮಯಕ್ಕೆ ತಲುಪಿಸುವಂತಾಗಬೇಕು ಹಾಗೂ ಮಳೆಗಾಲದಲ್ಲಿ ಪ್ರವಾಹ ಪೀಡಿತ ಹಾಗೂ ತೊಂದರೆ ಆದಂತಹ ಸ್ಥಳಗಳಿಗೆ ಖುದ್ದಾಗಿ ತೆರಳಿ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಹೇಳಿದರು.
ಕೊಯನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್ ಮಾತನಾಡಿ, ಜನರಿಗೆ ಹಕ್ಕುಪತ್ರ ಹಾಗೂ ಸರ್ವೆ ಕಾರ್ಯಗಳನ್ನು ಸಕಾಲದಲ್ಲಿ ಕಲ್ಪಿಸಬೇಕು. ಗ್ರಾಮದಲ್ಲಿ ಸರಕಾರ ಜಾಗದ ಕೊರತೆ ಇದ್ದು ಕಸ ವಿಲೇವಾರಿ ಮಾಡಲು ಸಹ ಕಷ್ಟಸಾಧ್ಯ ಪರಿಸ್ಥಿತಿ ಎದುರಾಗಿದೆ. ಹಾಗೆಯೇ ಮೊಬೈಲ್ ಟವರ್ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ, ಕಲ್ಲೂರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನ ಸರಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಿಂಚಣಿದಾರರಿಗೆ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಲ್ಲಾಳ್, ತಹಶೀಲ್ದಾರ್ ಕಿರಣ್ ಗೌರಯ್ಯ, ಸಂಪಾಜೆ ಕಂದಾಯ ಪರಿವೀಕ್ಷಕರು ಬಿ.ಜಿ. ವೆಂಕಟೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಇತರರು ಉಪಸ್ಥಿತರಿದ್ದರು. ಮಣಿ ಅವರು ಪ್ರಾರ್ಥಿಸಿ, ಕೊಯಾನಡು ಶಾಲೆಯ ಶಿಕ್ಷಕರಾದ ವಿಶ್ವನಾಥ್ ಹೋಬಳಿದರ್ ನಿರೂಪಿಸಿದರು.