ಕೂಡಿಗೆ, ಜು. ೨೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಮಳೆಯಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹಾರಂಗಿಗೆ ಪ್ರವಾಸಿಗರ ದಂಡು ಆಗಮಿಸುತ್ತಿದೆ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈಗಾಗಲೇ ಅಗಮಿ ಸುತ್ತಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಾದ ದುಬಾರೆ ಸಾಕಾನೆ ಶಿಬಿರ, ಕುಶಾಲನಗರ ಕಾವೇರಿ ನಿಸರ್ಗಧಾಮ ವೀಕ್ಷಣೆ ಮಾಡಿದ ನಂತರ ಹಾರಂಗಿಗೆ ಆಗಮಿಸುತ್ತಿದ್ದಾರೆ. ಹಾರಂಗಿ ಉದ್ಯಾನವನ, ಸಂಜೆಯ ಸಂಗೀತ ಕಾರಂಜಿ ವೀಕ್ಷಣೆಯೊಂದಿಗೆ ಅಣೆಕಟ್ಟೆಯಿಂದ ನದಿಗೆ ನೀರು ಹರಿಯುವ ದೃಶ್ಯವನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಕಾವೇರಿ ನದಿ ಹಾಗೂ ಹಾರಂಗಿ ಸಂಗಮವಾಗಿ ಹರಿಯುವ ದೃಶ್ಯವನ್ನು ಕಣಿವೆ ತೂಗುಸೇತುವೆ ಮೇಲೆ ನಿಂತು ಕಣ್ತುಂಬಿಕೊಳ್ಳುತ್ತಿದ್ದಾರೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಹೆಚ್ಚು ನೀರು ಸಂಗ್ರಹವಾಗುತ್ತಿದ್ದು, ಹೆಚ್ಚುವರಿ ನೀರು ಅಣೆಕಟ್ಟೆಯಿಂದ ನದಿಗೆ ಹರಿಯುವ ದೃಶ್ಯವನ್ನು ವೀಕ್ಷಣೆ ಮಾಡಲು ಅಣೆಕಟ್ಟೆಯ ಮುಂಭಾಗದಲ್ಲಿ ತೂಗುಸೇತುವೆಯನ್ನು ನಿರ್ಮಿಸುವಂತಾಗಬೇಕು ಎಂಬುದು ಪ್ರವಾಸಿಗರ ಒತ್ತಾಯವಾಗಿದೆ. - ಕೆ.ಕೆ. ನಾಗರಾಜಶೆಟ್ಟಿ.