ಮುಳ್ಳೂರು, ಜು. ೨೮: ಏಕಕಾಲದಲ್ಲಿ ಗ್ರಾಮದ ಎರಡು ದೇವಸ್ಥಾನಗಳಿಗೆ ನುಗ್ಗಿದ ಕಳ್ಳರು ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಮತ್ತು ದೇವರ ವಿಗ್ರಹಕ್ಕೆ ಅಳವಡಿಸಿದ ಬೆಳ್ಳಿಯ ಆಭರಣವನ್ನು ಕಳುವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಮುಳ್ಳೂರು ಗ್ರಾಮದಲ್ಲಿರುವ ಶ್ರೀಕಾಳಿಕಾಂಭ ದೇವಸ್ಥಾನ ಮತ್ತು ಶ್ರೀಬಸವೇಶ್ವರ ದೇವಸ್ಥಾನ ಈ ಎರಡು ದೇವಸ್ಥಾನಗಳಿಗೆ ಕಳ್ಳರು ದೇವಸ್ಥಾನದ ಬಾಗಿಲು ಒಡೆದು ನುಗ್ಗಿದ್ದಾರೆ.
ಶ್ರೀ ಕಾಳಿಕಾಂಭ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವರ ಹುಂಡಿಯಲ್ಲಿದ್ದ ಐದು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ದೋಚಿ, ದೇವಿಯ ವಿಗ್ರಹಕ್ಕೆ ತೊಟ್ಟಿದ್ದ ಬೆಳ್ಳಿಯ ಆಭರಣವನ್ನು ಕಳ್ಳತನ ಮಾಡಿದ್ದಾರೆ. ನಂತರ ಪಕ್ಕದ ಬಸವೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಸ್ಥಾನದಲ್ಲಿ ಕಳವು ಮಾಡಲು ವಿಫಲಯತ್ನ ನಡೆಸಿದ್ದಾರೆ. ಈ ಕುರಿತು ಗುರುವಾರ ಗ್ರಾಮದ ಉಭಯ ದೇವಸ್ಥಾನ ಸಮಿತಿಯ ಪ್ರಮುಖರು ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನ ದಳ ತಂಡದೊAದಿಗೆ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.