ಮಡಿಕೇರಿ, ಜು. ೨೮ : ಶಿಕ್ಷಣ ಎಂದಿಗೂ ಯಾರಿಗೂ ಮೋಸ ಮಾಡುವದಿಲ್ಲ, ಶಿಕ್ಷಣದ ಮೂಲಕ ಸಮಾಜಕ್ಕೆ ಉತ್ತಮ ನಿಲುವುಗಳ ಕೊಡುಗೆ ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹಾಗೂ ಮಡಿಕೇರಿ ತಾಲೂಕು ಮುಖ್ಯ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ೨೦೨೨-೨೩ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಶೇ.೧೦೦ ಫಲಿತಾಂಶ ನೀಡಿದ ಶಿಕ್ಷಕರಿಗೆ ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಂದರ್ಭ ದಾರಿ ತಪ್ಪಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಈ ಬಗ್ಗೆ ಶಿಕ್ಷಕರು ಗಮನ ಹರಿಸಬೇಕಾಗುತ್ತದೆ. ಇತ್ತೀಚೆಗೆ ಯುವ ಪೀಳಿಗೆ ಮಾದಕ ವ್ಯಸನದತ್ತ ವಾಲುತ್ತಿರುವದನ್ನು ನೋಡುತ್ತಿದ್ದೇವೆ. ಈ ಬಗ್ಗೆ ಶಿಕ್ಷಣದ ಮೂಲಕ ಮಾರ್ಗದರ್ಶನ ನೀಡಬೆಕು. ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದಾಗಿದೆ. ವಿದ್ಯೆ ಎಂದಿಗೂ ಮೋಸ ಮಾಡುವದಿಲ್ಲ, ಯಾರಿಂದಲೂ ಕಸಿಯಲೂ ಸಾಧ್ಯವಿಲ್ಲ, ಹಾಗಾಗಿ ಶಿಕ್ಷಣ ಪಡೆದು ಸಮಾಜಕ್ಕೆ ಒಳಿತನ್ನು ಮಾಡಬೇಕು. ಹಾಗೆಯೇ ಶಿಕ್ಷಕರು ದೇಶದ ಭವಿಷ್ಯಕ್ಕೋಸ್ಕರ ತಮ್ಮನ್ನು ತ್ಯಾಗ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ; ಶಾಲೆಯ ಯಶಸ್ಸು ಶೇ. ೧೦೦ ಅಂಕದಲ್ಲಿ ಮಾತ್ರ ಇಲ್ಲ, ಶೇ.೧೦೦ ಅಂಕ ಪಡೆದ ವಿದ್ಯಾರ್ಥಿ ಭವಿಷ್ಯದಲ್ಲಿ ಏನು ಸಾಧನೆ ಮಾಡಿದ್ದಾನೆ, ಆ ವಿದ್ಯಾರ್ಥಿಗೆ ಬೇಕಾದ ಮಾರ್ಗದರ್ಶನ, ಸವಲತ್ತನ್ನು ನೀಡಿದ್ದೇವೆಯೇ ಎಂಬದನ್ನು ತಿಳಿದುಕೊಳ್ಳುವದು ಮುಖ್ಯವೆಂದು ಹೇಳಿದರು. ಮಕ್ಕಳ ವಿಚಾರದಲ್ಲಿ ಶಿಕ್ಷಕರು ಹಾಗೂ ಪೋಷಕರು ಸೂಕ್ಷö್ಮವಾಗಿರಬೇಕು. ಮುಕ್ತ ವಾತಾವರಣ ಕಲ್ಪಿಸಬೇಕು, ಎಲ್ಲರಲ್ಲೂ ಪ್ರತಿಭೆ ಇರುತ್ತದೆ, ಶಿಸ್ತು ಬದ್ಧ ಜೀವನ ನಡೆಸಲು ಜೀವನದ ಮೌಲ್ಯಗಳನ್ನು ಕಲಿಸಬೇಕಿದೆ.

(ಮೊದಲ ಪುಟದಿಂದ) ಜೀವನದಲ್ಲಿ ಸೋಲು ಇದ್ದೇ ಇರುತ್ತದೆ. ಸೋತಾಗ ಎದ್ದು ನಿಲ್ಲುವಂತಹ, ಗೆಲ್ಲುವ ಶಕ್ತಿಯನ್ನು ಶಿಕ್ಷಣದ ಮೂಲಕ ನೀಡಬೇಕೆಂದು ಹೇಳಿದರು.

ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ; ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದು, ಅವರುಗಳ ಬೇಡಿಕೆ ಈಡೇರಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡರು, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಗುರುರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ರವಿಕೃಷ್ಣ, ಕಾರ್ಯದರ್ಶಿ ಐ.ಜೆ. ಜಾನೆಟ್ ಇನ್ನಿತರರು ಉಪಸ್ಥಿತರಿದ್ದರು.