ಮಡಿಕೇರಿ, ಜು. ೨೯: ಪುಷ್ಯ ಮಳೆ ಆರಂಭದಿAದ ಈ ತನಕ ಜಿಲ್ಲೆ ಯಾದ್ಯಂತ ಬಿರುಸು ತೋರುವುದ ರೊಂದಿಗೆ ಪ್ರವಾಹ ಭೀತಿಯನ್ನು ಉಂಟು ಮಾಡಿತ್ತು. ಇದೀಗ ಮಳೆ ಮತ್ತೆ ಇಳಿಮುಖವಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ಭಾಗಗಳಲ್ಲಿ ಮುಂಗಾರು ಇದೀಗ ಕ್ಷೀಣ ಗೊಂಡAತಾಗಿದ್ದು ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಕೊಡಗು ಜಿಲ್ಲೆಯಲ್ಲಿ ಮುಂದಿನ ಆಗಸ್ಟ್ ೪ ರವರೆಗೂ ಮಳೆಯ ಪ್ರಮಾಣ ಕ್ಷೀಣಗೊಳ್ಳಲಿದೆ.
ಪುಷ್ಯ ಮಳೆ ಪ್ರಾರಂಭದ ಬಳಿಕ ಕೆಲ ದಿನಗಳ ಕಾಲ ಹಲವಾರು ಭಾಗಗಳಲ್ಲಿ ಸತತವಾಗಿ ನಾಲ್ಕೆöÊದು ಇಂಚುಗಳಷ್ಟು ಮಳೆ ಸುರಿದಿತ್ತು. ಭಾಗಮಂಡಲ - ಶಾಂತಳ್ಳಿ ವಿಭಾಗಗಳಲ್ಲಂತೂ ಸತತವಾಗಿ ೮-೧೦ ಇಂಚುಗಳಷ್ಟು ಮಳೆಯಾಗಿತ್ತು. ಸತತ ಮಳೆಯಿಂದಾಗಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವೂ ಕಡಿತಗೊಂಡಿತ್ತಲ್ಲದೆ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕವೂ ಸೃಷ್ಟಿಯಾಗಿತ್ತು. ಇದೀಗ ನಿನ್ನೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಮಳೆ ಕಡಿಮೆಯಾಗಿದ್ದು ಅಲ್ಲಲ್ಲಿ ಸಣ್ಣದಾಗಿ ಬಿಸಿಲೂ ಗೋಚರಿಸಿದೆ. ಆಗಸ್ಟ್ ೨ ತನಕ ಪುಷ್ಯ ಮಳೆ ನಕ್ಷತ್ರ ಮುಂದುವರಿಯಲಿದ್ದು ಆ. ೩ ರಿಂದ ಆಶ್ಲೇಷ ಮಳೆ ಆರಂಭಗೊಳ್ಳಲಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ವರ್ಷಂಪ್ರತಿ ಆಶ್ಲೇಷ ಮಳೆಯೂ ಹೆಚ್ಚಿನ ಬಿರುಸು ತೋರುತ್ತದೆ. ಇದೀಗಲೂ ಜನರ ಚಿತ್ತ ಆಶ್ಲೇಷ ಮಳೆಯ ಪರಿಣಾಮ ವೇನಾಗಲಿದೆ ಎಂಬದರತ್ತ ನೆಟ್ಟಿದೆ.
ತಲಕಾವೇರಿಗೆ ೧೦೪ ಇಂಚು ಮಳೆ
ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇದುವರೆಗೆ ೧೦೪ ಇಂಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ ಈ ಅವಧಿಗೆ ೧೪೫ ಇಂಚು ಮಳೆಯಾಗಿದ್ದು, ಈ ವರ್ಷ ೪೧ ಇಂಚು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ತಲಕಾವೇರಿಯಲ್ಲಿ ಒಟ್ಟು ಮಳೆಯ ಪ್ರಮಾಣ ೨೩೩ ಇಂಚು ಗಳಾಗಿತ್ತು. ಸ್ಥಳೀಯರಾದ ಸಿರಕಜೆ ಲೋಕಪ್ರಕಾಶ್ ಅವರು ತಲಕಾವೇರಿ ಮಳೆಯ ಮಾಹಿತಿ ನೀಡಿದ್ದಾರೆ.
ಭಾಗಮಂಡಲದಲ್ಲಿ ಇದುವರೆಗೆ ೯೬.೨೫ ಇಂಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಗೆ ೧೪೦.೨೭ ಇಂಚು ಮಳೆಯಾಗಿದ್ದು, ಈ ವರ್ಷ ೪೪ ಇಂಚು ಕಡಿಮೆ ಮಳೆ ಬಿದ್ದಿದೆ. ಕಳೆದ ವರ್ಷ ಜೂನ್ ಹಾಗೂ ಜುಲೈ ತಿಂಗಳಿನಲ್ಲಿಯೆ ಭಾಗಮಂಡಲಕ್ಕೆ ಅಧಿಕ ಮಳೆಯಾಗಿತ್ತು. ಈ ಭಾಗದಲ್ಲಿ ಕೃಷಿ ಚಟುವಟಿಕೆ ಇದೀಗ ಚುರುಕಾಗಿ ನಡೆಯುತ್ತಿದ್ದು, ಗದ್ದೆ ಉಳುವ ಕೆಲಸ ಪ್ರಾರಂಭಗೊAಡಿದೆ.
ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಅರಣ್ಯ ವಲಯ ಸನಿಹದ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿದೆ. ಪುಷ್ಪಗಿರಿ ತಪ್ಪಲಿನ ಹೆಗ್ಗಡಮನೆಯಲ್ಲಿ ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಧಾರೆಯನ್ನು ಹೊಂದಿರುವ ಮಲ್ಲಳ್ಳಿಯಲ್ಲಿ ತಲಾ ೧೨೮ ಇಂಚು ಮಳೆಯಾಗಿದೆ. ಶಾಂತಳ್ಳಿಯಲ್ಲಿ ಇದುವರೆಗೆ ೮೬ ಇಂಚು ಮಳೆ ಬಿದ್ದಿದೆ.
ಹಾರಂಗಿಯಲ್ಲಿ ಕ್ಷೀಣಗೊಂಡ
ಹೊರ ಹರಿವು
ಮಳೆ ಪ್ರಮಾಣ ಕಡಿಮೆಯಾಗುತ್ತಿ ರುವುದರಿಂದ ಜುಲೈ ೨೨ ರಂದು ಹಾರಂಗಿ
(ಮೊದಲ ಪುಟದಿಂದ) ಜಲಾಶಯದಿಂದ ನದಿಗೆ ಬಿಡಲಾಗಿದ್ದ ೨೦ ಸಾವಿರ ಕ್ಯೂಸೆಕ್ಸ್ ನೀರಿನ ಪ್ರಮಾಣ ಇದೀಗ ಸುಮಾರು ೩೬೦೦ ಕ್ಯೂಸೆಕ್ಸ್ಗೆ ಇಳಿದಿದೆ. ಈ ಕುರಿತು ಹಾರಂಗಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಪುಟ್ಟಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಹಾರಂಗಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ ಎಂದು ಖಾತರಿಪಡಿಸಿದರು. ಜಲಾಶಯದ ನೀರನ್ನು ನಂಬಿಕೊAಡಿರುವ ಕೃಷಿಕರಿಗೆ ನೀರಾವರಿಗಾಗಿ ಕಾಲುವೆಗಳ ಮೂಲಕ ಯಾವಾಗ ನೀರು ಬಿಡುತ್ತೀರಿ ಎನ್ನುವ ಪ್ರಶ್ನೆಗೆ ಇದೀಗ ಅದರ ಅವಶ್ಯಕತೆ ಕಂಡುಬAದಿಲ್ಲ. ಏಕೆಂದರೆ ಮಳೆಯ ನೀರು ಅಲ್ಲಲ್ಲಿ ಸಣ್ಣ ತೊರೆಗಳಾಗಿ ಹರಿದು ಕಾಲುವೆ ಸೇರಿ ಹರಿಯುತ್ತಿದೆ. ಇದುವರೆಗೂ ಮಳೆ ಇದ್ದುದರಿಂದ ಕೃಷಿಕರಿಗೆ ತೊಂದರೆ ಆಗಿಲ್ಲ. ಅಗತ್ಯವಿದ್ದಾಗ ಕಾಲುವೆಗಳಿಗೆ ನೀರು ಬಿಡಲಾಗುವುದೆಂದು ಅವರು ಮಾಹಿತಿಯಿತ್ತರು.
ಮನೆ ತೊರೆದವರು ವಾಪಸ್
ಸಿದ್ದಾಪುರ ಸನಿಹದ ನೆಲ್ಲಿಹುದಿಕೇರಿಯಲ್ಲಿ ಪ್ರವಾಹ ಭೀತಿಯಿಂದ ತಮ್ಮ ಮನೆಗಳನ್ನು ತೊರೆದು ಐದು ಕುಟುಂಬ ಸದಸ್ಯರು ಸುರಕ್ಷಿತ ಪ್ರದೇಶದಲ್ಲಿ ವಾಸವಾಗಿದ್ದು. ಇದೀಗ ಕಾವೇರಿ ನದಿ ನೀರಿನ ಪ್ರಮಾಣ ಇಳಿಮುಖಗೊಂಡಿದ್ದರಿAದ ಆ ಮನೆ ಮಂದಿ ತಮ್ಮ ಗೃಹಗಳಿಗೆ ವಾಪಾಸಾಗಿದ್ದಾರೆ. ಅದೇ ರೀತಿ ಕರಡಿಗೋಡು ವಿಭಾಗದಲ್ಲಿ ಕಾವೇರಿ ತೀರದಲ್ಲಿ ವಾಸಿಸುತ್ತಿರುವ ೧೫ ಕುಟುಂಬಗಳು ಪ್ರವಾಹದಿಂದ ರಕ್ಷಣೆಗಾಗಿ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸನ್ನದ್ಧರಾಗಿದ್ದರು. ಆದರೆ ಇದೀಗ ಮಳೆ ಇಳಿಮುಖಗೊಂಡು ಕಾವೇರಿ ನದಿಯಲ್ಲಿ ಪ್ರವಾಹ ಭೀತಿ ಮಾಯವಾಗಿರುವುದರಿಂದ ಇವರೆಲ್ಲರೂ ಸ್ವಸ್ಥಾನಗಳಲ್ಲಿಯೆ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಸ್ಥಳೀಯ ಆಡಳಿತವೂ ಕೂಡ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರೂ ಇದುವರೆಗೆ ಈ ಬಾರಿ ಅದರ ಅವಶ್ಯಕತೆ ಉಂಟಾಗಲಿಲ್ಲ. ಕಳೆದ ಸಾಲಿನಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಲಾಗಿತ್ತು.
ದಕ್ಷಿಣ ಕೊಡಗಿನಲ್ಲೂ
ಕಡಿಮೆಯಾದ ಮಳೆ
ದಕ್ಷಿಣ ಕೊಡಗಿನಲ್ಲ್ಲಿಯೂ ಇದೀಗ ಮಳೆ ಇಳಿಮುಖಗೊಂಡಿದೆ. ಗೋಣಿಕೊಪ್ಪಲಿನಲ್ಲಿಯೂ ಕೀರೆಹೊಳೆ ಮತ್ತಿತರ ಕೆರೆ ತೊರೆಗಳಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ಲಕ್ಷö್ಮಣತೀರ್ಥದಲ್ಲಿಯೂ ಸದ್ಯಕ್ಕೆ ಪ್ರವಾಹ ಭೀತಿ ಮರೆಯಾಗಿದೆ. ಜುಲೈ ೧ ರಿಂದ ಇಂದಿನವರೆಗೆ ವೀರಾಜಪೇಟೆ ಹೋಬಳಿಯಲ್ಲಿ ೨೪.೫ ಇಂಚು, ಅಮ್ಮತ್ತಿ ಹೋಬಳಿಯಲ್ಲಿ ೧೭.೪ ಇಂಚು, ಬಾಳೆಲೆ ಹೋಬಳಿಯಲ್ಲಿ ೯.೪೪ ಇಂಚು, ಹುದಿಕೇರಿ ಹೋಬಳಿ ಯಲ್ಲಿ ೨೯.೬೦ ಇಂಚು, ಪೊನ್ನಂಪೇಟೆ ಹೋಬಳಿಯಲ್ಲಿ ೧೫.೬೬ ಇಂಚು, ಶ್ರೀಮಂಗಲ ಹೋಬಳಿಯಲ್ಲಿ ೨೧.೩೭ ಇಂಚು ಮಳೆಯಾಗಿದೆ.
ವಾರಾಂತ್ಯದಲ್ಲಿ ಪ್ರವಾಸಿಗರು
ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರ ಅನಿಸಿಕೆಯಂತೆ ಈ ಬಾರಿಯ ಇದುವರೆಗಿನ ಮಳೆಗಾಲದ ಅವಧಿಯಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇತರ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅನೇಕ ಪ್ರವಾಸಿಗರು ಮಳೆಗಾಲದಲ್ಲಿ ಎಲ್ಲಾ ಪ್ರವಾಸಿ ತಾಣಗಳಿಗೆ ತೆರಳದಿದ್ದರೂ ವಸತಿ ಗೃಹಗಳಲ್ಲಿಯೇ ಕುಳಿತು ಕೊಡಗಿನ ಮಳೆಯನ್ನು ಆನಂದಿಸಲೆAದೇ ಬರುವವರಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಫಿಗೆ ಆಘಾತಕಾರಿ
ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಡಾ. ಕಾವೇರಪ್ಪ ಅವರ ಅನಿಸಿಕೆಯಂತೆ ಈ ವರ್ಷ ಕಳೆದ ಸಾಲಿಗೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆ ಇದ್ದರೂ ಕಾಫಿ ಬೆಳೆಗೆ ತೀವ್ರ ಹೊಡೆತ ಉಂಟಾಗಿದೆ ಎಂದು ವಿಶ್ಲೇಷಿಸಿದರು. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯೂ ಮೌನ ವಹಿಸಿದೆ. ಸಿಬ್ಬಂದಿಗಳು ಕಾಫಿ ಬೆಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ಘೋಷಿಸು ವಂತೆಯೂ ಮನವಿ ಮಾಡಿದ್ದಾರೆ.
ಕೊಡಗಿನ ಚೆಯ್ಯಂಡಾಣೆ, ಕಕ್ಕಬೆ, ನಾಪೋಕ್ಲು, ಶ್ರೀಮಂಗಲ, ಬಿರುನಾಣಿ ಹಾಗೂ ಟಿ.ಶೆಟ್ಟಿಗೇರಿ ಪ್ರದೇಶಗಳಲ್ಲಿ ರೋಬಸ್ಟಾ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಏಕೆಂದರೆ ಈ ವರ್ಷ ಈ ಪ್ರದೇಶಗಳಲ್ಲಿ ಜನವರಿಯಲ್ಲಿಯೇ ಮಳೆಯಾಗಿದ್ದು, ಆ ಸಂದರ್ಭ ರೋಬಸ್ಟಾ ಕಾಫಿ ಗಿಡಗಳಲ್ಲಿ ಹೂ ಬಿಟ್ಟಿದೆ. ಸಹಜವಾದ ಕ್ರಮಕ್ಕಿಂತ ಹೊರತಾಗಿ ಅವಧಿಗೆ ಮುನ್ನವೇ ಕಾಫಿ ಬೀಜಗಳು ಫಸಲು ನೀಡಿವೆ. ಇದರಿಂದಾಗಿ ಈಗಿನ ಮಳೆಯಲ್ಲಿ ಎಲ್ಲಾ ಕಡೆ ಕಾಫಿ ಹಣ್ಣುಗಳು ನೆಲಕ್ಕೆ ಬಿದ್ದಿವೆ. ಇದೊಂದು ವಿಚಿತ್ರವಾದ ಸನ್ನಿವೇಶ ಈ ವರ್ಷ ಕಂಡುಬAದಿದೆ ಎಂದು ಅವರು ಮಾಹಿತಿಯಿತ್ತರು. ಕಾಫಿ ಹಣ್ಣುಗಳು ಕೊಳೆತಂತಾಗಿ ಬೀಳುತ್ತಿವೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಸರಾಸರಿ ಮಳೆ ಸುಮಾರು ೬೨ ಇಂಚು ದಾಟಿದ್ದು ಕಳೆದ ವರ್ಷಕ್ಕಿಂತ ೧೫-೨೦ ಇಂಚುಗಳಷ್ಟು ಕಡಿಮೆಯಿದೆ. ಒಂದು ವಾರದ ಹಿಂದೆ ಕಳೆದ ಸಾಲಿನ ಅಂಕಿ ಅಂಶಕ್ಕಿAತ ಶೇ. ೫೦ರಷ್ಟು ಕೊರತೆ ಕಂಡುಬAದಿತ್ತು. ಇದೀಗ ಮಳೆ ಮತ್ತೊಮ್ಮೆ ಇಳಿಮುಖವಾಗಿರುವು ದರಿಂದ ಇನ್ನೂ ಈ ಪ್ರಮಾಣ ಕಡಿಮೆ ಯಾಗುವ ಸಾಧ್ಯತೆ ಎದುರಾಗಿದೆ.
ಈ ತನಕದ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಕೆಲಸ ಕಾರ್ಯಗಳು ಒಂದಷ್ಟು ಚುರುಕು ಕಂಡಿದ್ದು ಮುಂದಿನ ಪ್ರಾಕೃತಿಕ ಪರಿಸ್ಥಿತಿ ಏನಾಗಲಿದೆ ಎಂಬ ಚರ್ಚೆ ಎದುರಾಗಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಕೇವಲ ೫೮ ಸೆಂಟ್ಗಳಷ್ಟು ಮಾತ್ರ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೨೧ ಇಂಚು, ವೀರಾಜಪೇಟೆ ೦.೧೦ ಸೆಂಟ್ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೦.೪೨ ಸೆಂಟ್ಗಳಷ್ಟು ಮಾತ್ರ ಸರಾಸರಿ ಮಳೆಯಾಗಿದೆ.
- ವರದಿ : ಶಶಿ ಸೋಮಯ್ಯ, ಕುಯ್ಯಮುಡಿ ಸುನಿಲ್, ವಾಸು ಆಚಾರ್ಯ,
ವಿಜಯ್ ಹಾನಗಲ್, ನಾಗರಾಜಶೆಟ್ಟಿ,
ಹೆಚ್.ಕೆ. ಜಗದೀಶ್.