ಸಿದ್ದಾಪುರ, ಜು. ೨೮: ವೀರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಇಂಜಿಲಗೆರೆ ಮುತ್ತಪ್ಪ ದೇವಾಲಯ ಬಳಿಯ ನಿವಾಸಿ ಕೃಷಿಕ ಟಿ.ಎ.ಪ್ರಕಾಶ್ ಅವರ ಮನೆ ಅಂಗಳದಲ್ಲಿ ರಾತ್ರಿ ೧೨.೩೦ ಗಂಟೆಗೆ ಆನೆ ಕಾಣಿಸಿಕೊಂಡಿದ್ದು, ತೋಟದ ಫಸಲು ನಾಶ ಮಾಡುವುದರೊಂದಿಗೆ ಗೇಟ್ ಮುರಿದುಹಾಕಿದೆ. ವೀರಾಜಪೇಟೆಗೆ ತೆರಳುವ ಮುಖ್ಯ ರಸ್ತೆ ಬದಿಯಲ್ಲೇ ಮನೆ ಇದ್ದು, ನಡುರಾತ್ರಿ ವೇಳೆಗೆ ಮನೆಯವರಿಗೆ ಶಬ್ದ ಕೇಳಿಸಿದೆ. ಮನೆಯಿಂದ ಹೊರ ಬಂದು ಅಂಗಳಕ್ಕೆ ಬೆಳಕು ಹಾಕಿದಾಗ ಅಂಗಳದಲ್ಲೆ ಆನೆ ಕಂಡಿದೆ. ಭೀತಿಗೆ ಒಳಗಾದ ಅವರು ಮನೆಯ ಸುತ್ತಲು ಬೆಳಕು ಮೂಡುವಂತೆ ಮಾಡಿದ್ದಾರೆ.
ಪ್ರಕಾಶ್ ರವರ ಮನೆಯ ಅಂಗಳದಲ್ಲಿ ಆನೆ ಓಡಾಡಿದ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.
ಈ ಭಾಗದಲ್ಲಿ ಕಾಡಾನೆಗಳು ಹಲವು ಸಮಯಗಳಿಂದ ಉಪಟಳ ನೀಡುತ್ತಿವೆ. ಆನೆಗಳು ಕೃಷಿಕರ ತೋಟಕ್ಕೆ ನುಗ್ಗಿ ಫಸಲುಭರಿತ ತೆಂಗಿನ ಸಸಿ, ಅಡಿಕೆ ಸಸಿ ಹಾಗೂ ಬಾಳೆ ಸಸಿಗಳನ್ನು ತಿಂದು ಹಾನಿಗೊಳಿಸುತ್ತಿವೆ. ಕಳೆದ ಒಂದು ವಾರದ ಹಿಂದೆಯಷ್ಟೇ ಇದೇ ವ್ಯಾಪ್ತಿಯ ಬೆಳೆಗಾರ ಮೋಹನ್ ಎಂಬವರ ತೋಟಕ್ಕೆ ಲಗ್ಗೆಯಿಟ್ಟಿದ್ದ ಕಾಡಾನೆ ಹಲಸಿನ ಮರ ಸೇರಿದಂತೆ ಕಾಫಿ ಫಸಲನ್ನು ನಾಶಮಾಡಿ ಹೋಗಿತ್ತು.