ಸೋಮವಾರಪೇಟೆ, ಜು. ೨೯: ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ, ದಶಕಗಳ ಹಿಂದೆ ನಿರ್ಮಾಣವಾಗಿರುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಒಂದು ಪಾರ್ಶ್ವ ಕುಸಿಯುತ್ತಿರುವ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿದ ಬೆನ್ನಲ್ಲೇ ಎಚ್ಚೆತ್ತು ಕೊಂಡಿರುವ ಲೋಕೋಪಯೋಗಿ ಇಲಾಖೆ, ಸೇತುವೆ ಮೇಲಿನ ಸಂಚಾರವನ್ನು ಬಂದ್ ಮಾಡಿದೆ.

ಇದರೊಂದಿಗೆ ನೂತನ ಸೇತುವೆ ನಿರ್ಮಾಣ ಹಾಗೂ ಹೊಳೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಲು ರೂ. ೨ ಕೋಟಿ ವೆಚ್ಚದ ಕ್ರಿಯಾ ಯೋಜನೆಗಾಗಿ ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸಕ್ತ ಸಾಲಿನ ಮಳೆಯ ಸಂದರ್ಭ ಸೇತುವೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದು, ಹಳೆಯ ಕಾಲದಲ್ಲಿ ಕಟ್ಟಿದ್ದ ಇಟ್ಟಿಗೆಗಳು ಹೊಳೆ ಪಾಲಾಗಿವೆ. ಇದರೊಂದಿಗೆ ಸೇತುವೆ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪುತ್ತಿರುವ ಬಗ್ಗೆ ವರದಿ ಮೂಲಕ ಗಮನ ಸೆಳೆದ ಹಿನ್ನೆಲೆ ತಕ್ಷಣ ಸ್ಪಂದನ ನೀಡಿರುವ, ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರು, ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದು, ಅದರಂತೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಅವರು ಸ್ಥಳ ಪರಿಶೀಲನೆ ನಡೆಸಿ ಸೇತುವೆ ಮೇಲಿನ ಸಂಚಾರವನ್ನು ಬಂದ್ ಮಾಡಿಸಿದ್ದಾರೆ.

ಸೇತುವೆಯ ಎರಡೂ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ಯಾವುದೇ ವಾಹನಗಳು ಸಂಚರಿಸದAತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಸೇತುವೆಯನ್ನು ತೆರವುಗೊಳಿಸಿ ನೂತನವಾಗಿ ಸೇತುವೆ ನಿರ್ಮಿಸಲು ರೂ. ೨ ಕೋಟಿಗೆ ಕ್ರಿಯಾಯೋಜನೆ ತಯಾರಿಸಲು ಇಲಾಖೆಯ ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ‘ಶಕ್ತಿ’ಗೆ ಅಭಿಯಂತರ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.

ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಎರಡು ಸೇತುವೆಗಳಿದ್ದು, ಕುಶಾಲನಗರ-ಸೋಮವಾರಪೇಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಿಂದ ಹಾನಗಲ್ಲು, ತಾಕೇರಿ, ಗರ್ವಾಲೆ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸೇತುವೆಗಳಿವೆ.

ಈ ಪೈಕಿ ಹಾನಗಲ್ಲು ಮಾರ್ಗಕ್ಕೆ ಸಂಪರ್ಕಿಸುವ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಇದೇ ಸೇತುವೆಯ ಮೇಲೆ ದಿನಂಪ್ರತಿ ಸಾವಿರಾರು ವಾಹನಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಒಂದು ವೇಳೆ ಸೇತುವೆ ಕುಸಿದರೆ ಅನಾಹುತ ಸಂಭವಿಸುವ ಸಾಧ್ಯತೆಗಳ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ತಕ್ಷಣ, ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿದ್ದು, ಸದ್ಯಕ್ಕೆ ಸೇತುವೆ ಮೇಲಿನ ವಾಹನಗಳ ಸಂಚಾರವನ್ನು ಬಂದ್ ಮಾಡಿದೆ. ಈ ಮಾರ್ಗದಲ್ಲಿ ತೆರಳುವ ವಾಹನಗಳು ಬಸವೇಶ್ವರ ಪ್ರತಿಮೆ ಮುಂಭಾಗದ ರಸ್ತೆಯ ಮೂಲಕ ತೆರಳಬೇಕಿದೆ.

- ವಿಜಯ್