ಮಡಿಕೇರಿ, ಜು. ೨೭: ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ದೊರಕಬೇಕಾದ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ನೋವು ಕಾಡುತ್ತಿದೆ ಎಂದು ವಿಷಾಧಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಯುದ್ಧ ಕಾಲದಲ್ಲಿ ಮಾತ್ರ ಸೈನಿಕರನ್ನು ಸ್ಮರಿಸುವ ಬದಲಿಗೆ ಸದಾ ದೇಶ ರಕ್ಷಣೆಯ ಪಣ ತೊಟ್ಟಿರುವ ಭಾರತೀಯ ಸೈನಿಕರನ್ನು ಸ್ಮರಿಸುವಂತಾಗಬೇಕು ಎಂದು ಕರೆ ನೀಡಿದರು.

ಕಾರ್ಗಿಲ್ ವಿಜಯ ದಿನಾಚರಣೆ ಹಿನ್ನೆಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಬುಧವಾರ ಸಂಜೆ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಮರ್ ಜವಾನ್ ಸ್ಮಾರಕದಲ್ಲಿ ಪುಪ್ಪನಮನ ಸಲ್ಲಿಸಿದ ತರುವಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಪೊನ್ನಣ್ಣ ಅವರು, ದೇಶದ ವೀರ ಇತಿಹಾಸದೊಂದಿಗೆ ಸೈನಿಕರ ಕೊಡುಗೆಯನ್ನೂ ಮರೆಯಬಾರದು ಎಂದರು. ಯೋಧರ ನಾಡು ಎನಿಸಿದ ಕೊಡಗಿನಲ್ಲಿ ಯೋಧ ಸ್ಮರಣೆಗೆ ಮತ್ತಷ್ಟು ಹೆಚ್ಚಿನ ಪ್ರಚಾರ ದೊರಕಬೇಕು ಎಂದು ಅಭಿಪ್ರಾಯಪಟ್ಟರು.

ಜನರಲ್ ತಿಮ್ಮಯ್ಯ ಮ್ಯೂಸಿಯಂನAಥ ಸೈನಿಕರ ದೇವಾಲಯದಲ್ಲಿ ಕಾರ್ಗಿಲ್ ದಿನಾಚರಣೆಯನ್ನು ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದು ಸಂತೋಷ ತಂದಿದೆ. ಮುಂದಿನ ವರ್ಷದಿಂದ ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಕೂಡ ಸಹಭಾಗಿತ್ವ ನೀಡುವಂತೆ ಮಾಡಲಾಗುತ್ತದೆ ಎಂದು ಪೊನ್ನಣ್ಣ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೊಡಗು ಮಾಜಿ ಸೈನಿಕರ ಸಂಘದ ಗೌರವ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ಶಾಂತಿ ಮಂತ್ರದAತೆ ಪಾಕಿಸ್ತಾನದ ಪ್ರಧಾನಿಗಳ ಕೈಕುಲುಕಿ ಸ್ನೇಹ ಹಸ್ತ ಚಾಚಿ ಬಂದರಾದರೂ ಕೊನೆಗೆ ಕಾರ್ಗಿಲ್ ವಿಚಾರದಲ್ಲಿ ಉಭಯ ದೇಶಗಳ ಒಪ್ಪಂದ ಮುರಿದು ಪಾಕಿಸ್ತಾನ ನಂಬಿಕೆ ದ್ರೋಹ ಮಾಡಿ ಭಾರತೀಯ ಸೈನಿಕರಿಂದ ತಕ್ಕ ಶಾಸ್ತಿ ಅನುಭವಿಸಿತು ಎಂದರು.

ಕಾರ್ಗಿಲ್‌ನ್ನು ಬಹಳ ಸಾಹಸದಿಂದ ಮರಳಿ ಪಡೆದ ಭಾರತೀಯ ಸೈನಿಕರ ಪರಾಕ್ರಮವನ್ನು ಪ್ರತೀ ವರ್ಷ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿನವನ್ನಾಗಿ ಆಚರಿಸಿ ಯೋಧರಿಗೆ ಗೌರವ ನೀಡಲಾಗುತ್ತಿದೆ ಎಂದರು.

ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್ ಮಾತನಾಡಿ, ನಮ್ಮ ಇವತ್ತಿನ ಪ್ರತೀ ದಿನಗಳೂ ಭಾರತೀಯ ಸೈನಿಕರ ತ್ಯಾಗ ಬಲಿದಾನದ ಮೇಲೆ ಅವಲಂಭಿತವಾಗಿದೆ. ಸೈನಿಕರ ಕುಟುಂಬಗಳಿಗೆ ಬೆಂಬಲವನ್ನು ಸಮಾಜದ ಪ್ರಜೆಗಳಾಗಿ ನೀಡಬೇಕು ಎಂದರಲ್ಲದೇ, ಕಾರ್ಗಿಲ್ ಪ್ರದೇಶವನ್ನು ಶತ್ರುಗಳಿಂದ ಮರಳಿ ಪಡೆಯಲು ಭಾರತೀಯ ಸೈನಿಕರು ಪಟ್ಟ ಸಾಹಸ ಜಗತ್ತಿನ ಇತಿಹಾಸದ ಪುಟಗಳಲ್ಲಿಯೇ ದಾಖಲಾಗುವಂಥದ್ದು ಎಂದರು. ಮುಂದಿನ ಪೀಳಿಗೆ ಕಾರ್ಗಿಲ್ ಹೋರಾಟದಲ್ಲಿ ನಮ್ಮ ಸೈನಿಕರ ತ್ಯಾಗ ಬಲಿದಾನವನ್ನು ಮರೆಯಬಾರದು ಎಂದೂ ತಿಲಕ್ ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿಯು ದೇಶರಕ್ಷಣೆಯಲ್ಲಿ ಸಕ್ರಿಯರಾಗಿರುವ ಹೆಮ್ಮೆಯ ಸೈನಿಕರನ್ನು ಸ್ಮರಿಸುವ ಉದ್ದೇಶದಿಂದ ಪ್ರತೀವರ್ಷ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಈ ಮೂಲಕ ಸೈನಿಕ ಪರಿವಾರಕ್ಕೆ ರೋಟರಿಯು ತನ್ನ ಗೌರವವನ್ನು ಸಾಂಕೇತಿಕವಾಗಿ ಸಲ್ಲಿಸುತ್ತಿದೆ ಎಂದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ ವಂದಿಸಿದ ಕಾರ್ಯಕ್ರಮವನ್ನು ರೋಟರಿ ನಿರ್ದೇಶಕ ಅನಿಲ್ ಎಚ್.ಟಿ. ನಿರೂಪಿಸಿದರು. ರೋಟರಿ ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಕೀಲ ನರೇಂದ್ರ ಕಾಮತ್, ಬಿದ್ದಾಟಂಡ ತಮ್ಮಯ್ಯ, ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ, ರೋಟರಿ ಪ್ರಮುಖರಾದ ಎ.ಕೆ. ವಿನೋದ್, ಬಿ.ಜಿ. ಅನಂತಶಯನ, ಪ್ರಸಾದ್ ಗೌಡ, ಬಿ.ಕೆ. ರವೀಂದ್ರರೈ, ಪೂವಯ್ಯ, ಪಿ.ವಿ. ಅಶೋಕ್, ಶಿಲ್ಪಾರೈ, ಕೆ. ವಸಂತ್ ಕುಮಾರ್ ಸೇರಿದಂತೆ ಅನೇಕರು ಯೋಧ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಕೌಶಲ್, ಕ್ಯಾತಿ ಮತ್ತು ಕೃತಾರ್ಥ ಅವರಿಂದ ದೇಶಭಕ್ತಿಗೀತೆ ಮೆಚ್ಚುಗೆ ಪಡೆಯಿತು.