ಗೋಣಿಕೊಪ್ಪಲು, ಜು. ೨೭: ಆಟೋ ಚಾಲಕರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ನಗರದ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಈ ವೇಳೆ ಚಾಲಕರ ನಡುವೆ ಮಾತಿನ ವಾಗ್ಯುದ್ಧವೇ ನಡೆಯಿತು. ಪೊಲೀಸರ ಆಗಮನ ದಿಂದಾಗಿ ವಾತಾವರಣ ತಿಳಿಗೊಂಡ ಘಟನೆ ವಾಣಿಜ್ಯ ನಗರ ಗೋಣಿಕೊಪ್ಪ ಬಸ್ ನಿಲ್ದಾಣದ ಸಮೀಪವಿರುವ ಆಟೋ ನಿಲ್ದಾಣದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ೧೧ ಗಂಟೆಗೆ ಬಸ್ ನಿಲ್ದಾಣ ಸಮೀಪವಿರುವ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವಾರ್ಷಿಕ ಮಹಾಸಭೆಯು ಆಯೋಜನೆಗೊಂಡಿತು. ಮಹಾಸಭೆಗೆ ನಿಲ್ದಾಣದಲ್ಲಿ ಆಟೋಗಳನ್ನು ನಿಲ್ಲಿಸಿ ಸದಸ್ಯರು ಸಭೆಗೆ ತೆರಳಿದ್ದರು. ಈ ವೇಳೆ ಕೆಲವು ಸದಸ್ಯರು ಸಭೆಗೆ ತೆರಳಿರಲಿಲ್ಲ. ನಿಲ್ದಾಣದಲ್ಲಿ ಆಟೋರಿಕ್ಷಾಗಳು ನಿಲುಗಡೆಗೊಂಡಿದ್ದರಿAದ ಉಳಿದ ಆಟೋಗಳಿಗೆ ನಿಲ್ದಾಣದಲ್ಲಿ ಸ್ಥಳವಿರಲಿಲ್ಲ. ಈ ಬಗ್ಗೆ ಮತ್ತೊಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾಡು ಜೋಸೆಫ್ ನಿಲ್ದಾಣದಲ್ಲಿ ಉಳಿದ ಆಟೋಗಳಿಗೆ ಸ್ಥಳಾವಕಾಶವಿಲ್ಲದ ಬಗ್ಗೆ ಆಕ್ಷೇಪಿಸಿ ಸಂಘದ ಅಧ್ಯಕ್ಷರಿಗೆ ಹಾಗೂ ಪೊಲೀಸರಿಗೆ, ದೂರವಾಣಿ ಮೂಲಕ ತಿಳಿಸುವ ಪ್ರಯತ್ನ ನಡೆಸಿದರು. ಆದರೆ ಯಾರೂ ಕೂಡ ದೂರವಾಣಿ ಸ್ವೀಕರಿಸಿರÀಲಿಲ್ಲ. ಇದರಿಂದ ತಮ್ಮ ಆಟೋಗಳನ್ನು ನಿಲ್ದಾಣದ ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಸಾರ್ವಜನಿಕರಿಗೆ ಸೇವೆ ನೀಡಲು ಮುಂದಾಗಿದ್ದರು. ಇದರಿಂದ ಆಟೋ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ಆಟೋಗಳು ನಿಲ್ಲುವಂತಾಗಿತ್ತು.
ಮಹಾಸಭೆಯಲ್ಲಿದ್ದ ಆಟೋ ಸಂಘದ ಸದಸ್ಯರಿಗೆ ಈ ಮಾಹಿತಿ ದೊರೆಯುತ್ತಿದ್ದಂತೆಯೇ ಸಭೆಯಿಂದ ಆಗಮಿಸಿದ ಸದಸ್ಯರು ನಿಲ್ದಾಣಕ್ಕೆ ಜಮಾಯಿಸಿ ಅಲ್ಲಿದ್ದ ಇನ್ನೊಂದು ಆಟೋ ಸಂಘದ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಕೆಲಕಾಲ ಘರ್ಷಣೆಯ ವಾತಾವರಣ ನಿರ್ಮಾಣವಾಯಿತು. ಎರಡು ಸಂಘದ ಸದಸ್ಯರ ನಡುವೆ ಮಾತಿನ ವಾಗ್ಯುದ್ಧ ನಡೆದು ಹೋಯಿತು. ಕೈ ಕೈ ಮೀಸಲಾಯಿಸುವ ಹಂತದವರೆಗೂ ಪರಿಸ್ಥಿತಿ ತಲುಪಿತ್ತು.
ಈ ವೇಳೆ ಮುಂದಾಗಬಹುದಾದ ಅನಾಹುತವನ್ನು ಗಮನಿಸಿದ ಆಟೋ ಸಂಘದ ಅಧ್ಯಕ್ಷ ಕುಲ್ಲಚಂಡ ಪಿ. ಬೋಪಣ್ಣ ಎರಡು ಗುಂಪುಗಳ ಸದಸ್ಯರನ್ನು ಸಮಧಾನಿಸುವ ಪ್ರಯತ್ನ ನಡೆಸಿದರು. ಆದರೂ ಎರಡು ಗುಂಪುಗಳ ನಡುವೆ ಮಾತಿನ ಸಮರ ಮುಂದುವರಿಯಿತು. ನಿಲ್ದಾಣದಲ್ಲಿದ್ದ ನಾಗರಿಕರು ಈ ಘಟನೆಯನ್ನು ನೋಡಲು ನಿಲ್ದಾಣದ ಸುತ್ತಲು ನೆರೆದಿದ್ದರು. ತೀವ್ರ ಮಾತಿನ ಚಕಮಕಿಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪುಗಳನ್ನು ಚದುರಿಸಿ, ವಾತಾವರಣವನ್ನು ತಿಳಿಗೊಳಿಸಿ ಅಲ್ಲಿಂದ ತೆರಳಿದರು.
ಮಹಾಸಭೆಯಲ್ಲಿ ಭಾಗವಹಿಸಿ ಆಗಮಿಸಿದ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರತಿಕ್ರಿಯಿಸಿ, ವರ್ಷಂಪ್ರತಿ ಮಹಾಸಭೆಯನ್ನು ನಡೆಸುವ ಸಂದರ್ಭದಲ್ಲಿ ಆಟೋರಿಕ್ಷಾವನ್ನು ನಿಲ್ದಾಣದಲ್ಲಿ ಬಿಟ್ಟು ತೆರಳುತ್ತೇವೆ. ಸಂಘ ಸ್ಥಾಪನೆಗೊಂಡು ೩೦ ವರ್ಷಗಳು ಕಳೆದಿವೆ. ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಮತ್ತೊಂದು ಸಂಘದ ಸದಸ್ಯರು ಉದ್ದೇಶಪೂರ್ವಕವಾಗಿ ಈ ರೀತಿಯ ಗೊಂದಲ ನಿರ್ಮಾಣ ಮಾಡಿದ್ದಾರೆ.
ನಿಲ್ದಾಣದ ಸುತ್ತಮುತ್ತಲಿನಲ್ಲಿ ಆಟೋರಿಕ್ಷಾಗಳು ನಿಯಮಬಾಹಿರ ವಾಗಿ ಸಂಚಾರ ನಡೆಸುತ್ತವೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ನಿಲ್ದಾಣದಲ್ಲಿ ನ್ಯಾಯಯುತ ವಾಗಿ ನಿಲ್ಲಿಸಿ ಬಾಡಿಗೆ ಮಾಡುವ ಚಾಲಕರಿಗೆ ಸಮಸ್ಯೆ ಆಗುತ್ತಿದೆ ಎಂದರು.
ಪ್ರಗತಿ ಸಂಘದ ಪ್ರಧಾನ ಕಾರ್ಯದರ್ಶಿ ಡಾಡು ಜೋಸೆಫ್ ಪ್ರತಿಕ್ರಿಯಿಸಿ ನಿಲ್ದಾಣವು ಎಲ್ಲಾ ಚಾಲಕರಿಗೆ ಸೇರಿದ್ದಾಗಿದೆ. ಸಭೆಗೆ ತೆರಳುವ ವೇಳೆ ನಿಲ್ದಾಣದಲ್ಲಿ ಆಟೋ ನಿಲ್ಲಿಸಿ ಹೋಗಿರುವುದರಿಂದ ಉಳಿದ ಆಟೋಗಳು ನಿಲುಗಡೆ ಮಾಡಲು ಸಮಸ್ಯೆ ಆಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ನಾವುಗಳು ಆಟೋ ಚಾಲನೆ ಮಾಡಿದ್ದೇವೆ. ನಿಲ್ದಾಣದಲ್ಲಿ ಜಾಗವಿಲ್ಲದ ಕಾರಣ ರಸ್ತೆಯಲ್ಲಿಯೇ ಆಟೋಗಳನ್ನು ನಿಲ್ಲಿಸಿದ್ದೇವೆ. ಬಸ್ ನಿಲ್ದಾಣದ ಸುತ್ತಮುತ್ತ ನಿಯಮ ಬಾಹಿರವಾಗಿ ಓಡಾಡುವ ಆಟೋರಿಕ್ಷಾಗಳ ಮೇಲೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಪೊಲೀಸರು ಕಠಿಣ ನಿರ್ಧಾರವನ್ನು ಕೈಗೊಂಡಲ್ಲಿ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದರು.
-ಹೆಚ್.ಕೆ. ಜಗದೀಶ್