ಸೋಮವಾರಪೇಟೆ, ಜು. ೨೭: ಮಣಿಪುರದಲ್ಲಿ ನಡೆದಿರುವ ಮಹಿಳೆಯರ ನಗ್ನ ಮೆರವಣಿಗೆ ಘಟನೆಯನ್ನು ಖಂಡಿಸಿರುವ ನಗರ ಕಾಂಗ್ರೆಸ್, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂತಹ ಹೇಯ ಕೃತ್ಯಗಳು ನಡೆದಿದ್ದು, ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಆದರೂ ಕೇಂದ್ರ ಸರ್ಕಾರ ಮೌನವಹಿಸಿರುವುದು ಸರಿಯಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸಲು ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಹೆಚ್.ಎ. ನಾಗರಾಜ್, ಉಪಾಧ್ಯಕ್ಷ ಜಮೀರ್, ಪ್ರಧಾನ ಕಾರ್ಯದರ್ಶಿ ಬೇಟು, ಕಾರ್ಮಿಕ ಘಟಕದ ಅಧ್ಯಕ್ಷ ಜೇಕಬ್ ಸೈಮನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.