ಸಿದ್ದಾಪುರ, ಜು. ೨೬: ಮಾಲ್ದಾರೆ, ನೆಲ್ಲಿಹುದಿಕೇರಿ, ಅಮ್ಮತ್ತಿ, ಪಾಲಿಬೆಟ್ಟ, ಮರಗೋಡು, ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯ ನಿವಾಸಿಗಳು ಸಾಮಗ್ರಿ ಖರೀದಿಸಲು ಸಿದ್ದಾಪುರದ ಮಾರುಕಟ್ಟೆಯನ್ನು ಅವಲಂಬಿಸಿದ್ದು, ಇದೀಗ ಭಾನುವಾರದ ಸಂತೆ ದಿನ ಸಿದ್ದಾಪುರದ ಮಾರುಕಟ್ಟೆಯಲ್ಲಿ ಸಾಮಗ್ರಿಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ೨೫ ಮಂದಿ ಸದಸ್ಯರನ್ನೊಳಗೊಂಡ ಏಕೈಕ ಗ್ರಾ.ಪಂ ಎಂಬ ಹೆಗ್ಗಳಿಕೆಯನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಹೊಂದಿದೆ. ಅಲ್ಲದೆ ಅತೀ ಹೆಚ್ಚು ಆದಾಯ ಹೊಂದಿರುವ ಗ್ರಾಮ ಪಂಚಾಯಿತಿಗಳ ಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದಿದೆ. ಆದರೆ ಇಷ್ಟೆಲ್ಲಾ ಗರಿಮೆ ಹೊಂದಿರುವ ಗ್ರಾಮ ಪಂಚಾಯಿತಿ ಸಂತೆ ಮಾರು ಕಟ್ಟೆಯ ದುರಸ್ತಿಗೆ ಮುಂದಾಗದೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಪುರಾತನ ಮಾರುಕಟ್ಟೆಯು ಸಂಪೂರ್ಣವಾಗಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದು ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೂ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಸಿದ ಗೋಡೆ, ಜಾರುತ್ತಿರುವ ಮೇಲ್ಛಾವಣಿಗಳು
ಸಿದ್ದಾಪುರ ಮಾರುಕಟ್ಟೆಯು ಅತಿ ಪುರಾತನ ಮಾರುಕಟ್ಟೆಯಾಗಿದೆ. ಗ್ರಾಮ ಪಂಚಾಯಿತಿಯ ಆದಾಯ ಮೂಲವಾಗಿರುವ ಮಾರುಕಟ್ಟೆಗೆ ನ್ಯಾಯ ಒದಗಿಸಬೇಕಾದ ಸ್ಥಳೀಯ ಗ್ರಾ.ಪಂ ಮಾತ್ರ, ಮಾರುಕಟ್ಟೆಯ ದುರಸ್ತಿಗೆ ಮುಂದಾಗದೆ ಕಾಲಹರಣ ಮಾಡುತ್ತಿರುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಮಾರುಕಟ್ಟೆಯ ಮಾರಾಟ ಮಳಿಗೆಗಳ ಗೋಡೆಗಳು ಕುಸಿಯುವ ಹಂತಕ್ಕೆ ತಲುಪಿವೆ. ಅಲ್ಲದೆ ಮಳಿಗೆಗಳ ಮೇಲ್ಛಾವಣಿಯ ತಗಡು ಶೀಟ್‌ಗಳು ತುಕ್ಕು ಹಿಡಿದು ಜಾರುತ್ತಿದ್ದು ಸ್ವತಃ ವ್ಯಾಪಾರಸ್ಥರೇ ತಮ್ಮ ಹಣದಿಂದ ಸಣ್ಣ ಪುಟ್ಟ ಕೆಲಸ ಮಾಡಿಸಿದ್ದಾರೆ. ಇನ್ನೂ ಕೆಲವರು ಮೇಲ್ಛಾವಣಿಯ ಶೀಟ್ ಮೇಲೆ ಭಾರವಾದ ವಸ್ತುಗಳನ್ನು ಇಟ್ಟು ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದಾರೆ.
೯ ಲಕ್ಷಕ್ಕೆ ಹರಾಜಾದ ಮಾರುಕಟ್ಟೆ ಸುಂಕ ವಸೂಲಾತಿ
ಸಿದ್ದಾಪುರ ಮಾರುಕಟ್ಟೆಯ ಭಾನುವಾರದ ಸಂತೆ ದಿನದಂದು ಮಾರುಕಟ್ಟೆ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಈ ಬಾರಿ ಸುಂಕ ವಸೂಲಾತಿ ಹರಾಜು ಪ್ರಕ್ರಿಯೆ ಬರೋಬ್ಬರಿ ೯ ಲಕ್ಷಕ್ಕೆ ಸ್ಥಳೀಯರು ಪಡೆದುಕೊಂಡಿದ್ದಾರೆ. ಪ್ರತಿ ಭಾನುವಾರ ಮಾರುಕಟ್ಟೆಯಲ್ಲಿ ನೂರಕ್ಕೂ ಅಧಿಕ ವ್ಯಾಪಾರಸ್ಥರಿಂದ ನಿಗದಿತ ಸುಂಕ ವಸೂಲಿ ಮಾಡಲಾಗುತ್ತಿದೆ. ಆದರೆ ವ್ಯಾಪಾರಸ್ಥರಿಗೆ ಕನಿಷ್ಟ ಸೌಲಭ್ಯ ಒದಗಿಸದೆ ಕೇವಲ ಸುಂಕ ವಸೂಲು ಮಾಡುತ್ತಿರುವ ಕ್ರಮದ ವಿರುದ್ಧ ವ್ಯಾಪಾರಸ್ಥರು ಕಿಡಿಕಾರಿದ್ದಾರೆ. ಪ್ರತಿ ವರ್ಷ ಮಾರುಕಟ್ಟೆಯಿಂದ ಲಕ್ಷ ರೂಪಾಯಿ ಆದಾಯ ಬರುತ್ತಿದ್ದರೂ ಕೂಡ ಮಾರುಕಟ್ಟೆ ದುರಸ್ತಿಗೆ ಮುಂದಾಗದೆ ಇರುವುದು ವಿಪರ್ಯಾಸ.
ಕೆಸರಿನಲ್ಲೇ ತರಕಾರಿ ಮಾರಾಟ
ಗೋಡೆಗಳೇ ಮೂತ್ರಾಲಯ!
ಮಳೆಗಾಲದ ಸಂದರ್ಭ ಮಾರುಕಟ್ಟೆಯ ಒಳಭಾಗದ ರಸ್ತೆಯು ಸಂಪೂರ್ಣ ಕೆಸರಿನಿಂದ ಕೂಡಿರುತ್ತದೆ. ಇದೇ ಕೆಸರಿನ ಮಧ್ಯೆ ತರಕಾರಿ, ಇನ್ನಿತರ ಸಾಮಗ್ರಿಗಳನ್ನು ವ್ಯಾಪಾರಸ್ಥರು ರಾಶಿ ಹಾಕಿ ಮಾರಾಟ ಮಾಡುತ್ತಾರೆ.
ಅಲ್ಲದೆ ಮಾರುಕಟ್ಟೆಯ ಒಳಭಾಗದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದರಿಂದ ಪುರುಷರು ಮಾರುಕಟ್ಟೆಯ ಗೋಡೆಗಳನ್ನೇ ಮೂತ್ರಾಲಯ ಮಾಡಿಕೊಂಡಿದ್ದಾರೆ. ಮಹಿಳಾ ವ್ಯಾಪಾರಸ್ಥರು ಶೌಚಾಲಯಕ್ಕಾಗಿ ಬಸ್ ನಿಲ್ದಾಣಕ್ಕೆ ಅಥವಾ ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.
ಸಿದ್ದಾಪುರ ಮಾರುಕಟ್ಟೆಯಲ್ಲಿ ಭಾನುವಾರದಂದು ಮಾತ್ರ ಸಂತೆ ವ್ಯಾಪಾರ ಇರುತ್ತದೆ. ಉಳಿದಂತೆ ವಾರದ ಆರು ದಿನಗಳು ತ್ಯಾಜ್ಯ, ಕಸ ವಿಲೇವಾರಿಯ ‘ಹಾಟ್‌ಸ್ಪಾಟ್’ ಆಗಿದೆ. ಸ್ಥಳೀಯ ಗ್ರಾ.ಪಂ. ನಿರ್ಲಕ್ಷ್ಯಕ್ಕೆ ಪಾಳು ಬಿದ್ದಿರುವ ಸಂತೆ ಮಾರುಕಟ್ಟೆ ಸಾಂಕ್ರಾಮಿಕ ರೋಗ ಹರಡುವಿಕೆಯ ಕೇಂದ್ರ ವಾಗುತ್ತಿದೆ. - ಎ.ಎನ್. ವಾಸು