ನಾಪೋಕ್ಲು, ಜು. ೨೬: ಬೊಳಿಬಾಣೆ, ಚೆರಿಯಪರಂಬು ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಬೋಸರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆರಿಯಪರಂಬು ವ್ಯಾಪ್ತಿಯಲ್ಲಿ ವಾಸವಾಗಿರುವ ೭೦ಕ್ಕೂ ಅಧಿಕ ಕುಟುಂಬಗಳು ಪ್ರವಾಹದಿಂದಾಗಿ ಸಂಕಷ್ಟಕೀಡಾಗಿದ್ದು ಪ್ರವಾಹ ಬಾರದಂತೆ ರಸ್ತೆ ಎತ್ತರಿಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಪಡಿಸಲಾಗುವುದು. ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಯಿಂದ ಸೂಕ್ತ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಹಾಜರಿದ್ದ ಗ್ರಾಮಸ್ಥರು ಉಸ್ತುವಾರಿ ಸಚಿವರಿಗೆ ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟರು. ಉತ್ತಮ ರಸ್ತೆ ಸೌಕರ್ಯ ಇಲ್ಲ. ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಸುತ್ತಿ ಬಳಸಿ ತೆರಳಬೇಕಾಗಿದೆ. ಸೂಕ್ತ ಪರಿಹಾರ ಕಲ್ಪಿಸಿ, ಹಿಂದಿನ ಯಾವುದೇ ಸರ್ಕಾರ ತಮ್ಮ ಬೇಡಿಕೆಗಳನ್ನು ಪರಿಗಣಿಸಿಲ್ಲ ಎಂದು ಪರವಂಡ ಸಿರಜ್, ಅಹಮದ್ ಪಿ.ಎ, ಮಿರ್ಷದ್ ಪಿ.ಎ. ಇನ್ನಿತರರು ಗಮನ ಸೆಳೆದರು.

ಬಳಿಕ ಸ್ಥಳೀಯ ಪಟ್ಟಣದ ಬೇತು ಸಂಪರ್ಕ ರಸ್ತೆಯ ಸಮೀಪದಲ್ಲಿ ತಡೆಗೋಡೆ ಕುಸಿದು ನಾಲ್ಕು ಅಂಗಡಿ ಮಳಿಗೆಗಳು ಹಾನಿಗೀಡಾದ ಅಜ್ಜೇಟಿರ ಬೋಪಣ್ಣ ಎಂಬವರ ಅಂಗಡಿ ಮಳಿಗೆಯನ್ನು ಸಚಿವರು ವೀಕ್ಷಿಸಿದರು.

ನೆರೆಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದ ಸಚಿವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಚೆರಿಯಪರಂಬುವಿನಲ್ಲಿ ಎರಡು ಕಡೆಗಳಲ್ಲಿ ರಸ್ತೆಗಳನ್ನು ಎತ್ತರಿಸುವ ಅಗತ್ಯವಿದೆ. ರಸ್ತೆಗೆ ಸುರಕ್ಷತೆ ನೀಡುವ ಅಗತ್ಯವಿದ್ದು, ತಕ್ಷಣ ಈ ಬಗ್ಗೆ ಕ್ರಿಯಾಯೋಜನೆ ರೂಪಿಸುವಂತೆ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗುತ್ತಿದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದರೆ, ಶಾಸಕರೊಂದಿಗೆ ಮಾತನಾಡಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬಹುದು. ಹೆಚ್ಚಿನ ಹಣ ಬೇಕಾದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.

ಈ ಸಂದರ್ಭ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಉಪವಿಭಾಗ ಅಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಕಿರಣ್ ಗೌರಯ್ಯ, ಇ.ಒ. ಶೇಖರ್, ವೃತ್ತ ನಿರೀಕ್ಷಕ ಅನುಪ್ ಮಾದಪ್ಪ. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸತೀಶ್, ಕಂದಾಯ ಪರಿವೀಕ್ಷಕ ರವಿಕುಮಾರ್, ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕಾಂಗ್ರೆಸ್ ವಲಯ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬೊಳ್ಳಂಡ ಶರಿ ಉತ್ತಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಇನ್ನಿತರರು ಇದ್ದರು.