ಸೋಮವಾರಪೇಟೆ, ಜು. ೨೬: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾಫಿ, ಕಾಳುಮೆಣಸು ಬೆಳೆಗೆ ದೊಡ್ಡಮಟ್ಟದ ಹಾನಿಯಾಗಿದೆ. ತಕ್ಷಣ ಅಧಿಕಾರಿಗಳು ಮಳೆಹಾನಿ ಸಮೀಕ್ಷೆ ಮಾಡಬೇಕೆಂದು ರಾಜ್ಯ ರೈತ ಸಂಘ ಆಗ್ರಹಿಸಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಅವರು, ದಿನಂಪ್ರತಿ ೧೦ ರಿಂದ ೧೫ ಇಂಚು ಮಳೆ ಸುರಿಯುತ್ತಿದೆ. ಕಾಳುಮೆಣಸು, ಕಾಫಿ ಉದುರಿ ಮಣ್ಣು ಸೇರಿವೆ. ತೋಟದಲ್ಲಿ ಕೊಳೆರೋಗ ಪ್ರಾರಂಭವಾಗಿದೆ. ಭತ್ತದ ಸಸಿ ಕೊಳೆಯಲು ಪ್ರಾರಂಭಿಸಿದೆ. ಮಳೆ ನಿಂತು ಬಿಸಿಲು ಪ್ರಾರಂಭವಾದ ಮೇಲೆ ಸಮೀಕ್ಷೆ ಮಾಡಿದರೆ ಪ್ರಯೋಜನವಿಲ್ಲ. ಈ ಹಿನ್ನೆಲೆ ತಕ್ಷಣ ಸಮೀಕ್ಷೆ ನಡೆಸಬೇಕು. ಸೂಕ್ತ ಮಳೆಹಾನಿ ಪರಿಹಾರ ರೈತರಿಗೆ ಸಿಗುವಂತಾಗಬೇಕು ಎಂದರು.
ಕಂದಾಯ, ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಜಂಟಿ ಸರ್ವೇ ಪ್ರಾರಂಭಿಸಲು ಸರ್ಕಾರ ಅದೇಶ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕಿನ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ. ೧೦ ದಿನಗಳಿಂದ ವಿದ್ಯುತ್ ಇಲ್ಲದಂತಾಗಿದೆ. ಮೊಬೈಲ್, ಲ್ಯಾಪ್ಟಾಪ್ ಚಾರ್ಜ್ ಆಗದೆ ‘ವರ್ಕ್ ಫ್ರಮ್ ಹೋಂ’ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊರ ಜಿಲ್ಲೆಗಳಿಂದ ಸಿಬ್ಬಂದಿಗಳನ್ನು ಕರೆಸಿಕೊಂಡು ಒಂದೆರಡು ದಿನಗಳಲ್ಲಿ ವಿದ್ಯುತ್ ಸಂಪರ್ಕ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿವರ್ಷ ಅಕಾಲಿಕ ಮಳೆಯಿಂದ ಫಸಲು ಹಾನಿಯಿಂದ ನಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಮತ್ತು ವಿದ್ಯುತ್ ಬಾಕಿ ಬಿಲ್ ಮನ್ನಾ ಬೇಡಿಕೆಯಿಟ್ಟು ಹೋರಾಟ ಮಾಡುತ್ತಿದ್ದೇವೆ. ಆದರೆ ಅಧಿವೇಶನದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಚಿಕ್ಕಮಗಳೂರು, ಹಾಸನ ಜಿಲ್ಲೆಯ ಶಾಸಕರನ್ನು ಸೇರಿಸಿಕೊಂಡು ಸರ್ಕಾರದ ಮೇಲೆ ಒತ್ತಡ ತಂದು, ಉಚಿತ ವಿದ್ಯುತ್ಗೆ ಕಾನೂನಾತ್ಮಕ ಮಂಜೂರಾತಿ ಪಡೆಯಬೇಕು. ವೀರಾಜಪೇಟೆ ಶಾಸಕರು ಉಚಿತ ವಿದ್ಯುತ್ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಈ ಅಧಿವೇಶನದಲ್ಲೇ ಉಚಿತ ವಿದ್ಯುತ್ ಮತ್ತು ವಿದ್ಯುತ್ ಬಿಲ್ ಬಾಕಿ ಮನ್ನಾವಾಗಬೇಕು. ತಪ್ಪಿದಲ್ಲಿ ರೈತ ಸಂಘ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಕಾಫಿಯು ಕೃಷಿ ಬೆಳೆಯಾಗಿ ಪರಿವರ್ತನೆಯಾದಾಗ ಮಾತ್ರ ಕಾಫಿ ಬೆಳೆಯುವ ರೈತರು ಸಂಕಷ್ಟದಿAದ ಪಾರಾಗಬಹುದು. ವಾಣಿಜ್ಯ ಬೆಳೆ ಎಂಬುದು ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ತೆರಿಗೆ ಸಂಗ್ರಹಿಸಲು ಸಹಕಾರಿಯಾಗಿದೆ.
ಸೌಲಭ್ಯ ಕೊಡದೆ ಕಾಫಿ ತೋಟಗಳು ನಾಶವಾದರೆ, ಸರ್ಕಾರಕ್ಕೆ ತೆರಿಗೆಯೇ ಇರುವುದಿಲ್ಲ ಎಂದು ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಹೇಳಿದರು. ಕಾಫಿ ಬೆಳೆಗಾರರು ಹೋರಾಟ ಮಾಡದ ಕಾರಣ, ಈಗ ಎಲ್ಲವನ್ನು ಕಳೆದುಕೊಳ್ಳುವಂತ ದುಸ್ಥಿತಿಗೆ ಬಂದಿದ್ದೇವೆ. ಸಣ್ಣ ಕಾಫಿ ಬೆಳೆಗಾರರು ದುರ್ಬಲರು ಎಂದು ಸರ್ಕಾರ ಭಾವಿಸಿರುವುದರಿಂದ ಅನಾಥರಾಗಬೇಕಾಗಿದೆ ಎಂದರು.
ಕಾಜೂರು ಅರಣ್ಯ ವ್ಯಾಪ್ತಿಯಲ್ಲಿ ಎಲಿಫೆಂಟ್ ಕಾರಿಡಾರ್ ಮುಚ್ಚಿ ರೈಲ್ವೇ ಬ್ಯಾರಿಕೇಡ್ ಮಾಡಿರುವುದರಿಂದ ಕಾಡಾನೆಗಳು ಗ್ರಾಮಗಳಿಗೆ ನುಗ್ಗುತ್ತಿವೆ. ಮೂರು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಒಂದು ಕಿ.ಮೀ. ಕಾಮಗಾರಿ ಬಾಕಿಯಿದೆ. ಆ ಭಾಗದಲ್ಲಿ ಕಾಡಾನೆ ದಾಟಿ ಕೃಷಿ ಫಸಲನ್ನು ಹಾಳು ಮಾಡುತ್ತಿವೆ ಎಂದು ಸಂಘದ ಸಂಚಾಲಕ ಲಕ್ಷö್ಮಣ್ ದೂರಿದರು.
ಕಂಪೆನಿ ಕಾಫಿ ತೋಟವೊಂದರಲ್ಲಿ ಕಾಡಾನೆ ಕಾರಿಡಾರ್ ಇದೆ. ಅಲ್ಲಿರುವ ಕೆರೆಗಳಲ್ಲಿ ನೀರು ಕುಡಿದು ಕಾಡಾನೆಗಳು ವಾಪಾಸ್ಸು ಅರಣ್ಯಕ್ಕೆ ತೆರಳುತ್ತಿದ್ದವು. ಈಗ ಅರಣ್ಯ ಇಲಾಖೆಯವರು ದಾರಿಯನ್ನು ಮುಚ್ಚಿದ್ದಾರೆ. ಈಗ ಕೃಷಿಕರಿಗೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯೂ ಮೌನ ವಹಿಸಿದೆ ಎಂದು ದೂರಿದರು.ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎ.ಆರ್. ಕುಶಾಲಪ್ಪ, ಮಚ್ಚಂಡ ಅಶೋಕ್ ಇದ್ದರು.