ಸಿದ್ದಾಪುರ, ಜು. ೨೬: ನಡುರಾತ್ರಿಯಲ್ಲಿ ಜನವಸತಿ ಪ್ರದೇಶಕ್ಕೆ ಲಗ್ಗೆ ಇಡುತ್ತಿರವ ಕಾಡಾನೆಯೊಂದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಕರಡಿಗೋಡು ಗ್ರಾಮದಲ್ಲಿ ಮನೆಯ ಅಂಗಳಕ್ಕೆ ಲಗ್ಗೆಯಿಡುತ್ತಿರುವ ಕಾಡಾನೆ ಬಾಳೆ, ತೆಂಗು ಅಡಿಕೆ, ಕಬ್ಬು ಫಸಲನ್ನು ನಾಶಪಡಿಸುತ್ತಿದ್ದು, ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.

ದಿನಂಪ್ರತಿ ಬರುತ್ತಿರುವ ಕಾಡಾನೆಯು ಮುಖ್ಯ ರಸ್ತೆಯಲ್ಲೆ ರಾಜಾರೋಷವಾಗಿ ಸಂಚರಿಸುತ್ತಿದ್ದು ರಾತ್ರಿವೇಳೆ ವಾಹನ ಸವಾರರು ಬಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕುಕ್ಕುನೂರು ಗಾಯತ್ರಿ ಹಾಗೂ ಸೋಮಣ್ಣನವರ ತೋಟ್ಟಕ್ಕೆ ಲಗ್ಗೆ ಇಟ್ಟು ಕೃಷಿಫಸಲನ್ನು ನಾಶಪಡಿಸಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕ ಬೀದಿ ದೀಪ ನಿರ್ವಹಣೆ ಇಲ್ಲದೇ ಇರುವುದರಿಂದ ಕಾಡಾನೆಯು ಪಟ್ಟಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಾಫಿ ತೋಟದಲ್ಲಿನ ಕಾರ್ಮಿಕರ ಮಕ್ಕಳು ಶಾಲಾ ಕಾಲೇಜುಗಳಿಗೆ ಭಯದಲ್ಲೇ ತೆರಳಬೇಕಾಗಿದೆ.

ಕಾಡಾನೆಗಳು ಕೃಷಿ ಫಸಲುಗಳನ್ನು ನಾಶಪಡಿಸಿದರೂ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುತ್ತಿಲ್ಲವೆಂದು ಬೆಳೆಗಾರರು ಆರೋಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಪಟ್ಟಣಕ್ಕೆ ಲಗ್ಗೆ ಇಡುತ್ತಿದ್ದು ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ವನ್ಯಜೀವಿಗಳ ಉಪಟಳವನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.