ಮಡಿಕೇರಿ, ಜು. ೨೭: ಸಿದ್ದಾಪುರ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಮಳೆಯ ನಡುವೆಯೂ ಹರಸಾಹಸ ಪಟ್ಟು ಬೀಟಿಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರೂ ಅರಣ್ಯಕ್ಕೆ ತೆರಳಲು ಆನೆಗಳು ಹಿಂದೇಟು ಹಾಕಿದವು.

ಸಣ್ಣ ಮರಿಯಾನೆಯೊಂದಿಗೆ ೯ ಕಾಡಾನೆಗಳ ಹಿಂಡು ಗುಹ್ಯ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿತ್ತು.

ಕೃಷಿ ಫಸಲುಗಳನ್ನು ತುಳಿದು ತಿಂದು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು ತೋಟಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಾಡಾನೆಗಳನ್ನು ಓಡಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ ಹಿನ್ನೆಲೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕಳ್ಳಿರ ಎಂ ದೇವಯ್ಯ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ಮಳೆಯ ನಡುವೆಯೂ ಆನೆ ಓಡಿಸುವ ಕಾರ್ಯಾಚರಣೆಗಿಳಿದರು.

ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನುಸುಳಿ ಬೇರ್ಪಟ್ಟು ಆನೆಗಳು ಕಾಣೆಯಾಗಿದ್ದವು.

ಬೇರ್ಪಟ್ಟ ಆನೆಗಳನ್ನ ಒಂದುಗೂಡಿಸಿ ಸಿದ್ದಾಪುರ ವೀರಾಜಪೇಟೆಯ ಇಂಜಲಗೆರೆ ಮುಖ್ಯರಸ್ತೆವರೆಗೂ ಬಂದ ಕಾಡಾನೆಗಳು ವಾಹನಗಳ ದಟ್ಟಣೆಯಿಂದ ರಸ್ತೆ ದಾಟಲು ಹಿಂದೇಟು ಹಾಕಿದವು.

ನಂತರ ಸಿದ್ದಾಪುರ ವೀರಾಜಪೇಟೆ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೆಲಕಾಲ ತಡೆಹಿಡಿದಿದ್ದರು.

ಮತ್ತೆ ಗಾಬರಿಗೊಂಡಿದ್ದ ಕಾಡಾನೆಗಳನ್ನು ಕೊನೆಗೂ ರಸ್ತೆ ದಾಟಿಸಿ ಬೀಟಿಕಾಡು ತೋಟದ ಭಾಗಕ್ಕೆ ಅಟ್ಟಲಾಯ್ತಾದರೂ ಅರಣ್ಯಕ್ಕೆ ತೆರಳಲು ಹಿಂದೇಟು ಹಾಕಿದವು ಸಂಜೆಯಾದ್ದರಿAದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕ ಅರುಣ, ವಾಹನ ಚಾಲಕ ಅಚ್ಚಯ್ಯ, ಆರ್‌ಆರ್‌ಟಿ ಸಿಬ್ಬಂದಿಗಳಾದ ವಿನೋದ್. ಮಂಜು, ವಿನೋತ್, ಮುರುಗ, ಸಚಿನ್ ಸೇರಿದಂತೆ ಮತ್ತಿತರರು ಇದ್ದರು.

- ಎಸ್.ಎಂ ಮುಬಾರಕ್