ಮಡಿಕೇರಿ: ಭಾಗಮಂಡಲ ಹೋಬಳಿ ಬೇಂಗೂರು ಚೇರಂಬಾಣೆ ವ್ಯಾಪ್ತಿಯ ದೋಣಿಕಾಡು ಎಂಬಲ್ಲಿ ಈಗಾಗಲೇ ಹೆಚ್ಚಿನ ಮಳೆಯಿಂದಾಗಿ ರಸ್ತೆಯು ಜಲಾವೃತವಾಗಿದೆ.

ಈ ಸಂಬAಧ ಸಾರ್ವಜನಿಕರ ಅನುಕೂಲಕ್ಕಾಗಿ ಅಗ್ನಿಶಾಮಕ ಠಾಣಾಧಿಕಾರಿ ಜಿಲ್ಲಾ ಅಗ್ನಿಶಾಮಕ ಘಟಕರವರ ಸಹಕಾರದೊಂದಿಗೆ ಫೈಬರ್ ದೋಣಿಯನ್ನು ಬೇಂಗೂರು ದೋಣಿ ಕಾಡಿಗೆ ಸಾಗಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಜೆ ಮುಂದುವರಿಕೆ

ಜಿಲ್ಲೆಯಾದ್ಯAತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಹೊರತುಪಡಿಸಿ, ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ತಾ. ೨೬ ರಂದು (ಇಂದು) ರಜೆ ಮುಂದುವರಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆ ತಾ. ೨೬ ರಂದು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ.

ಮಡಿಕೇರಿ, ಜು. ೨೫ : ಕಳೆದ ನಾಲ್ಕು ದಿನಗಳಿಂದ ಬಿರುಸು ತೋರುತ್ತಿರುವ ಪುಷ್ಯ ಮಳೆಯ ಆರ್ಭಟ ಮುಂದುವರೆದಿದ್ದು, ಜಿಲ್ಲೆ ಮಳೆ-ಗಾಳಿಗೆ ನಲುಗಿ ಹೋಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ತೊರೆ., ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳು ಸೇರಿದಂತೆ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆ, ಸೇತುವೆ ಸೇರಿದಂತೆ ತೋಟ, ಗದ್ದೆಗಳು ಜಲಾವೃತಗೊಂಡು ಸಂಪರ್ಕಗಳು ಕಡಿತಗೊಂಡು ಕೆಲವೊಂದು ಪ್ರದೇಶಗಳು ದ್ವೀಪದಂತೆ ಮಾರ್ಪಾಡಾಗಿವೆ. ತಲಕಾವೇರಿ-

ಕರಡಿಗೋಡಿನಲ್ಲಿ ೧೫ ಮನೆಗಳು ಜಲಾವೃತ

ಸಿದ್ದಾಪುರ : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಸಿದ್ದಾಪುರದ ಕರಡಿಗೋಡು ಗ್ರಾಮದ ನದಿ ತೀರದ ತಗ್ಗು ಪ್ರದೇಶದ ೧೫ ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ ತಗ್ಗು ಪ್ರದೇಶದ ನಿವಾಸಿಗಳನ್ನು ಪರಿಹಾರ ಕೇಂದ್ರಗಳಿಗೆ ತೆರಳುವಂತೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಹಾಗೂ ಕಂದಾಯ ಇಲಾಖಾಧಿಕಾರಿಗಳು ಮನವಿ ಮಾಡಿದರು. ಆದರೆ ನದಿ ತೀರದ ನಿವಾಸಿಗಳು ಪರಿಹಾರ ಕೇಂದ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸಿದ್ದಾಪುರದಿಂದ ಕರಡಿಗೋಡುವಿಗೆ ತೆರಳುವ ರಸ್ತೆಯಲ್ಲಿ ನೀರು ಆವೃತಗೊಂಡಿದೆ. ಚಿಕ್ಕನಳ್ಳಿ ಕಿರುಸೇತುವೆ ಮುಳುಗಡೆಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಹ್ಯ ಗೂಡುಗದ್ದೆ ವ್ಯಾಪ್ತಿಯಲ್ಲಿ ನದಿನೀರು ಮನೆಗಳ ಸಮೀಪಕ್ಕೆ ಬಂದಿದ್ದು ಗುಹ್ಯ ಶ್ರೀ ಅಗಸ್ತೆö್ಯÃಶ್ವರ ದೇವಸ್ಥಾನದ ಬಳಿ ಸಂಪೂರ್ಣ ಜಲಾವೃತಗೊಂಡಿದ್ದು ಕಕ್ಕಟಕಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಿದ್ದಾಪುರದ ಸೇತುವೆ ಬಳಿಯ ಗದ್ದೆಗಳು ಜಲಾವೃತಗೊಂಡಿದೆ. ಇದೇ ರೀತಿ ಮಳೆ ಮುಂದುವರಿದರೆ ಕರಡಿಗೋಡುವಿನಲ್ಲಿ ಪ್ರವಾಹಕ್ಕೆ ತುತ್ತಾಗಿ ಹಲವಾರು ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಅಮ್ಮತ್ತಿ ಹೋಬಳಿಯ ಕೊಂಡAಗೇರಿ ಹಾಲುಗುಂದ ಭಾಗದಲ್ಲಿ ಕೂಡ ಕೆಲವು ರಸ್ತೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿವೆ.

(ಮೊದಲ ಪುಟದಿಂದ) ಬಿಡುವು ನೀಡದೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಇವೆ. ಮಳೆರಾಯನ ಅಬ್ಬರದಿಂದ ಜಲಪಾತಗಳು ಭೋರ್ಗರೆಯುತ್ತಿವೆ.

ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳು ಉಕ್ಕಿಹರಿಯುತ್ತಿದ್ದು, ನದಿಪಾತ್ರದ ನಿವಾಸಿಗಳು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಹಾನಿಗೊಳಗಾದ ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾಯಕದಲ್ಲಿ ಸೆಸ್ಕ್ ನಿರತವಾಗಿದ್ದು, ಮಳೆಯನ್ನು ಲೆಕ್ಕಿಸದೆ ಬೆಳಕು ನೀಡುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್. ಸೇರಿದಂತೆ ವಿವಿಧ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ. ಮರಗಳು ಬಿದ್ದು ಸಂಚಾರಕ್ಕೆ ತೊಡಕಾದ ಪ್ರಕರಣಗಳನ್ನು ಅರಣ್ಯ ಇಲಾಖೆ ಸ್ಥಳೀಯರ ಸಹಕಾರದೊಂದಿಗೆ ಸರಿಪಡಿಸಲು ಕ್ರಮವಹಿಸಿದೆ.

ಭಾರೀ ಮಳೆಯಾಗುತ್ತಿರುವ ಭಾಗಮಂಡಲ-ತಲಕಾವೇರಿಯಲ್ಲಿ ಸೂಕ್ತ ನಿಗಾವಹಿಸಲಾಗಿದೆ. ಭಾಗಮಂಡಲ ರಸ್ತೆ ಜಲಾವೃತಗೊಂಡಿರುವುದರಿAದ ಪರ್ಯಾಯವಾಗಿ ಮೇಲ್ಸೇತುವೆ ಮೂಲಕ ಜನ ಸಂಚಾರ ಮಾಡುತ್ತಿದ್ದಾರೆ. ಕಾವೇರಿ, ದಕ್ಷಿಣ ಕೊಡಗಿನ ಲಕ್ಷö್ಮಣ ತೀರ್ಥ ನದಿ, ಬರಪೊಳೆ ಸೇರಿದಂತೆ ಇನ್ನಿತರ ಪ್ರಮುಖ ಜಲಮೂಲಗಳು ಮೈದುಂಬಿ ಹರಿಯುತ್ತಿದೆ.

ಜಿಲ್ಲೆಯಲ್ಲಿ ೪.೧೦ ಇಂಚು ಸರಾಸರಿ ಮಳೆ

ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಯಲ್ಲಿ ಜಿಲ್ಲೆಯಲ್ಲಿ ೪.೧೦ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ೦.೧೫ ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫.೨೬ ಇಂಚು, ವೀರಾಜಪೇಟೆ ತಾಲೂಕಿನಲ್ಲಿ ೫.೨೬ ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ ೩.೪೬ ಇಂಚು ಮಳೆಯಾಗಿದೆ.

ಮಡಿಕೇರಿ ಕಸಬಾ ವ್ಯಾಪ್ತಿಯಲ್ಲಿ ೩.೭೧ ಇಂಚು, ನಾಪೋಕ್ಲು ೩.೬೪ ಇಂಚು, ಸಂಪಾಜೆ ೫.೯೬, ವೀರಾಜಪೇಟೆ ೪.೧೭, ಹುದಿಕೇರಿ ೩.೫೭, ಶ್ರೀಮಂಗಲ ೩.೭೯, ಪೊನ್ನಂಪೇಟೆ ೩.೫೫, ಅಮ್ಮತ್ತಿ ೪.೬೨, ಸೋಮವಾರಪೇಟೆ ೩.೮೫, ಶನಿವಾರಸಂತೆ ೨.೭೨, ಶಾಂತಳ್ಳಿ ೮.೩೪ ಇಂಚು, ಕೊಡ್ಲಿಪೇಟೆ ೧.೭೭, ಕುಶಾಲನಗರ ೧.೭೩, ಸುಂಟಿಕೊಪ್ಪ ೨.೩೬ ಇಂಚು ಮಳೆ ದಾಖಲಾಗಿದೆ. ಮಡಿಕೇರಿ: ಮಂಗಳಾದೇವಿ ನಗರದಲ್ಲಿ ರಾಘವನ್ ಪಿಳ್ಳೆöÊ ಕೆ. ಎಂಬವರ ಮನೆ ಮೇಲೆ ಬರೆ ಕುಸಿದು ಮನೆಯ ಗೋಡೆಗಳು ಭಾಗಶಃ ಜಖಂಗೊAಡಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವ ವರದಿಯಾಗಿದ್ದು, ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಪರಿಹಾರದ ಭರವಸೆ ನೀಡಿದ್ದಾರೆ.

ವೀರಾಜಪೇಟೆ: ವೀರಾಜಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಧಾರಕಾರವಾಗಿ ಮಳೆ ಸುರಿಯಿತು.

ಸೋಮವಾರ ರಾತ್ರಿಯಿಡಿ ನಿರಂತರವಾಗಿ ಸುರಿದ ಮಳೆಯು, ಮಂಗಳವಾರವೂ ಕೂಡ ಮುಂದುವರೆಯಿತು. ಮಂಗಳವಾರ ಬೆಳಿಗ್ಗೆಯಿಂದ ಬಿಡುವು ನೀಡುತ್ತಾ ಬಿರುಸಿನಿಂದ ಮಳೆ ಸುರಿಯಿತು. ಧಾರಕಾರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ಎಂದಿನ ಜನದಟ್ಟಣೆ ಕಂಡು ಬರಲಿಲ್ಲ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಆಗಮಿಸಿದ್ದವರು ಮಳೆಯಿಂದಾಗಿ ಪರದಾಡುವಂತಾಯಿತು. ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು.

ಸಮೀಪದ ಬೇತ್ರಿಯಲ್ಲಿ ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಬೇತ್ರಿ ಸೇತುವೆಯ ಮೇಲ್ಮಟ್ಟ ತಲುಪಲು ಇನ್ನು ಕೆಲವು ಅಡಿಗಳ ಅಂತರವಿದ್ದು, ಒಂದೆರಡು ದಿನಗಳು ಇದೇ ರೀತಿ ನಿರಂತರ ಮಳೆಯಾದರೆ ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದೆ. ಸಮೀಪದ ಕದನೂರು, ಹೆಮ್ಮಾಡುವಿನ ಉಪನದಿಗಳು ಕೂಡ ಉಕ್ಕಿ ಹರಿಯುತ್ತಿವೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕದನೂರು, ಅರಮೇರಿ ಸೇರಿದಂತೆ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದವು. ಸಮೀಪದ ಗ್ರಾಮಗಳಾದ ಕದನೂರು, ಅರಮೇರಿ, ಕಾಕೋಟುಪರಂಬು, ಚೆಂಬೆಬೆಳ್ಳೂರು, ಮಾಕುಟ್ಟ, ಹೆಗ್ಗಳ, ಆರ್ಜಿ, ಬಿಟ್ಟಂಗಾಲ, ಅಮ್ಮತ್ತಿ, ಒಂಟಿಯAಗಡಿ, ಬಿಳುಗುಂದ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದೆ.

ಕೂಡಿಗೆ: ನಂಜರಾಯಪಟ್ಟಣ ಗುಳಿಗಾ ಗ್ರಾಮ ನಿವಾಸಿ ದೇಚಮ್ಮ ದೇವಯ್ಯ ಅವರ ಮನೆಯ ಗೋಡೆಗಳು ಕುಸಿತಗೊಂಡು ಭಾರೀ ಹಾನಿಯಾಗಿದೆ.

ಸ್ಥಳಕ್ಕೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ಸದಸ್ಯರಾದ ಮಾವಾಜಿ ರಕ್ಷಿತ್, ಕಂದಾಯ ಇಲಾಖೆಯ ಪರಿವೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ಸಚಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವ ಬಗ್ಗೆ ಭರವಸೆ ನೀಡಿದರು.

(ಮೊದಲ ಪುಟದಿಂದ)

ಪರಿಹಾರ ಕೇಂದ್ರ

ಪ್ರವಾಹ ಪೀಡಿತ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ನಿವಾಸಿಗಳಿಗೆ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಹಾಗೂ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಕುಟುಂಬಗಳಿಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನದಿ ತೀರದ ನಿವಾಸಿಗಳಿಗೆ ಅನಾರೋಗ್ಯ ಕಂಡುಬAದಲ್ಲಿ ಅವರ ಚಿಕಿತ್ಸೆಗಾಗಿ ವೈದ್ಯರುಗಳೊಂದಿಗೆ ಚರ್ಚಿಸಿ ಸಿಬ್ಬಂದಿಗಳನ್ನು ನೇಮಿಸಲಾಗುವುದೆಂದರು. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಕೊಂಡAಗೇರಿ ಗ್ರಾಮಗಳಿಗೆ ತಹಶೀಲ್ದಾರ್ ರಾಮಚಂದ್ರ ಹಾಗೂ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ , ಗ್ರಾಮ ಆಡಳಿತಾಧಿಕಾರಿ ಓಮಪ್ಪ ಬಣಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲೇ ಮೊಕ್ಕಾಂ ಹೂಡಿದರು.

ಪ್ರವಾಹ ಭೀತಿ

ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಇದೀಗ ಪ್ರವಾಹದ ಭೀತಿ ಎದುರಾಗಿದೆ. ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು ರಸ್ತೆ ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ನದಿ ನೀರಿನ ಏರಿಕೆಯು ಕುಂಬಾರಗುAಡಿ ಬೆಟ್ಟದಕಾಡು ಭಾಗದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬೆಟ್ಟದಕಾಡುವಿನಲ್ಲಿ ೫ ಮನೆಗಳು, ಕಾರೆಬಾಣೆ ೨ ಮನೆಗಳು ಜಲಾವೃತಗೊಂಡಿದೆ. ಇವರುಗಳನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಕುಶಾಲನಗರ ವ್ಯಾಪ್ತಿಯ ಕಂದಾಯಾಧಿಕಾರಿಗಳು ಹಾಗೂ ಗ್ರಾಮ ಆಡಳಿತಾಧಿಕಾರಿ ಸಚಿನ್ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ವೀರಾಜಪೇಟೆ: ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಗ್ರಾಮದ ಕೊರ್ತಿಕಾಡು ಬೆಟ್ಟ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಬೆಟ್ಟ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಾದ ಲಿಂಗಯ್ಯ ಮತ್ತು ರಾಜಪ್ಪ ಎಂಬ ಎರಡು ಕುಟುಂಬದವರನ್ನು ಸಂಬAಧಿಕರ ಮನೆಗೆ ತೆರಳುವಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಉಳಿದವರಿಗೆ ತೋಮರ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭ ತೋರ ಗ್ರಾಮದ ವಾರ್ಡ್ ಸದಸ್ಯ ರಾಮಯ್ಯ ಹಾಜರಿದ್ದರು.

ಸೋಮವಾರಪೇಟೆ: ಹೋಬಳಿ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದಲ್ಲಿ ಅಶ್ವಿನಿ ರಾಜು, ಸುರೇಶ್ ಹಾಗೂ ಗಂಗು ಹರೀಶ್ ಅವರ ವಾಸದ ಮನೆ ಹಾನಿಯಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಎಸ್.ಎನ್ ನರಗುಂದ , ಪಿಡಿಒ, ಕಂದಾಯ ಪರಿವೀಕ್ಷಕರೊಂದಿಗೆ ಸ್ಥಳ ಪರಿಶೀಲಿಸಿದರು.

ಮುಳ್ಳೂರು: ಶನಿವಾರಸಂತೆ ವ್ಯಾಪ್ತಿಯಲ್ಲಿ ಮತ್ತೆ ಮುಂದುವರೆದ ಗಾಳಿ ಸಹಿತ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗುತ್ತಿದೆ.

ಸೋಮವಾರ ರಾತ್ರಿ ಭಾರೀ ಗಾಳಿ ಮಳೆಗೆ ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಗಾಂಧಿ ಕಾಲೋನಿಯ ನಿವಾಸಿಗಳಾದ ಅಯ್ಯಪ್ಪ ಮತ್ತು ವೇದಾವತಿ ಎಂಬವರುಗಳ ವಾಸದ ಮನೆ ಸಂಪೂರ್ಣವಾಗಿ ಕುಸಿದಿದೆ. ಇವರಿಬ್ಬರ ಮನೆ ಅಕ್ಕಪಕ್ಕದ ಮನೆಗಳಾಗಿದ್ದು ಸೋಮವಾರ ರಾತ್ರಿ ಒಂದೆ ಸಮಯದಲ್ಲಿ ಎರಡು ಮನೆಗಳು ಗಾಳಿ ಸಹಿತ ಮಳೆಗೆ ನೆಲಕ್ಕುರುಳಿದೆ. ದುರ್ಘಟನೆ ಸಂದರ್ಭ ಮನೆಮಂದಿ ಮನೆಯೊಳಗಿನಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ನಂತರ ಪಕ್ಕದ ಮನೆಗಳಲ್ಲಿ ಆಶ್ರಯ ಪಡೆದುಕೊಂಡರು. ಆಲೂರುಸಿದ್ದಾಪುರ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಮರದ ರೆಂಬೆಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದೆ. ಮಾಲಂಬಿ ಕಣಿವೆಬಸವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಯಂತ್ರಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿರುವುದರಿAದ ಕುಡಿಯುವ ನೀರು ಪೂರೈಕೆಗೆ ಅಡಚಣೆಯಾಗಿದೆ.

ಕೂಡಿಗೆ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿ ಮತ್ತು ಪ್ರಮುಖವಾದ ಕಾವೇರಿ ನದಿಯು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಗಳ ನೂರಾರು ಎಕರೆಗಳಷ್ಟು ಪ್ರದೇಶವು ನೀರಿನಿಂದ ಜಲಾವೃತಗೊಂಡಿದೆ.

ಹಾರಂಗಿ ಅಣೆಕಟ್ಟೆಗೆ ಕಳೆದ ವಾರದಿಂದ ಒಳ ಹರಿಯುವಿಕೆ ನೀರಿನ ಪ್ರಮಾಣದಲ್ಲಿ ಹೆಚ್ಚುವರಿಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಹೆಚ್ಚುವರಿ ನೀರನ್ನು ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ನದಿಗೆ ಹರಿಸಿತ್ತು.

ಹಾರಂಗಿ ನದಿಯಲ್ಲಿ ಹೆಚ್ಚು ನೀರು ಬರುತ್ತಿರುವುದರಿಂದಾಗಿ ಹಾರಂಗಿ ನದಿದಂಡೆಯ ಪ್ರದೇಶಗಳಾದ ಹುದುಗೂರು, ಮಲ್ಲೇನಹಳ್ಳಿ, ಮಾದಲಾಪುರ ಕಾಳಿದೇವನ ಹೊಸೂರು, ವ್ಯಾಪ್ತಿಯಲ್ಲಿ ಜಮೀನಿಗೆ ನೀರು ನುಗ್ಗಿ ಅಡಿಕೆ, ಶುಂಠಿ, ಜೋಳದ ಬೆಳೆಗಳು ನೀರಿನಿಂದ ಜಲಾವೃತಗೊಂಡಿವೆ.

ಹಾರAಗಿ ಮತ್ತು ಕಾವೇರಿ ಸಂಗಮವಾಗಿ ಮುಂದೆ ಹರಿಯುವ ಕಾವೇರಿ ನದಿ ತೀರದ ತಗ್ಗುಪ್ರದೇಶಗಳಾದ ಕೂಡಿಗೆ, ಹೆಬ್ಬಾಲೆಯ ಕರ್ಲಳ್ಳ, ತೊರೆನೂರು, ವ್ಯಾಪ್ತಿಯ ಶಿರಂಗಾಲ, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮವಾಗಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಸಸಿಮಡಿಗಳ ಗದ್ದೆಗಳು, ಮೆಕ್ಕೆಜೋಳದ ಬೆಳೆ, ಶುಂಠಿ, ಮತ್ತು ಸಿಹಿಗೆಣಸು ಬೆಳೆಗಳು ನೀರಿನಿಂದ ಜಲಾವೃತಗೊಂಡಿವೆ.

ಜಲಾವೃತಗೊಂಡ ನೀರು ಒಂದೆರಡು ದಿನಗಳಲ್ಲಿ ಇಳಿಮುಖಗೊಂಡರೆ ಬೆಳೆಗೆ ತೊಂದರೆಗಳು ಆಗುವುದು ಕಡಿಮೆ, ಆದರೆ ಹೆಚ್ಚು ದಿನಗಳಲ್ಲಿ ನೀರಿಂದ ಮುಳುಗಡೆಗೊಂಡರೆ ಮೆಕ್ಕೆಜೋಳ ಮತ್ತು ಶುಂಠಿ ಕರಗಿ ಹೋಗುತ್ತದೆ ಎಂದು ಜಲಾವೃತಗೊಂಡ ಜಮೀನಿನ ಮಾಲೀಕರಾದ ಕಪೀನಪ್ಪ, ನಾಗಣ್ಣ, ಲೋಕೇಶ್, ದಿವಾಕರ್ ಸಂತೋಷ ಆತಂಕ ವ್ಯಕ್ತಪಡಿಸಿದ್ದಾರೆ.ಚೆಯ್ಯಂಡಾಣೆ: ನಾಪೋಕ್ಲು ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಸಮೀಪದ ಬಲಮುರಿ ಹಾಗೂ ಕಕ್ಕಬ್ಬೆ ನಾಲಡಿ ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿ ನಷ್ಟ ಉಂಟಾಗಿದೆ.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ನಿವಾಸಿ ಕೆ.ಎಸ್. ಪೂವಣ್ಣ ಎಂಬುವವರ ಮನೆಯ ಮೇಲ್ಛಾವಣಿಯ ಹೆಂಚು ಹಾಗೂ ಶೀಟ್‌ಗಳು ಭಾರೀ ಗಾಳಿ ಮಳೆಗೆ ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ.

ಬಲಮುರಿ ಗ್ರಾಮದ ನಿವಾಸಿ ಈರ ಎಂಬವರ ಮನೆಯ ಮೇಲ್ಛಾವಣಿಯ ಶೀಟ್‌ಗಳು ಗಾಳಿ ಮಳೆಗೆ ಹಾರಿ ಹೋಗಿದ್ದು ನಷ್ಟ ಉಂಟಾಗಿದೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.