*ಗೋಣಿಕೊಪ್ಪ, ಜು. ೨೫: ಮಣಿಪುರದಲ್ಲಿ ಮಹಿಳೆಯರ ಮೇಲಿನ ನಡೆದ ಅಮಾನವಿಯ ಕೃತ್ಯವನ್ನು ಖಂಡಿಸಿ ಸೋಮವಾರ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.

ಈ ಹೇಯ್ಯ ಘಟನೆಗೆ ಕಾರಣರಾದವರಿಗೆ ಮರಣದಂಡನೆ ವಿಧಿಸಬೇಕೆಂದು ರಾಷ್ಟçಪತಿಗೆ ಮನವಿ ಪತ್ರವನ್ನು ವೃತನೀರಿಕ್ಷಕ ವೆಂಕಟರಾಜು ಅವರಿಗೆ ಸಲ್ಲಿಸುವ ಮೂಲಕ ಒತ್ತಾಯಿಸಿತು. ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು.

ನಂತರ ಮಾತನಾಡಿದ ಸಂಚಾಲಕ ಪರಶುರಾಮ್ ಅವರು, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿ, ಅತ್ಯಾಚಾರ, ಕೊಲೆ ಮಾಡಿ, ದೌರ್ಜನ್ಯ ನಡೆಸಿ, ಪೈಶಾಚಿಕ ಕೃತ್ಯ ನಡೆಸಲಾಗಿದೆ. ಇದು ಪುರುಷ ಸಮಾಜ ತಲೆತಗ್ಗಿಸುವ ವಿಚಾರ. ಇಡೀ ಭಾರತ ದೇಶಕ್ಕೆ ಕಳಂಕ ತಂದ ಕೃತ್ಯವಾಗಿದೆ. ಇಂತಹ ಘಟನೆಗಳನ್ನು ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಬಂಗಾಳದಲ್ಲಿ ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮಾಡಿ ಥಳಿಸಿ ದೌರ್ಜನ್ಯ ಎಸಗಲಾಗಿದೆ. ಅದೇ ರೀತಿ ಬಿಹಾರದಲ್ಲಿ ಬಾಲಕಿ ಮತ್ತು ಶಿಕ್ಷಕನೊಬ್ಬನನ್ನು ಬೆತ್ತಲೆಗೊಳಿಸಿ ಥಳಿಸಿ ದೌರ್ಜನ್ಯ ನಡೆಸಲಾಗಿದೆ. ದಲಿತನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಇತ್ತೀಚೆಗೆ ನಡೆದಿದೆ. ದೇಶದಲ್ಲಿ ಈ ರೀತಿಯಲ್ಲಿ ದಲಿತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದು ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೊಡ್ಡ ದೌರ್ಜನ್ಯವಾಗಿದೆ ಈ ಬಗ್ಗೆ ಕೇಂದ್ರ ಸರಕಾರ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ದಲಿತ ಮುಖಂಡ ಟಿ.ಎನ್. ಗೋವಿಂದಪ್ಪ, ಆಂತರಿಕ ಶಿಸ್ತು ಮತ್ತು ತರಬೇತಿ ವಿಭಾಗದ ಸಂಚಾಲಕ ಸಿಂಗಿ ಸತೀಶ್, ದಲಿತ ನೌಕರ ಮತ್ತು ಕಾರ್ಮಿಕರ ವಿಭಾಗದ ಸಂಚಾಲಕ ರಾಜೇಶ್ ಪಿ.ಬಿ., ಸಾಂಸ್ಕೃತಿಕ ವಿಭಾಗದ ಸಂಚಾಲಕ ಸುಬ್ರಮಣಿ ಸೇರಿದಂತೆ ಹಲವರು ಪ್ರತಿಭಟನೆ ನಿರತರಾಗಿದ್ದರು.