ಮಡಿಕೇರಿ, ಜು. ೨೫: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ೧೯ ಪತ್ರಕರ್ತರು ಸೇರಿದಂತೆ ಒಟ್ಟು ೫೦ ಜನ ರಕ್ತದಾನ ಮಾಡಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹುಣಸೂರಿನ ಕಾವೇರಿ ಆಸ್ಪತ್ರೆ, ಕೊಡಗು ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಉಪಸಮಿತಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರ, ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಪಾಲಿಬೆಟ್ಟದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರ ಉದ್ಘಾಟಿಸಿ ಮಾತನಾಡಿದ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಅಜ್ಜಿನಿಕಂಡ ಶ್ಯಾಮ್ಚಂದ್ರ ಹೇಳಿದರು. ದಾನಗಳ ಪೈಕಿ ರಕ್ತದಾನಕ್ಕೆ ಪ್ರಾಮುಖ್ಯತೆ ಹೆಚ್ಚಿದೆ. ರಕ್ತದಾನ ಶಿಬಿರ ಆಯೋಜಿಸಲು ಪತ್ರಕರ್ತರು ನೇತೃತ್ವ ವಹಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡ ಬಹುದು. ಇದರಿಂದ ಇನ್ನೊಬ್ಬರ ಜೀವ ಉಳಿಸುವುದರೊಂದಿಗೆ ವೈಯಕ್ತಿಕ ಆರೋಗ್ಯ ಕಾಪಾಡಿ ಕೊಳ್ಳಬಹುದೆಂದು ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಲೋಹಿತ್ ಹೇಳಿದರು. ಅಂಗಾAಗ ದಾನ ಮಾಡುವುದರ ಮೂಲಕ ಹಲವರ ಜೀವ ಉಳಿಸುವ ಅವಕಾಶವಿದೆ. ದೇಶದಲ್ಲಿ ಶೇ.೩೦ ಕ್ಕಿಂತ ಹೆಚ್ಚಿನ ಜನರಲ್ಲಿ ರಕ್ತಹೀನತೆ ಇರುತ್ತದೆ. ಆದ್ದರಿಂದ ರಕ್ತದಾನ ಮಾಡುವುದು ಅತ್ಯಗತ್ಯ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ರಕ್ತದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು. ಜಿಲ್ಲಾಸ್ಪತ್ರೆಯಲ್ಲಿ ರಕ್ತ ಇದ್ದರೂ ನೀಡದೇ ಸತಾಯಿಸಲಾಗುತ್ತದೆ. ಆಸ್ಪತ್ರೆಯಲ್ಲಿ ರಕ್ತದಾನ ಮಾಡಲು ಬಂದಾಗ ಸುಲಭವಾಗಿ ರಕ್ತ ಸ್ವೀಕರಿಸುವಂತಾಗ ಬೇಕೆಂದು ಹೇಳಿದರು. ರಕ್ತದಾನ ಮಾಡುವುದು ಕೂಡ ಸಮಾಜ ಸೇವೆ. ರಕ್ತ ನೀಡುವ ಮೂಲಕ ಜೀವ ಉಳಿಸಬಹುದೆಂದು ಪಾಲಿಬೆಟ್ಟದ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಹೇಳಿದರು.
ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಉಪಸಮಿತಿ ಅಧ್ಯಕ್ಷ ವಿ.ಬಿ. ರಿನಿಲ್, ಕಾರ್ಯಕ್ರಮ ಸಂಚಾಲಕರಾಗಿರುವ ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಪುತ್ತಂ ಪ್ರದೀಪ್ ಬಾಲನ್ ಇದ್ದರು. ಬಿ.ಜೆ. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ರೇಖಾ ಗಣೇಶ್ ಪ್ರಾರ್ಥಿಸಿದರು.
ಸನ್ಮಾನ
ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಲೋಹಿತ್, ದಂತ ವೈದ್ಯ ಡಾ. ಜಗದೀಶ್, ನಿವೃತ್ತ ಪೋಸ್ಟ್ ಮಾಸ್ಟರ್ ಕೆ.ರಘು, ೨೭ನೇ ಬಾರಿ ರಕ್ತದಾನ ಮಾಡಿದ ವಿ.ವಿ. ಅರುಣ್ಕುಮಾರ್, ೧೫ನೇ ಬಾರಿ ರಕ್ತದಾನ ಮಾಡಿದ ಟಿ.ಎಂ. ಪ್ರಿಯಾ ಅವರನ್ನು ಸನ್ಮಾನಿಸಲಾಯಿತು.