ಯೋಧನಿದ್ದರೆ ಮಾತ್ರ ದೇಶದ ಬಾಹ್ಯ ಶತ್ರುಗಳಿಂದ ರಾಷ್ಟçದ ರಕ್ಷಣೆ ಸಾಧ್ಯ. ಹಾಗಾಗಿ ಸೇನೆ ಒಂದು ದೇಶದ ಸುಭದ್ರತೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಭಾರತೀಯ ಸೇನೆ ೧೪೨ ರಾಷ್ಟçಗಳ ಪೈಕಿ ೪ನೇ ಶ್ರೇಣಿಯ ಉನ್ನತ ಸೇನೆಯಾಗಿದೆ. ನಮ್ಮ ಸೇನೆಯ ಶೌರ್ಯದ ಪುಟಗಳಲ್ಲಿ ೧೯೯೯ರ ಕಾರ್ಗಿಲ್ ಯುದ್ಧ ಅತಿ ರೋಚಕವೆನಿಸುತ್ತದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ಸೇನೆ ಅಂಜದೆ ಅಳುಕದೆ ರೋಷಾವೇಷದಿಂದ ಹೋರಾಡಿ ವಿಜಯದ ನಗೆ ಬೀರಿದ ರಣ ರೋಚಕ ಅಧ್ಯಾಯವೇ ಕಾರ್ಗಿಲ್ ವಿಜಯ್ ದಿವಸದ ಆಚರಣೆ ಹಿಂದಿರುವ ಇತಿಹಾಸ.

೧೯೯೯ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಐತಿಹಾಸಿಕ ವಿಜಯದ ಸ್ಮರಣಾರ್ಥವಾಗಿ ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಟೈಗರ್ ಹಿಲ್ಸ್ ಹಾಗೂ ಇತರ ಪೋಸ್ಟ್ಗಳನ್ನು ಅಕ್ರಮವಾಗಿ ವಶಪಡಿಸಿಕೊಂಡ ಪಾಕಿಸ್ತಾನಿ ಒಳನುಸುಳುಗಾರರನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ‘ಆಪರೇಷನ್ ವಿಜಯ್' ಮೂಲಕವಾಗಿ ಹೊರ ಹಾಕಿತು. ಈ ಸಶಸ್ತç ಹೋರಾಟವು ಲಡಾಖ್‌ನ ಕಾರ್ಗಿಲ್‌ನಲ್ಲಿ ೬೦ ದಿನಗಳಿಗಿಂತ ಹೆಚ್ಚು ಕಾಲ ನಡೆಯಿತು. ಇದು ಎಂತವರಿಗೂ ತೀರಾ ರಣರೋಮಾಂಚನವಾಗುವ ಪರಿಯಲ್ಲಿ ನಡೆದಿತ್ತು.

೧೯೯೦ ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ತೀವ್ರವಾದ ಉದ್ರಿಗ್ಧತೆ ಏರ್ಪಟ್ಟಿತು. ಅದಕ್ಕೆ ಪ್ರಮುಖ ಎರಡು ಕಾರಣಗಳಿದ್ದವು.

ಮೊದಲನೆಯ ಅಂಶವೆAದರೆ, ಪಾಕಿಸ್ತಾನ ಕಾಶ್ಮೀರದಲ್ಲಿ ಸೇನಾ ಚಟುವಟಿಕೆಗಳನ್ನು ತೀರಾ ವಿಪರೀತವೆಂಬAತೆ ಚುರುಕಾಗಿಸಿತ್ತು.

ಎರಡನೆಯ ಅಂಶವೆAದರೆ, ೧೯೯೮ರಲ್ಲಿ ಭಾರತ ತನ್ನ ಎರಡನೇ ಬಾರಿ ಪರಮಾಣು ಪರೀಕ್ಷೆಯನ್ನು ಮಾಡಿತ್ತು. ಪಾಕಿಸ್ತಾನವೂ ಪರಮಾಣು ಪರೀಕ್ಷೆಯನ್ನು ಮುಗಿಸಿತ್ತು.

ಈ ಎರಡೂ ಕಾರಣಗಳು ಪರಸ್ಪರ ದೇಶಗಳಲ್ಲಿ ಕ್ರೋಧ ಹೆಚ್ಚಿಸಿ, ಉದ್ರಿಗ್ಧತೆ ಉಲ್ಬಣವಾಗುವಂತೆ ಮಾಡಿತ್ತು. ಈ ಉದ್ರಿಗ್ಧ ಪರಿಸ್ಥಿತಿ ಶಾಂತಗೊಳಿಸಿ ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಪಾಕ್ ಜೊತೆಗೆ ಫೆಬ್ರವರಿ ೧೯೯೯ರಲ್ಲಿ ಲಹೋರ್ ಡಿಕ್ಲೇರೇಷನ್‌ಗೆ ಮಾತುಕತೆ ನಡೆಸಿ ಸಹಿ ಹಾಕಿಸಿತ್ತು. ಆದರೆ ಅದರಿಂದ ಯಾವ ಪ್ರಯೋಜವೂ ಆದಂತೆ ಕಾಣಲಿಲ್ಲ. ಪಾಕಿಸ್ತಾನ ಲೈನ್ ಆಫ್ ಕಂಟ್ರೋಲ್ ಬಳಿಗೆ ತನ್ನ ಪಡೆಗಳನ್ನು ರಹಸ್ಯವಾಗಿ ಕಳುಹಿಸುವ ಕುತಂತ್ರಕ್ಕೆ ಕೈ ಹಾಕಿತು. ಇದರ ಹಿಂದೆ ಆಗಿನ ಪಾಕಿಸ್ತಾನದ ಮಿಲಿಟರಿ ಅಧ್ಯಕ್ಷ ಪರ್ವೇಜ್ ಮುಷರಫ್ ಗುಪ್ತ ಆದೇಶವೂ ಇದ್ದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆ ಅತಿಕ್ರಮ ಪ್ರವೇಶ ಮಾಡಿದೆ ಎಂದು ಅಲ್ಲಿನ ಸ್ಥಳೀಯ ಕುರಿಗಾಹಿಗಳು ಭಾರತೀಯ ಸೇನೆಗೆ ಮಾಹಿತಿ ನೀಡಿದಾಗ, ಮೊದಲಿಗೆ ಸಣ್ಣ ಪ್ರಮಾಣದ ಅತಿಕ್ರಮಣ ಇರಬಹುದೆಂದು ಭಾರತ ನಿರ್ಲಕ್ಷಿಸಿತಾದರೂ, ನಂತರ ನೈಜ ಸ್ಥಿತಿಯ ಗಂಭೀರತೆ ಅರಿತು ಭಾರತದ ಸರಕಾರ ೨೦,೦೦೦ ಯೋಧರನ್ನು ಒಳಗೊಂಡ ತಂಡವನ್ನು ಕಳುಹಿಸಿತು. ನಂತರ ನಡೆದ ಕಾರ್ಯಾಚರಣೆಯೇ ‘ಆಪರೇಷನ್ ವಿಜಯ್'.

ಅತ್ಯಂತ ಕಷ್ಟಕರವಾಗಿದ್ದ ಪರಿಸ್ಥಿತಿಯಲ್ಲಿ ಪಾಕಿ ಸೇನೆಯ ಹುಟ್ಟಡಗಿಸಲು ಭಾರತದ ಸೇನೆಯ ಪ್ರತಿ ಯೋಧರು ತಮ್ಮ ಶಕ್ತಿ ಮೀರಿ ಸೆಣೆಸಿದರು. ಪ್ರಾಣ ಪಣಕ್ಕಿಟ್ಟು ದೇಶದ ಸಲುವಾಗಿ ಅಂಜದೆ ಅಳುಕದೆ ಮುನ್ನುಗ್ಗಿ ಶತ್ರು ಪಡೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು.

ನಡೆದ ಘಟನೆಗಳನ್ನು ಕಾಲಾನುಕ್ರಮವಾಗಿ ಗಮನಿಸುವುದಾದರೆ, ಮೇ ೩, ೧೯೯೯: ಕಾರ್ಗಿಲ್ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಸ್ಥಳೀಯ ಕುರಿಗಾಹಿಗಳು ಅಲ್ಲಿ ಪಾಕಿಸ್ತಾನದ ಸೇನೆ ಅತಿಕ್ರಮ ಪ್ರವೇಶ ಮಾಡಿ ಠಿಕಾಣಿ ಹೂಡಿರುವ ಬಗ್ಗೆ ಮಾಹಿತಿಯನ್ನು ಭಾರತೀಯ ಸೇನೆಗೆ ನೀಡಿದರು.

ಮೇ ೫, ೧೯೯೯: ಐದು ಭಾರತೀಯ ಯೋಧರು ಪಾಕಿಸ್ತಾನದ ಸೇನೆಯ ಗುಂಡಿಗೆ ಅಮರರಾದರು.

ಮೇ ೯, ೧೯೯೯: ಪಾಕಿಸ್ತಾನದ ಸೇನಾ ಪಡೆಯು ಸತತವಾಗಿ ಶೆಲ್ ದಾಳಿಯಿಂದ ಭಾರತದ ಶಸ್ತç ಹಾಗೂ ಯುದ್ಧ ಸಲಕರಣೆಗಳನ್ನು ಶೇಖರಿಸಿಟ್ಟ ಗೋದಾಮಿನ ಮೇಲೆ ಹಾನಿ ಉಂಟು ಮಾಡಲು ಶತಾಯ ಗತಾಯ ಪ್ರಯತ್ನಿಸಿತು.

ಮೇ ೧೦, ೧೯೯೯: ಪಾಕಿಸ್ತಾನಿ ಸೇನೆಯ ಯೋಧರು ಹಾಗೂ ಅಧಿಕಾರಿಗಳು ಡ್ರಾಸ್ ಹಾಗೂ ಕಾಕ್ಸರ್ ಸೆಕ್ಟರ್ ಲೈನ್ ಆಫ್ ಕಂಟ್ರೋಲ್ ಪ್ರದೇಶದಲ್ಲಿ ಜಮಾಯಿಸಿತು. ಅದೇ ದಿನ ಭಾರತೀಯ ಸೇನೆಯು ಕೇಂದ್ರ ಸರಕಾರದ ಆದೇಶದ ಮೇರೆಗೆ ‘ಆಪರೇಷನ್ ವಿಜಯ್' ಎಂಬ ಸೇನಾ ಕಾರ್ಯಾಚರಣೆಗೆ ಅಣಿಯಾಯಿತು.

ಮೇ ೨೬, ೧೯೯೯: ಭಾರತೀಯ ವಾಯು ಸೇನೆಯು ವಾಯು ಮಾರ್ಗದ ಮೂಲಕ ದಾಳಿ ಮಾಡಿ, ಅತಿಕ್ರಮಣಕಾರರನ್ನು ಮುಗಿಸಿತು.

ಜೂನ್ ೧, ೧೯೯೯: ಫ್ರಾನ್ಸ್ ಹಾಗೂ ಯು.ಎಸ್.ಎ. ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಪಾಕಿಸ್ತಾನವನ್ನು ಹೊಣೆಯನ್ನಾಗಿ ಮಾಡಿತು.

ಜೂನ್ ೫, ೧೯೯೯: ಭಾರತವು ಪಾಕಿಸ್ತಾನ ಸೇನೆಯ ಕುತಂತ್ರವನ್ನು ಬಹಿರಂಗ ಪಡಿಸಲು ಮುಂದಾಗಿ ಸಂಬAಧಿಸಿದ ದಸ್ತಾವೇಜುಗಳನ್ನು ಬಿಡುಗಡೆ ಮಾಡಿತು.

ಜೂನ್ ೯, ೧೯೯೯: ಭಾರತೀಯ ಸೇನೆಯ ಜವಾನರು ಬಟಾಲಿಕ್ ಸೆಕ್ಟರ್‌ನಲ್ಲಿ ಎರಡು ಸ್ಥಾನಗಳನ್ನು ವಶಪಡಿಸಿಕೊಂಡರು.

ಜೂನ್ ೧೩, ೧೯೯೯: ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್‌ಗೆ ಭೇಟಿ ನೀಡಿದರು. ಅದೇ ದಿನ ಭಾರತೀಯ ಸೇನೆಯು ಟೊಲೊಲಿಂಗ್ ಶಿಖರದ ಮೇಲೆ ಹಿಡಿತ ಸಾಧಿಸಿತು.

ಜುಲೈ ೪, ೧೯೯೯: ಭಾರತೀಯ ಸೇನೆ ಟೈಗರ್ ಹಿಲ್ಸ್ ಪ್ರದೇಶವನ್ನು ಪುನಃ ಸೆಣೆಸಿ ವಶಪಡಿಸಿಕೊಂಡಿತು.

ಜುಲೈ ೫, ೧೯೯೯: ಕಾರ್ಗಿಲ್‌ನಿಂದ ಪಾಕಿಸ್ತಾನಿ ಸೇನೆಯ ವಾಪಸಾತಿಯನ್ನು ನವಾಜ್ ಶರೀಫ್ ಘೋಷಿಸಿದರು.

ಜುಲೈ ೧೨, ೧೯೯೯: ಪಾಕಿಸ್ತಾನದ ಸೈನಿಕರು ಹಿಮ್ಮೆಟ್ಟುವಂತೆ ಒತ್ತಾಯಿಸಲಾಯಿತು.

ಜುಲೈ ೨೬, ೧೯೯೯: ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ಎಲ್ಲಾ ಪ್ರದೇಶಗಳಲ್ಲೂ ತನ್ನ ಹಿಡಿತ ಸಾಧಿಸಿತು. ಎಲ್ಲವನ್ನೂ ವಶಪಡಿಸಿಕೊಂಡು ‘ಆಪರೇಷನ್ ವಿಜಯ್' ಯಶಸ್ವಿಯಾಗಿದೆ ಎಂದು ಘೋಷಿಸಲಾಯಿತು.

‘ಆಪರೇಷನ್ ವಿಜಯ್' ಸೇನಾ ಕಾರ್ಯಾಚರಣೆಯಲ್ಲಿ ಭಾರತದ ಒಟ್ಟು ೫೨೭ ಯೋಧರುಗಳು ವೀರಾವೇಷದಿಂದ ಹೋರಾಡಿ ತಮ್ಮ ಪ್ರಾಣವನ್ನು ರಾಷ್ಟçಕ್ಕಾಗಿ ಅರ್ಪಿಸಿ ಹುತಾತ್ಮರಾದರು.

ಭಾರತದ ಕೆಚ್ಚೆದೆಯ ದಿಟ್ಟ ಯೋಧರು ಪರಮ ಪರಾಕ್ರಮದೊಂದಿಗೆ ದೇಶಕ್ಕಾಗಿ ಸೆಣೆಸಿದರು. ಅವರ ಪೈಕಿ ಪ್ರಮುಖವಾಗಿ ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೆನಡಿಯರ್ ಯೋಗೇಂದ್ರ ಸಿಂಗ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಹಾಗೂ ರೈಫಲ್ ಮ್ಯಾನ್ ಸಂಜಯ್ ಕುಮಾರ್ ಅವರುಗಳಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಪರಂ ವೀರ ಚಕ್ರ ಪದಕ ಲಭಿಸಿತು.

ಈ ದಿನ ಕಾರ್ಗಿಲ್ ದಿವಸವನ್ನು ರಾಷ್ಟಾçದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಮಡಿದ ಯೋಧರಿಗೆ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಬಳಿ ತೆರಳಿ ದೇಶದ ಪ್ರಧಾನಿಗಳು ನಮನ ಸಲ್ಲಿಸುತ್ತಾರೆ. ಕಾರ್ಗಿಲ್ ಜಿಲ್ಲೆಯ ದ್ರಾಸ್ ಎಂಬ ಹಳ್ಳಿಯಲ್ಲಿ ಆಪರೇಷನ್ ವಿಜಯ್‌ನಲ್ಲಿ ಭಾರತಕ್ಕಾಗಿ ಮಡಿದ ಯೋಧರಿಗಾಗಿ ದೊಡ್ಡ ಸ್ಮಾರಕ ಸ್ಥಳವನ್ನು ಈ ಇತಿಹಾಸ ಸಾರಲು ಗೌರವಪೂರ್ವಕವಾಗಿ ನಿರ್ಮಿಸಲಾಗಿದೆ.

- ಡಿ.ಹೆಚ್. ರಜತ್‌ರಾಜ್, ಮಡಿಕೇರಿ. ಮೊ. ೭೪೮೩೨೨೬೨೫೧.